ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಪ್ರಯಾಣಿಕರ ರೈಲು ಮತ್ತು ಸರಕು ರೈಲು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು 40 ಮಂದಿ ಗಾಯಗೊಂಡಿದ್ದಾರೆ ಎಂದು ಸುದ್ದಿಸಂಸ್ಥೆ ಐಎಎನ್ಎಸ್ ವರದಿ ಮಾಡಿದೆ.
ವಾಲ್ಹಾರ್ ನಿಲ್ದಾಣದಲ್ಲಿ ಬೆಳಿಗ್ಗೆ 4 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಪ್ರಯಾಣಿಕರ ರೈಲು ಸೇವಾ ಮಾರ್ಗಕ್ಕೆ ಪ್ರವೇಶಿಸುವ ಸಂದರ್ಭದಲ್ಲಿ ಸರಕು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ರೈಲ್ವೆ ಸಚಿವಾಲಯದ ವಕ್ತಾರ ಅಲಿ ನವಾಜ್ ಮಲಿಕ್ ಎಎಫ್ಇ ನ್ಯೂಸ್ ಗೆ ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ, ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೇ ಎಂದು ಮಲಿಕ್ ಹೇಳಿದರು.
ಅಪಘಾತಕ್ಕೆ "ಮಾನವ ನಿರ್ಲಕ್ಷ್ಯ" ಮತ್ತು "ಸಿಗ್ನಲಿಂಗ್ನಲ್ಲಿನ ಸಮಸ್ಯೆಗಳೇ" ಮುಖ್ಯ ಕಾರಣ ಎಂದು ವಕ್ತಾರರು ಹೇಳಿದ್ದಾರೆ.
ಅಪಘಾತದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್, ಭವಿಷ್ಯದಲ್ಲಿ ಇಂತಹ ರೀತಿಯ ಘಟನೆಗಳು ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕೆಂದು ಕರೆ ನೀಡಿದ್ದಾರೆ.
"ಸಾದಿಕಾಬಾದ್ನಲ್ಲಿ ಸಂಭವಿಸಿರುವ ರೈಲು ಅಪಘಾತದ ಬಗ್ಗೆ ಬೇಸರವಾಗಿದೆ. ಸಂತ್ರಸ್ತರ ಕುಟುಂಬಗಳಿಗೆ ನನ್ನ ಸಂತಾಪ ಮತ್ತು ಗಾಯಾಳುಗಳ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುವೆ. ರೈಲ್ವೆ ಮೂಲಸೌಕರ್ಯಗಳ ದಶಕಗಳ ನಿರ್ಲಕ್ಷ್ಯವನ್ನು ಸುಧಾರಿಸಲು, ತುರ್ತಾಗಿ ಸುರಕ್ಷತಾ ಕ್ರಮಗಳನ್ನು ಕೈಕೊಳ್ಳಲು ರೈಲ್ವೆ ಸಚಿವರಿಗೆ ತಿಳಿಸಿದ್ದೇನೆ" ಎಂದು ಖಾನ್ ತಮ್ಮ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.
Saddened to learn of train accident in Sadiqabad. My condolences to the victims families and prayers for the speedy recovery of the injured. Have asked Railways Minister to take emergency steps to counter decades of neglect of railway infrastructure & ensure safety standards.
— Imran Khan (@ImranKhanPTI) July 11, 2019