ಸದ್ಯ ಇಡೀ ಜಗತ್ತು ಕರೋನಾ ವೈರಸ್‌ನ ಹಿಡಿತದಲ್ಲಿದೆ ಮತ್ತು ಪ್ರತಿ ದೇಶವೂ ಅದಕ್ಕೆ ಪರಿಹಾರವನ್ನು ಕಂಡು ಹಿಡಿಯುವಲ್ಲಿ ನಿರತವಾಗಿದೆ. ಈ ವೈರಸ್ ಚಿಕಿತ್ಸೆಯಲ್ಲಿ ಯಾವುದೇ ದೇಶವು ಇದುವರೆಗೆ ಯಾವುದೇ ದೊಡ್ಡ ಯಶಸ್ಸನ್ನು ಸಾಧಿಸಿಲ್ಲವಾದರೂ, ಆಸ್ಟ್ರೇಲಿಯಾದ ಸಂಶೋಧಕರು ಈ ವೈರಸ್‌ನ ಚಿಕಿತ್ಸೆಯ ಬಗ್ಗೆ ಗಂಭೀರ ಹೇಳಿಕೆಯನ್ನು ನೀಡಿದ್ದಾರೆ.
ಹೌದು, ಈ ಕುರಿತು ಹೇಳಿಕೆ ನೀಡಿರುವ ಆಸ್ಟ್ರೇಲಿಯಾದ ಸಂಶೋಧಕರೋಬ್ಬರು, ತಲೆಯಲ್ಲಿ ಕಂಡು ಬರುವ ಹೇನುಗಳನ್ನೂ ಕೊಳ್ಳಲು ಬಳಸಲಾಗುವ ಔಷಧಿಯನ್ನು ಕೊರೊನಾ ಚಿಕಿತ್ಸೆಗೆ ಬಳಸಬಹುದು ಎಂದು ಹೇಳಿದ್ದಾರೆ.
'ದಿ ಸನ್' ಎಂಬ ಇಂಗ್ಲಿಷ್ ಪತ್ರಿಕೆಯಲ್ಲಿ ಪ್ರಕಟವಾದ ಒಂದು ವರದಿಯ ಪ್ರಕಾರ, ಬಯೋಮೆಡಿಸಿನ್ ಡಿಸ್ಕವರಿ ಸಂಸ್ಥೆಯ ಡಾ. ಕೇಯ್ಲಿ ವ್ಯಾಗ್‌ಸ್ಟಾಫ್ ಅವರು ಕೇವಲ 48 ಗಂಟೆಗಳಲ್ಲಿ ಹೇನು ನಿವಾರಣೆಗೆ ಬಳಸಲಾಗುವ ಈ ಔಷಧಿ ಕರೋನಾವನ್ನು ಸಂಪೂರ್ಣವಾಗಿ ತೊಡೆದು ಹಾಕುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಡಾ. ವಾಗ ಸ್ಟಾಫ್, ಈ ಔಷಧಿಯಲ್ಲಿ ಇವರ್ಮ್ಯಾಕ್ಟೀನ್ ಎಂಬ ರಾಸಾಯನಿಕ ಬಳಸಲಾಗುತ್ತದೆ. ಈ ಔಷಧಿಯ ಒಂದು ಡೋಸ್ ಕೊರೊನಾ ವೈರಸ್ ಅನ್ನು ನಾಶಪಡಿಸುತ್ತದೆ ಎಂದು ಸಂಶೋಧನೆಯಿಂದ ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲ ಔಷಧಿ ನೀಡಿದ ಆರಂಭದಿಂದ ಕೇವಲ 24ಗಂಟೆಗಳ ಅವಧಿಯಲ್ಲಿ ಇದು ಶರೀರದಲ್ಲಿರುವ ಕೊರೊನಾ ವೈರಸ್ ಅನ್ನು ನಾಶಪಡಿಸುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಈ ಸಂಶೋಧನಾ ವರದಿ ಆಸ್ಟ್ರೇಲಿಯಾದ ಆಂಟಿ ವೈರಲ್ ಪತ್ರಿಕೆಯಲ್ಲಿಯೂ ಕೂಡ ಪ್ರಕಟವಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಈ ಮಹಾಮಾರಿಗೆ ಯಾವುದೇ ಚಿಕಿತ್ಸೆ ಲಭ್ಯವಿಲ್ಲ. ಎಲ್ಲಿಯವರೆಗೆ ಕೊರೊನಾ ವೈರಸ್ ಗೆ ಲಸಿಕೆ ಸಿದ್ಧವಾಗುವುದಿಲ್ಲವೋ ಅಲ್ಲಿಯವರೆಗೆ ಈ ಔಷಧಿಯನ್ನು ಕೊರೊನಾ ವೈರಸ್ ಚಿಕಿತ್ಸೆಗಾಗಿ ಬಳಸಬಹುದಾಗಿದೆ ಎಂದು ಡಾ. ವಾಗ್ಸ್ಟಾಫ್ ತಮ್ಮ ಅಧ್ಯಯನದ ಕುರಿತು ಹೇಳಿದ್ದಾರೆ. ಏಕೆಂದರೆ ಆಂಟಿ ಪ್ಯಾರಾಸೈಟಿಕ್ ಔಷಧಿ ಪರಾವಲಂಭಿ ಜೀವಾಣುವಿನಿಂದ ಉಂಟಾಗುವ ಕಾಯಿಲೆಯನ್ನು ಗುಣಪಡಿಸುತ್ತದೆ.
ಈ ಕುರಿತು ವಿಶ್ವಾಸ ವ್ಯಕ್ತಪಡಿಸಿರುವ ವೈದ್ಯರು, ಈ ಪರಾವಲಂಭಿ ನಾಶಕ ಔಷಧಿಯನ್ನು HIV, ಡೆಂಗ್ಯೂ, ಇನ್ಫ್ಲುಯೆನ್ಸ್ ಹಾಗೋ ಝೀಕಾ ವೈರಸ್ ಚಿಕಿತ್ಸೆಗೂ ಕೂಡ ಪರಿಣಾಮಕಾರಿಯಾಗಿದೆ ಎಂದು ಡಾ. ವಾಗ ಸ್ಟಾಫ್ ಹೇಳಿದ್ದಾರೆ.
ಕೊರೊನಾ ವೈರಸ್ ಕಾರಣ ಇಡೀ ವಿಶ್ವಾದ್ಯಂತ ಲಕ್ಷಾಂತರ ಜನರು ಸೊಂಕಿತರಾಗಿದ್ದಾರೆ. ಇನ್ನೊಂದೆಡೆ ಸುಮಾರು 65 ಸಾವಿರಕ್ಕೂ ಅಧಿಕ ಜನರು ಈ ಮಾರಕ ಕಾಯಿಲೆಗೆ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂಬುದು ಇಲ್ಲಿ ಗಮನಾರ್ಹ.