ಕಾಟ್ಮಂಡು: ನೇಪಾಳದಲ್ಲಿ 122 ಚೀನಾ ನಾಗರಿಕರನ್ನು ಬಂಧಿಸಲಾಗಿದೆ. ಸೈಬರ್ ಕ್ರೈಂ ಹಾಗೂ ಬ್ಯಾಂಕ್ ಗಳಿಗೆ ವಂಚನೆ ಎಸಗಿದ ಆರೋಪ ಇವರ ಮೇಲಿದೆ. ಈ 122 ನಾಗರಿಕರು ಟೂರಿಸ್ಟ್ ವಿಸಾ ಮೇಲೆ ನೇಪಾಳಕ್ಕೆ ಬಂದ ಇವರು, ಸೈಬರ್ ಕ್ರೈಂ ಹಾಗೂ ಬ್ಯಾಂಕ್ ವಂಚನೆಗಳಲ್ಲಿ ನಿರತರಾಗಿದ್ದರು ಎನ್ನಲಾಗಿದೆ. ಈ ಎಲ್ಲ ನಾಗರಿಕರ ಮೇಲೆ ಕ್ಯಾಶ್ ಮಶೀನ್ ಗಳನ್ನು ಹ್ಯಾಕ್ ಮಾಡಿದ ಆರೋಪವಿದೆ. ವಿಶೇಷವೆಂದರೆ ಚೀನಾ ಕೂಡ ತಮ್ಮ ಈ ನಾಗರಿಕರ ಬಂಧನದ ಕುರಿತು ಸ್ಪಷ್ಟನೆ ನೀಡಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಚೀನಾ ನೇಪಾಳದ ಅಧಿಕಾರಿಗಳ ವತಿಯಿಂದ ನಡೆಸಲಾಗಿರುವ ಈ ಕಾರ್ಯಾಚರಣೆಯಲ್ಲಿ ಚೀನಾದ ಅಧಿಕಾರಿಗಳೂ ಕೂಡ ಸಾಥ್ ನೀಡಿದ್ದಾರೆ ಎಂದಿದೆ. ಕಟ್ಮಂಡುವಿನ ಹೊರವಲಯದಲ್ಲಿ ವಿವಿಧ ಮನೆಗಳ ಮೇಲೆ ಸೋಮವಾರ ನಡೆಸಲಾದ ದಾಳಿಯಲ್ಲಿ ಸುಮಾರು 500ಕ್ಕೂ ಅಧಿಕ ಲ್ಯಾಪ್ ಟಾಪ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕಟ್ಮಂಡು ಪೊಲೀಸ್ ಮುಖ್ಯಸ್ಥ ಉತ್ತಮ್ ಸುಬೇದಿ, ಆರೋಪಿಗಳು ಆರ್ಥಿಕ ಅಪರಾಧಗಳನ್ನು ಎಸಗಿದ್ದಾರೆ ಹಾಗೂ ಕ್ಯಾಶ್ ಮಶೀನ್ ಗಳನ್ನು ಹ್ಯಾಕ್ ಮಾಡಿದ್ದಾರೆ ಎಂದಿದ್ದು, "ಇಷ್ಟೊಂದು ವಿದೇಶಿ ನಾಗರಿಕರನ್ನು ಸಂದಿಗ್ಧ ಅಪರಾಧ ಚಟುವಟಿಕೆಗಳ ಕಾರಣ ವಶಕ್ಕೆ ಪಡೆಯಲಾಗಿದೆ" ಎಂದಿದ್ದಾರೆ.
ಈ ಕಾರ್ಯಾಚರಣೆಯ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ, ಗೆಂಗ್ ಶುವಾಂಗ್, "ತಮಗೆ ಮಾಹಿತಿ ಇರುವ ಪ್ರಕಾರ ಚೀನಾದ ನಾಗರಿಕರು ದೇಶದ ಗಡಿಯಾಚೆ ಸೈಬರ್ ವಂಚನೆಗಳಲ್ಲಿ ಶಾಮೀಲಾಗಿರುವ ಸಾಧ್ಯತೆ ಇದ್ದು, ಈ ಕುರಿತು ತಾವು ತನಿಖೆ ನಡೆಸುತ್ತಿದೇವೆ" ಎಂದಿದ್ದಾರೆ.
ಅಷ್ಟೇ ಅಲ್ಲ ಈ ಕಾರ್ಯಾಚರಣೆ ಚೀನಾ ಹಾಗೂ ನೇಪಾಳದ ಅಧಿಕಾರಿಗಳ ಜಂಟಿ ತಂಡ ನಡೆಸಿದ್ದು, ಗಡಿಯಾಚೆಗಿನ ಅಪರಾಧಗಳ ವಿರುದ್ಧ ಹೋರಾಡಲು ಹಾಗೂ ಉಭಯ ದೇಶಗಳ ಮೈತ್ರಿಪೂರ್ಣ ಸಂಬಂಧಗಳ ವೃದ್ಧಿಗೆ ನೇಪಾಳಕ್ಕೆ ಸಹಯೋಗ ನೀಡುವುದಾಗಿ ಶುವಾಂಗ್ ಹೇಳಿದ್ದಾರೆ.