COVID-19 ಪರಿಣಾಮದಿಂದಾಗಿ ಜಾಗತಿಕ ಆರ್ಥಿಕತೆಗೆ ಪೆಟ್ಟು: IMF

2008 ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಕಂಡುಬರುವ ಪ್ರಮಾಣಕ್ಕಿಂತಲೂ ಸುಮಾರು 90 ಶತಕೋಟಿ ಡಾಲರ್ ಉದಯೋನ್ಮುಖ ಮಾರುಕಟ್ಟೆಗಳಿಂದ ಹೊರಬಂದಿವೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗಗೊಂಡಿದೆ.

Written by - Yashaswini V | Last Updated : Apr 4, 2020, 07:28 AM IST
COVID-19 ಪರಿಣಾಮದಿಂದಾಗಿ ಜಾಗತಿಕ ಆರ್ಥಿಕತೆಗೆ ಪೆಟ್ಟು: IMF  title=

ಜೆನೆವಾ: ಜಗತ್ತಿನಾದ್ಯಂತ ಪಸರಿಸಿ ಅಟ್ಟಹಾಸ ಮೆರೆಯುತ್ತಿರುವ ಕೊರೋನಾವೈರಸ್ Covid-19 ನಿಂದಾಗಿ ಜಾಗತಿಕ ಆರ್ಥಿಕತೆಗೂ ಪೆಟ್ಟಾಗಿದ್ದು, 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿಗೆ ಹೋಲಿಸಿದರೆ ಈ ಬಾರಿ ಅದು ಭಯಾನಕವಾಗಿರಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ ಎಚ್ಚರಿಕೆ ನೀಡಿದ್ದಾರೆ. .

ಪ್ರಪಂಚದಾದ್ಯಂತ ತಲ್ಲಣ ಸೃಷ್ಟಿಸಿರುವ ಮಹಾಮಾರಿ ಕೊರೋನಾ ವೈರಸ್ ಬಗ್ಗೆ ಮಾತನಾಡಿರುವ IMF ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ, WHO ಉಲ್ಲೇಖಿಸಿ ಜಾಗತಿಕವಾಗಿ ಇದುವರೆಗೂ 1 ಮಿಲಿಯನ್‌ಗಿಂತಲೂ ಹೆಚ್ಚು COVID-19 ಪ್ರಕರಣಗಳು ವರದಿಯಾಗಿದ್ದು, 50,000ಕ್ಕೂ ಹೆಚ್ಚು ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ  ಸೋಂಕು ಪೀಡಿತರ ಜೀವಗಳನ್ನು ಉಳಿಸಲು ಮತ್ತು ಜೀವನೋಪಾಯವನ್ನು ರಕ್ಷಿಸಲು ಪ್ರತಿಯೊಬ್ಬರೂ ಕೈ ಜೋಡಿಸಬೇಕಾಗಿದೆ ಎಂದು ಕರೆ ನೀಡಿದರು. 

ಕರೋನಾಗೆ ಬಲಿಯಾಗುತ್ತಿರುವ ಸಂಖ್ಯೆ ಹೆಚ್ಚಳ, ಆತಂಕಕಾರಿ ಮಾಹಿತಿ ಬಿಚ್ಚಿಟ್ಟ WHO

ಆರ್ಥಿಕತೆ ರಕ್ಷಣೆಗಾಗಿ ಅಗತ್ಯ ನೆರವು ನೀಡಲು ನಿರ್ಧರಿಸಿರುವುದಾಗಿ ತಿಳಿಸಿದ ಅವರು, ಈ ಉಲ್ಬಣಕ್ಕೆ ಅನುಗುಣವಾಗಿ ಐಎಂಎಫ್ ಒಟ್ಟು 1 ಟ್ರಿಲಿಯನ್ ಯುಎಸ್ ಡಾಲರ್ ಆರ್ಥಿಕ ನೆರವು ನೀಡುತ್ತಿದೆ ಎಂದು ಮಾಹಿತಿ ನೀಡಿದರು.

2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಕಂಡುಬರುವ ಪ್ರಮಾಣಕ್ಕಿಂತ ಈಗ ಸುಮಾರು 90 ಶತಕೋಟಿ ಡಾಲರ್ ಮಾರುಕಟ್ಟೆಗಳಿಂದ ಹೊರಹೋಗಿದೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗಗೊಳಿಸಿದ ಜಾರ್ಜೀವಾ, ಸಾಂಕ್ರಾಮಿಕ ರೋಗದಿಂದ ತೀವ್ರವಾಗಿ ತತ್ತರಿಸುತ್ತಿರುವ ಉದಯೋನ್ಮುಖ ಮಾರುಕಟ್ಟೆಗಳಿಗೆ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಿಗೆ ಐಎಂಎಫ್ ತುರ್ತು ಹಣಕಾಸು ಸಹಾಯವನ್ನು ಒದಗಿಸಲಿದೆ ಎಂದರು.

ಕರೋನಾ ಎದುರಿಸಲು 'ಮೋದಿ ಮಾದರಿ' ಯಶಸ್ವಿ! WHO ಮಹತ್ವದ ಮಾಹಿತಿ

90ಕ್ಕೂ ಹೆಚ್ಚು ದೇಶಗಳು ತುರ್ತು ಹಣಕಾಸಿನ ನೆರವಿಗಾಗಿ ಐಎಂಎಫ್‌ಗೆ ವಿನಂತಿ ಮಾಡಿಕೊಂಡಿವೆ ಎಂದು ತಿಳಿಸಿದ ಜಾರ್ಜೀವಾ, ತಮ್ಮ ದೇಶಗಳ ಆರೋಗ್ಯ ಕಾರ್ಯಕರ್ತರಿಗೆ ಸಂಬಳ ನೀಡಲು ಈ ಹಣಕಾಸು ನೆರವನ್ನು ಬಳಸಿಕೊಳ್ಳುವಂತೆ, ಆರೋಗ್ಯ ಸೌಲಭ್ಯಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆಯೆ ಎಂದು ಖಚಿತಪಡಿಸಿಕೊಳ್ಳುವಂತೆ ಹಾಗೂ ದುರ್ಬಲ ಜನರು ಮತ್ತು ಸಂಸ್ಥೆಗಳಿಗೆ ಬೆಂಬಲ ನೀಡುವಂತೆ ಕರೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ದಿವಾಳಿತನದ ಅಲೆ ಹೆಚ್ಚಾಗಲಿದ್ದು ನೌಕರಿ ಕಳೆದುಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಬಹುದು ಎಂದು ಅವರು ಎಚ್ಚರಿಸಿದರು.

Trending News