ತೀವ್ರ ಕುತೂಹಲ ಕೆರಳಿಸಿದ ಇಂದಿನ ಬಿಜೆಪಿ ಶಾಸಕಾಂಗ ಪಕ್ಷದ ಸಭೆ

ರಾಜ್ಯಪಾಲರನ್ನು ಭೇಟಿ ಮಾಡಿ ಬಿಜೆಪಿ ಸರ್ಕಾರ ರಚನೆಯ ಹಕ್ಕು ಮಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹಾಗೂ ಅನಂತ್ ಕುಮಾರ್.  

Last Updated : May 16, 2018, 10:23 AM IST
ತೀವ್ರ ಕುತೂಹಲ ಕೆರಳಿಸಿದ ಇಂದಿನ ಬಿಜೆಪಿ ಶಾಸಕಾಂಗ ಪಕ್ಷದ ಸಭೆ title=
Pic: ANI

ಬೆಂಗಳೂರು: 224 ವಿಧಾನಸಭಾ ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು,  222 ಸ್ಥಾನಗಳ ಫ‌ಲಿತಾಂಶ ಪ್ರಕಟವಾಗಿದೆ. ಬಿಜೆಪಿ 103 ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೂ ಮ್ಯಾಜಿಕ್ ಸಂಖ್ಯೆಗೆ ಅತ್ಯಲ್ಪ ದೂರದಲ್ಲಿರುವ ಬಿಜೆಪಿಗೆ ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಎಂಬಂತಾಗಿದೆ. ಆದರೂ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವ ಬಿಜೆಪಿ ಶತಾಯಗತಾಯ ರಾಜ್ಯದಲ್ಲಿ ತನ್ನ ಅಧಿಕಾರ ಸ್ಥಾಪಿಸಲು ಶತಪ್ರಯತ್ನ ಮಾಡುತ್ತಿದೆ. ಸರ್ಕಾರ ರಚನೆ ಮಾಡುವಷ್ಟು ಶಾಸಕರ ಬಲ (112)  ಇಲ್ಲವಾದರೂ ಅತಿ ಹೆಚ್ಚು ಶಾಸಕರ ಸಂಖ್ಯೆ ಹೊಂದಿರುವ ಏಕೈಕ ಪಕ್ಷ ಬಿಜೆಪಿಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ರಾಜ್ಯಪಾಲರನ್ನು ಭೇಟಿ ಮಾಡಿ ಬಿಜೆಪಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಸರ್ಕಾರ ರಚನೆ ನಿಟ್ಟಿನಲ್ಲಿ ಬಿಜೆಪಿಯ ಮುಂದಿನ ನಡೆ ಏನಿರಬಹುದು ಎಂಬ ತೀವ್ರ ಕುತೂಹಲ ಮೂಡಿಸಿದೆ.

ಇಂದು ಬೆಳಿಗ್ಗೆ ಬೆಳಿಗ್ಗೆ ಸಭೆ ನಡೆಯಲಿದ್ದು, ಪಕ್ಷದ ಶಾಸಕಾಂಗ ನಾಯಕನ ಆಯ್ಕೆ ನಡೆಯಲಿದೆ. ನಾಯಕನಾಗಿ ಬಿ.ಎಸ್. ಯಡಿಯೂರಪ್ಪ ಅವರ ಆಯ್ಕೆಗೆ ಸಿದ್ದತೆ ನಡೆದಿದೆ. ಸಭೆ ಬಳಿಕ ರಾಜಭವನಕ್ಕೆ ತೆರಳಲಿರುವ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯದಿಯೂರಪ್ಪ ಈ ಚುನಾವಣೆಯಲ್ಲಿ ನಮ್ಮ ಪಕ್ಷ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದೇವೆ. ನಾವು 104 ಸಂಖ್ಯಾ ಬಲವನ್ನು ಹೊಂದಿದ್ದೇವೆ. ನಮಗೆ ಸರ್ಕಾರ ರಚಿಸಲು ಅವಕಾಶ ಕೊಡಿ ಎಂದು ರಾಜ್ಯಪಾಲರ ಬಳಿ ಮನವಿ ಮಾಡಲಿದ್ದಾರೆ. 

ಏತನ್ಮಧ್ಯೆ ಇಂದು ಸಂಜೆ ವೇಳೆಗೆ ಬೆಂಗಳೂರಿಗೆ ಆಗಮಿಸಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರನ್ನು ಭೇಟಿ ಮಾಡಿ ಮೈತ್ರಿ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜಕೀಯ ಚದುರಂಗದಾಟದಲ್ಲಿ ಗದ್ದುಗೆ ಏರುವವರು ಯಾರು ಎಂಬುದು ಮಾತ್ರ ತೀವ್ರ ಕುತೂಹಲ ಸೃಷ್ಟಿಸಿದೆ.

ಇನ್ನು ನೆನ್ನೆ ರಾತ್ರಿಯೇ ಬೆಂಗಳೂರಿಗೆ ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ನಾಯಕರಾದ ಪ್ರಕಾಶ್ ಜಾವಡೆಕರ್, ಜಯಪ್ರಕಾಶ್ ನಡ್ಡ, ಧರ್ಮೇಂದ್ರ ಪ್ರಧಾನ್ ರಾಜ್ಯ ನಾಯಕರ ಜತೆ ಸಮಾಲೋಚನೆ ನಡೆಸಿದ್ದಾರೆ. ಜೆ.ಪಿ. ನಡ್ಡ ನೇತೃತ್ವದಲ್ಲಿ ಬಿಜೆಪಿ ನಿಯೋಗ ಇಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರನ್ನು ಭೇಟಿ ಮಾಡುವ ನಿರೀಕ್ಷೆ ಇದೆ. ಆದರೆ, ಇದುವರೆಗೂ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ.

Trending News