ಭಾರತ ಬೇರೆ ಅಲ್ಲ, ರಷ್ಯಾ ಬೇರೆಯಲ್ಲ. ಎರಡೂ ದೇಶಗಳು ಅಣ್ಣ-ತಮ್ಮನ ಥರ. ಭಾರತಕ್ಕೆ ಸ್ವತಂತ್ರ ಬಂದ ದಿನದಿಂದಲೂ ರಷ್ಯಾ ಉತ್ತಮ ಸಂಬಂಧ ಉಳಿಸಿಕೊಂಡಿದೆ. ಭಾರತ ಕೂಡ ರಷ್ಯಾ ಜೊತೆಗಿನ ನಂಟು ಬಿಟ್ಟುಕೊಡಲು ಸಿದ್ಧವಿಲ್ಲ. ಆದರೂ ಇದೇ ಮೊಟ್ಟ ಮೊದಲ ಬಾರಿಗೆ ರಷ್ಯಾ ವಿರುದ್ಧ ಭಾರತ ವಿಶ್ವಸಂಸ್ಥೆಯಲ್ಲಿ ಮತ ಹಾಕಿದ್ದೇಕೆ..? ಈ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಹಾಗಾದರೆ ಇದು ಕೂಡ ಭಾರತದ ಚಾಣಾಕ್ಷನ ನಡೆ ಯಾಕಾಗಿರಬಾರದು..? ಎಂಬ ಚರ್ಚೆ ಶುರುವಾಗಿದೆ. ಈ ಕುರಿತು ಒಂದು ಡೀಟೇಲ್ಸ್ ಓದೋಣ ಬನ್ನಿ.
ಭಾರತಕ್ಕೆ ಇಡೀ ಜಗತ್ತಿನಲ್ಲೇ ಅತ್ಯಂತ ನಂಬಿಕಸ್ತ ದೋಸ್ತ್ ಅಂದರೆ ರಷ್ಯಾ ಮಾತ್ರ. ಯಾಕಂದ್ರೆ ಎಷ್ಟೋ ಬಾರಿ ಅಮೆರಿಕ ನಮ್ಮ ಬೆನ್ನಿಗೆ ಚೂರಿ ಹಾಕಿದೆ, ಯುರೋಪ್ ರಾಷ್ಟ್ರಗಳನ್ನ ಕೂಡ ನಂಬಲು ಸಾಧ್ಯವೇ ಇಲ್ಲ. ನೆರೆಯ ಚೀನಾ ಕೂಡ ಹೀಗೆ ಕುತಂತ್ರ ಬುದ್ಧಿ ತೋರಿಸುತ್ತಿದೆ. ಆದ್ರೆ ಸಂಕಷ್ಟದ ಸಂದರ್ಭದಲ್ಲಿ ಭಾರತದ ಬೆನ್ನಿಗೆ ನಿಂತಿರುವುದು ರಷ್ಯಾ ಮಾತ್ರ ಎಂಬುದು ಗಮನಾರ್ಹ.
ಮತ ಹಾಕಿದ್ದೇಕೆ..?
ಅಂದಹಾಗೆ ಈ ಬಾರಿ ಉಕ್ರೇನ್‌ಗೆ 31ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ. ಈ ಹೊತ್ತಲ್ಲೇ ಉಕ್ರೇನ್-ರಷ್ಯಾ ಯುದ್ಧಕ್ಕೆ 6 ತಿಂಗಳು ತುಂಬಿದೆ. ಹೀಗಾಗಿಯೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವಿಶೇಷ ಸಭೆ ಆಯೋಜಿಸಿತ್ತು. ಈ ವಿಶೇಷ ಸಭೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಎಂಟ್ರಿ ಕೊಡುವ ಬಗ್ಗೆ ಚರ್ಚೆ ಶುರುವಾಯಿತು. ಝೆಲೆನ್ಸ್ಕಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿ ಎಂದು ಅಮೆರಿಕ ಬೆಂಬಲಿತ ರಾಷ್ಟ್ರಗಳು ತಗಾದೆ ತೆಗೆದವು. ಕಡೆಗೆ ಅನಿವಾರ್ಯವಾಗಿ ಮತದಾನದ ಮೊರೆ ಹೋಯಿತು ವಿಶ್ವಸಂಸ್ಥೆ.
ಭದ್ರತಾ ಮಂಡಳಿಯಲ್ಲಿ ಮತ ಹಾಕುವ ಪ್ರಕ್ರಿಯೆಗೆ ಚಾಲನೆ ಸಿಕ್ಕಾಗ ಒಂದು ಕ್ಷಣ ಸಂಚಲನ ಸೃಷ್ಟಿಯಾಗಿತ್ತು. ವಿಶ್ವಸಂಸ್ಥೆ ಭದ್ರತಾ ಮಂಡಳಿ ಒಟ್ಟು 15 ರಾಷ್ಟ್ರ ಇದ್ದರೆ, ಈ ಪೈಕಿ 5 ರಾಷ್ಟ್ರಗಳಿಗೆ ಮಾತ್ರ ಖಾಯಂ ಸದಸ್ಯತ್ವ ಇದೆ. ಖಾಯಂ ರಾಷ್ಟ್ರಗಳಿಗೆ ಇರುವಷ್ಟು ಪವರ್ ಖಾಯಂ ಅಲ್ಲದ ತಾತ್ಕಾಲಿಕ ಸದಸ್ಯತ್ವದ ರಾಷ್ಟ್ರಗಳಿಗೆ ಇರುವುದಿಲ್ಲ. ಹೀಗೆ ತಾತ್ಕಾಲಿಕ ಸದಸ್ಯತ್ವದ 10 ರಾಷ್ಟ್ರಗಳಲ್ಲಿ ಭಾರತ ಕೂಡ ಒಂದು.
ಇದನ್ನೂ ಓದಿ: ಸೆಪ್ಟೆಂಬರ್ 12 ರಿಂದ 10 ದಿನಗಳ ಕಾಲ ರಾಜ್ಯ ವಿಧಾನಮಂಡಲ ಅಧಿವೇಶನ
ಭದ್ರತಾ ಮಂಡಳಿ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಝೆಲೆನ್ಸ್ಕಿ ಪರ ಮತ್ತು ವಿರುದ್ಧ ಮತದಾನ ನಡೆದಾಗ ರಷ್ಯಾ ಸಹಜ ವಿರೋಧಿಸಿತು. ಆದರೆ ಭಾರತ ವ್ಯತಿರಿಕ್ತವಾಗಿ ಮತ ಚಲಾಯಿಸಿ, ಉಕ್ರೇನ್ ಅಧ್ಯಕ್ಷ ಭಾಗವಹಿಸಬಹುದೆಂಬ ನಿರ್ಧಾರ ತಿಳಿಸಿತು. ಇದು ಚರ್ಚೆಗೆ ಕಾರಣವಾಗುವ ಜೊತೆ ಜೊತೆಗೆ, ಜಾಗತಿಕ ರಾಜಕೀಯ ವಲಯದಲ್ಲೂ ಭಾರಿ ಸಂಚಲನ ಸೃಷ್ಟಿಸಿದೆ. ಹಾಗಾದ್ರೆ ಭಾರತ, ರಷ್ಯಾ ವಿರುದ್ಧ ವಿಶ್ವಸಂಸ್ಥೆಯಲ್ಲಿ ಇದೇ ಮೊದಲ ಬಾರಿಗೆ ಮತ ಹಾಕೋದಕ್ಕೆ ಕಾರಣವೇನು? ಯಾವೆಲ್ಲಾ ಚರ್ಚೆಗಳು ಭಾರತ ನಡೆ ಕುರಿತು ನಡೆಯುತ್ತಿವೆ? ಇದೆಲ್ಲವನ್ನೂ ಮುಂದೆ ತಿಳಿಯೋಣ.
1) ಅನಿವಾರ್ಯ ಪರಿಸ್ಥಿತಿ
ಕೆಲ ತಿಂಗಳ ಹಿಂದೆ ರಷ್ಯಾ & ಉಕ್ರೇನ್ ಯುದ್ಧ ಸಂಬಂಧ ವಿಶ್ವಸಂಸ್ಥೆಯಲ್ಲಿ ವಾಗ್ದಂಡನೆ ನಡೆದಾಗ ಭಾರತ ಯಾರ ಪರವೂ ಮತಹಾಕದೆ ತಟಸ್ಥವಾಗಿತ್ತು. ಆದರೆ ಈಗ ಪರಿಸ್ಥಿತಿ ಆಶಾದಾಯಕ ಅನಿಸಲಿಲ್ಲ. ಏಕೆಂದರೆ ಪ್ರಜಾಪ್ರಭುತ್ವ ವಾದಿ ರಾಷ್ಟ್ರವು, ಯಾವುದೇ ವ್ಯಕ್ತಿಗೆ ಮುಕ್ತವಾಗಿ ಮಾತನಾಡಲು ಅವಕಾಶ ನೀಡಬೇಕು. ಇದು ಬಿಟ್ಟು ಉಕ್ರೇನ್ ಅಧ್ಯಕ್ಷರು ಮಾತನಾಡಬಾರದು ಎಂದು ಭಾರತ ವಿರೋಧಿಸಲು ಆಗದು. ಹಾಗೇ ತಟಸ್ಥವಾಗಿ ಉಳಿದರೆ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಪೆಟ್ಟು ಬೀಳಬಹುದು. ಇದೇ ಅನಿವಾರ್ಯತೆಗೆ ಸಿಲುಕಿ ಭಾರತ ಮತ ಹಾಕಿರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ. ಮತ್ತೊಂದು ಕಡೆ ಚೀನಾ ಈ ಬಾರಿಯೂ ತಟಸ್ಥವಾಗಿ ಉಳಿದು ಎಸ್ಕೇಪ್ ಆಗಿದೆ.
2) ಅಮೆರಿಕದ ವಿರೋಧ
ವಿಶ್ವಸಂಸ್ಥೆಯಲ್ಲಿ ಈ ಹಿಂದೆ ವಾಗ್ದಂಡನೆ ನಡೆದಾಗ ಭಾರತ ತಟಸ್ಥವಾಗಿದ್ದ ಹಿನ್ನೆಲೆಯಲ್ಲಿ ಅಮೆರಿಕ ಕೊತ ಕೊತ ಕುದಿಯುತ್ತಿದೆ. ಹಾಗೇ ನ್ಯಾಟೋ ಕೂಡ ಭಾರತದ ಬಗ್ಗೆ ಈ ವಿಚಾರದಲ್ಲಿ ಅಸಮಾಧಾನ ಹೊಂದಿದೆ. ಹೀಗಾಗಿಯೇ ಈ ಬಾರಿ ಭಾರತ ಆಶ್ಚರ್ಯಕರ ನಿರ್ಧಾರ ಕೈಗೊಂಡು ರಷ್ಯಾ ಮಾತಿಗೆ ಒಪ್ಪದೇ ವಿರುದ್ಧವಾಗಿ ಮತಹಾಕಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಪಾಶ್ಚಿಮಾತ್ಯರ ವಿರುದ್ಧ ಪದೇ ಪದೆ ನಿರ್ಧಾರ ಕೈಗೊಳ್ಳುವುದು ಭಾರತದ ಭವಿಷ್ಯಕ್ಕೆ ಮಾರಕ ಆದರೂ ಆಗಬಹುದೆ ಲೆಕ್ಕಾಚಾರ ಇರಬಹುದು.
3) ವಾಣಿಜ್ಯ ಸಂಬಂಧ
ಇದೆಲ್ಲದರ ಮಧ್ಯೆ ಭಾರತಕ್ಕೆ ರಷ್ಯಾಗಿಂತ ಹೆಚ್ಚಾಗಿ ಅಮೆರಿಕ & ನ್ಯಾಟೋ ಸದಸ್ಯ ರಾಷ್ಟ್ರಗಳ ಜೊತೆ ಉತ್ತಮ ವ್ಯಾಪಾರ ಸಂಬಂಧವಿದೆ. ಹೀಗಾಗಿಯೇ ಅವರ ವಿರೋಧ ಕಟ್ಟಿಕೊಳ್ಳಲು ಆಗುವುದಿಲ್ಲ. ಅಮೆರಿಕ & ನ್ಯಾಟೋ ತಂಡ ಉಕ್ರೇನ್ ಪರವಾಗಿ ನಿಂತಿರುವಾಗ ಪದೇಪದೆ ಭಾರತ ತಟಸ್ಥವಾಗಿರಲು ಸಾಧ್ಯ ಇಲ್ಲ. ಅಥವಾ ಅಮೆರಿಕ & ನ್ಯಾಟೋ ನಿರ್ಧಾರದ ವಿರುದ್ಧ ನಿಲ್ಲಲು ಆಗಲ್ಲ. ಇದರಿಂದ ಲಕ್ಷಾಂತರ ಕೋಟಿ ರೂಪಾಯಿ ವ್ಯಾಪಾರ & ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಹೀಗಾಗಿಯೇ ಭಾರತ ಮೊದಲ ಬಾರಿಗೆ ರಷ್ಯಾ ವಿರುದ್ಧ ಮತ ಚಲಾಯಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
4) ರಷ್ಯಾಗೆ ನಷ್ಟವಿಲ್ಲ
ಮತ್ತೊಂದು ಪ್ರಮುಖ ಅಂಶವನ್ನು ಗಮನಿಸುವುದಾದರೆ, ವಿಶ್ವಸಂಸ್ಥೆಯಲ್ಲಿ ಹಿಂದೆ ವಾಗ್ದಂಡನೆ ನಡೆದಾಗ ಭಾರತ ತಟಸ್ಥವಾಗಿದ್ದಕ್ಕೆ ಬಲವಾದ ಕಾರಣ ಇತ್ತು. ಆಗ ಉಕ್ರೇನ್ ವಿರುದ್ಧ ರಷ್ಯಾ ನಿಂತಿರುವುದೇ ತಪ್ಪು ಎಂಬ ಭಾವನೆ ತುಂಬಲು ಅಮೆರಿಕ & ನ್ಯಾಟೋ ಸದಸ್ಯರು ಪ್ರಯತ್ನಿಸಿದ್ದರು. ಆಗಿನ ಪರಿಸ್ಥಿತಿ ವೇಳೆ ರಷ್ಯಾ ವಿರುದ್ಧ ಭಾರತ ಮತಚಲಾಯಿಸಲು ಸಾಧ್ಯವೇ ಇರಲಿಲ್ಲ. ಆದ್ರೆ ಈ ಬಾರಿ ಕೇವಲ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮಾತನಾಡುವುದಕ್ಕೆ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆದಿತ್ತು. ಭದ್ರತಾ ಮಂಡಳಿಯಲ್ಲಿ ಉಕ್ರೇನ್ ಅಧ್ಯಕ್ಷ ಮಾತನಾಡುವ ಕಾರಣಕ್ಕೆ ರಷ್ಯಾ ಮೇಲೆ ಪರಿಣಾಮ ಉಂಟಾಗುವುದಿಲ್ಲ. ಹೀಗಾಗಿಯೇ ಭಾರತ ಇಂತಹ ಕಠಿಣ ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದೆ.
5) ಚೀನಾಗೆ ಟಾಂಗ್..?
ರಷ್ಯಾ ವಿರುದ್ಧ ಭಾರತ ಮತ ಹಾಕಲು ಮತ್ತೊಂದು ಮಹತ್ವದ ಕಾರಣವಿದೆ ಎಂಬ ಬಗ್ಗೆಯೂ ಚರ್ಚೆಯಾಗುತ್ತಿದೆ. ಅದೇನೆಂದರೆ ಅಮೆರಿಕ & ನ್ಯಾಟೋ ಸದಸ್ಯ ರಾಷ್ಟ್ರಗಳು ಚೀನಾ ನೀತಿಗಳಿಗೆ ಬದ್ಧ ವಿರೋಧಿಗಳು. ಭಾರತಕ್ಕೂ ಚೀನಾ ಬದ್ಧ ವಿರೋಧಿಯೇ ಆಗಿದೆ. ಪರಿಸ್ಥಿತಿ ಹೀಗಿರುವಾಗ ತನ್ನ ನೆರೆಹೊರೆ ಶತ್ರುಗಳ ವಿರುದ್ಧ ಭಾರತ ಪ್ರತಿತಂತ್ರವನ್ನೂ ರೂಪಿಸಿರುವ ಸಾಧ್ಯತೆ ಇದೆ. ಈ ನಡೆ ಮೂಲಕ ಚೀನಾ ಕುತಂತ್ರ ಬುದ್ಧಿಗೆ ಭಾರತ ಪ್ರತ್ಯುತ್ತರ ನೀಡುವ ಪ್ರಯತ್ನ ಮಾಡಿದ್ದರೂ ಆಶ್ಚರ್ಯವಿಲ್ಲ.
ಇದಿಷ್ಟು ಮಾತ್ರವಲ್ಲ, ಇನ್ನೂ ಹಲವು ಆಯಾಮಗಳಲ್ಲಿ ಅಂತಾರಾಷ್ಟ್ರೀಯ ರಾಜಕೀಯ ತಜ್ಞರು ಭಾರತದ ನಡೆ ಅಳೆದು-ತೂಗಿ ಲೆಕ್ಕಾಚಾರ ಹಾಕುತ್ತಿದ್ದಾರೆ. ಆದರೆ ಯಾವುದು ಕೂಡ ಸ್ಪಷ್ಟವಾಗುತ್ತಿಲ್ಲ, ಭಾರತದ ನಡೆ ತುಂಬಾ ರಹಸ್ಯ ಕಾಯ್ದುಕೊಂಡಿದೆ. ಮುಂದಿನ ದಿನಗಳಲ್ಲಿ ಈ ಪ್ರಶ್ನೆ & ಗೊಂದಲಕ್ಕೆ ಉತ್ತರ ಗೊತ್ತಾಗಲಿದ್ದು, ಇದರಿಂದ ಚೀನಾ ಬೆಚ್ಚಿಬೀಳುವುದು ಗ್ಯಾರಂಟಿ. ಹಾಗೆಯೇ ರಷ್ಯಾ ಜೊತೆಗಿನ ಭಾರತದ ಸಂಬಂಧ ಎಂದಿಗೂ ಹಳಸುವುದಿಲ್ಲ ಎಂಬುದು ಕೂಡ ಪಕ್ಕಾ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.