ಮೇಕ್ ಇನ್ ಇಂಡಿಯಾ ಯೋಜನೆಗೆ ದಶಕ: ಉತ್ಪಾದನಾ ಸವಾಲುಗಳು, ನೀತಿ ನಿಯಮಗಳ ತೊಡಕುಗಳು

Make In India: ಯುಪಿಎ ಅವಧಿಯಲ್ಲಿ ಉತ್ಪಾದನಾ ವಲಯದಲ್ಲಿನ ಅಭಿವೃದ್ಧಿಯ ಕಾರಣದಿಂದ, ಉದ್ಯೋಗಾವಕಾಶಗಳೂ ಹೆಚ್ಚಾಗಿದ್ದವು. ಕಾರ್ಖಾನೆಗಳಲ್ಲಿನ ಉದ್ಯೋಗ ದರ ವಾರ್ಷಿಕವಾಗಿ 6.2% ಹೆಚ್ಚಳ ಕಂಡಿತ್ತು. ಆದರೆ, ಮೋದಿ ಸರ್ಕಾರದ ಅವಧಿಯಲ್ಲಿ ಈ ಉದ್ಯೋಗ ದರ 2.8%ಕ್ಕೆ ಕುಸಿತ ಕಂಡಿದೆ. ಅದೇ ರೀತಿ, ಯುಪಿಎ ಆಡಳಿತದ ಅವಧಿಯಲ್ಲಿ ಉದ್ಯೋಗಿಗಳ ಸಂಬಳ ವಾರ್ಷಿಕವಾಗಿ 17.1% ದರದಲ್ಲಿ ಹೆಚ್ಚುತ್ತಿದ್ದರೆ, 2014ರ ಬಳಿಕ ಸಂಬಳ ಹೆಚ್ಚಳದ ದರ 8.4%ಗೆ ಇಳಿಕೆ ಕಂಡಿದೆ.

Written by - Girish Linganna | Edited by - Yashaswini V | Last Updated : Sep 28, 2023, 08:53 AM IST
  • ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸಿವ್ ಅಲಯನ್ಸ್ (ಯುಪಿಎ) ಸರ್ಕಾರದ ಅವಧಿಯಲ್ಲಿ, ಭಾರತದಲ್ಲಿ ಕಾರ್ಖಾನೆಗಳ ಸಂಖ್ಯೆ ಬಹುತೇಕ 1,00,000ದಷ್ಟು ಹೆಚ್ಚಳ ಕಂಡಿತ್ತು.
  • ಆದರೆ, 2013-14 ಮತ್ತು 2019-20ರ ನಡುವೆ, ಕಾರ್ಖಾನೆಗಳ ಸ್ಥಾಪನೆಯ ದರ ಇಳಿಕೆ ಕಂಡಿದ್ದು, ಮೋದಿ ಸರ್ಕಾರದ ಆಡಳಿತದಲ್ಲಿ ಕೇವಲ 22,000 ನೂತನ ಕಾರ್ಖಾನೆಗಳು ಆರಂಭಗೊಂಡಿವೆ.
  • ಯುಪಿಎ ಅವಧಿಯಲ್ಲಿ ಉತ್ಪಾದನಾ ವಲಯದಲ್ಲಿನ ಅಭಿವೃದ್ಧಿಯ ಕಾರಣದಿಂದ, ಉದ್ಯೋಗಾವಕಾಶಗಳೂ ಹೆಚ್ಚಾಗಿದ್ದವು.
ಮೇಕ್ ಇನ್ ಇಂಡಿಯಾ ಯೋಜನೆಗೆ ದಶಕ: ಉತ್ಪಾದನಾ ಸವಾಲುಗಳು, ನೀತಿ ನಿಯಮಗಳ ತೊಡಕುಗಳು title=
Make In India

Make In India: ಅತ್ಯಂತ ಮಹತ್ವದ ಯೋಜನೆಯೊಂದು ತನ್ನ ಪ್ರಮುಖ ವಾರ್ಷಿಕೋತ್ಸವದ ಕಡೆ ಸಾಗುತ್ತಿರುವಾಗಲೂ, ಅದರ ಕುರಿತು ಹೆಚ್ಚಿನ ಪ್ರಚಾರ, ಬಣ್ಣನೆಗಳು ಕಂಡುಬರುತ್ತಿಲ್ಲ. ಇದು ಒಂದು ರೀತಿ ಅತಿರಂಜಿತವಾದ ಪ್ರಚಾರಗಳು, ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳು ಈಗಾಗಲೇ ಕುಸಿತ ಕಂಡಿರುವ ಉತ್ಪಾದನಾ ವಲಯವನ್ನು ಪುನರುತ್ತೇಜಿಸಲು ನೆರವಾಗುವುದಿಲ್ಲ ಎಂದು ಸರ್ಕಾರ ಅರ್ಥ ಮಾಡಿಕೊಂಡಿರುವಂತೆ ತೋರುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮೇಕ್ ಇನ್ ಇಂಡಿಯಾ ಸೆಪ್ಟೆಂಬರ್ 25ರಂದು ತನ್ನ ಹತ್ತನೆಯ ವರ್ಷ ಪೂರ್ಣಗೊಳಿಸಿತು. ಆದರೆ, ಎಲ್ಲ ಮಹತ್ತರ ಸಂದರ್ಭಗಳಲ್ಲೂ ಸಂಭ್ರಮಾಚರಣೆ ನಡೆಸುವ ಕೇಂದ್ರ ಸರ್ಕಾರ ಈ ಬಾರಿ ಮಾತ್ರ ಅದೇಕೋ ಅಸಹಜವಾಗಿ ಮೌನ ತಳೆದಿತ್ತು. ಈ ರೀತಿಯ ಮೌನ, ಬಹುಶಃ ಕೇಂದ್ರ ಸರ್ಕಾರಕ್ಕೆ ಅದ್ಧೂರಿ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳು ಈಗಾಗಲೇ ಉತ್ಪಾದನಾ ವಲಯ ಹಿನ್ನಡೆ ಅನುಭವಿಸಿರುವುದನ್ನು ಮರೆಮಾಚಲು ಸಾಧ್ಯವಿಲ್ಲ ಎನ್ನುವುದು ಅರಿವಿಗೆ ಬಂದಿದೆ ಎನ್ನುವ ಸಂಕೇತವೂ ಆಗಿರಬಹುದು.

ಮೇಕ್ ಇನ್ ಇಂಡಿಯಾ ಯೋಜನೆಯನ್ನು ಸರ್ಕಾರ ಅತ್ಯಂತ ಉತ್ಸಾಹದಿಂದ, ಮಹತ್ವಾಕಾಂಕ್ಷೆಯಿಂದ ಆರಂಭಿಸಿತ್ತು. ಈ ಯೋಜನೆ ಮೂರು ಪ್ರಮುಖ ಗುರಿಗಳನ್ನು ಹೊಂದಿತ್ತು. ಅವೆಂದರೆ, i) ವಾರ್ಷಿಕವಾಗಿ 12-14% ಉತ್ಪಾದನಾ ದರವನ್ನು ಹೆಚ್ಚಿಸಿಕೊಳ್ಳುವುದು, ii) 2022ರ ವೇಳೆಗೆ ಭಾರತದ ಜಿಡಿಪಿಗೆ ಉತ್ಪಾದನಾ ವಲಯದ ಕೊಡುಗೆಯನ್ನು 25%ಗೆ ಹೆಚ್ಚಿಸುವುದು, ಹಾಗೂ iii) ಉತ್ಪಾದನಾ ವಲಯ ಒಂದರಲ್ಲೇ 2022ರ ವೇಳೆಗೆ 100 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುವುದು.

ಆದರೆ, ಈ ಪ್ರಮುಖ ಗುರಿಗಳಲ್ಲಿ ಯಾವುದನ್ನೂ ಈಡೇರಿಸಲು ಸಾಧ್ಯವಾಗದಿರುವುದರಿಂದ ಸರ್ಕಾರ ಹೇಳಿಕೊಳ್ಳುವಂತಹ ಸಂಭ್ರಮಾಚರಣೆಗೆ ಮುಂದಾಗಿರಲಿಕ್ಕಿಲ್ಲ ಎನ್ನಲಾಗಿದೆ. 2013-14ರ ಬಳಿಕ, ಭಾರತದ ಉತ್ಪಾದನಾ ವಲಯದ ಅಭಿವೃದ್ಧಿ ದರ ನಿರಂತರವಾಗಿ 5.9% ಸರಾಸರಿಯನ್ನು ಹೊಂದಿದ್ದು, ಉತ್ಪಾದನಾ ವಲಯದ ಪಾಲು 2022-23ನೇ ಸಾಲಿನಲ್ಲೂ 16.4%ದಲ್ಲೇ ಉಳಿದಿತ್ತು. ಅಲ್ಲದೆ, 2016 ಮತ್ತು 2021ರ ನಡುವೆ, ಉತ್ಪಾದನಾ ವಲಯದ ಉದ್ಯೋಗಗಳು ಅರ್ಧದಷ್ಟು ಕಡಿತಗೊಂಡಿದ್ದವು. ಮೇಕ್ ಇನ್ ಇಂಡಿಯಾ ಯೋಜನೆ ಜಾರಿಗೆ ಬಂದು ಒಂದು ದಶಕದ ಅವಧಿಯಲ್ಲಿ, ಉದ್ಯೋಗ ವಲಯದಲ್ಲಿ ಉತ್ಪಾದನಾ ವಲಯದ ಕೊಡುಗೆ 2011-12ನೇ ಸಾಲಿನಲ್ಲಿ ಇದ್ದ 12.6%ದಿಂದ 2021-22ರ ವೇಳೆಗೆ 11.6%ಗೆ ಕುಸಿತ ಕಂಡಿತ್ತು.

ಇದನ್ನೂ ಓದಿ- ಈ ಬ್ಯಾಂಕ್‌ನಲ್ಲಿ ನೀವು ಖಾತೆ ಹೊಂದಿದ್ದರೆ ಸಿಗಲಿದೆ ಮೂರು ಹೊಸ ಸೇವೆ

ಒಟ್ಟಾರೆಯಾಗಿ ನಿರಾಶಾದಾಯಕ ಪ್ರದರ್ಶನದ ಹೊರತಾಗಿಯೂ, ಸರ್ಕಾರ ಕೆಲವು ಅಸಾಧಾರಣ ಘಟನೆಗಳನ್ನು ಮೇಕ್ ಇನ್ ಇಂಡಿಯಾ ಯೋಜನೆಯ ಫಲಶ್ರುತಿ ಎಂಬಂತೆ ಬಿಂಬಿಸಲು ಪ್ರಯತ್ನಿಸಿತು. ಉದಾಹರಣೆಯಾಗಿ ನಾವು ಆ್ಯಪಲ್ ಸಂಸ್ಥೆಯ ಐಫೋನ್ ಉತ್ಪಾದನೆಯನ್ನು ಪರಿಗಣಿಸಬಹುದು. ವರದಿಗಳ ಪ್ರಕಾರ, ಆ್ಯಪಲ್ ಸಂಸ್ಥೆ ಭಾರತದಲ್ಲಿನ ತನ್ನ ಐಫೋನ್ ಉತ್ಪಾದನೆಯನ್ನು ಮೂರು ಪಟ್ಟು ಹೆಚ್ಚಿಸಿದ್ದು, ಬಹುತೇಕ 7% ಐಫೋನ್‌ಗಳನ್ನು ಭಾರತದಲ್ಲೇ ನಿರ್ಮಿಸಲಾಗುತ್ತದೆ. ಸರ್ಕಾರ ಮತ್ತು ಸರ್ಕಾರದ ಬೆಂಬಲಿಗರು ಈ ಅಂಕಿ ಅಂಶಗಳನ್ನು ಹೆಚ್ಚುತ್ತಿರುವ ಉತ್ಪಾದನಾ ವಲಯದ ಸಾಧನೆ ಎಂದು ಬಿಂಬಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಅಂತಹ ಸಾಧನೆ ನಿಜವಲ್ಲ ಎಂದು ಸಾಬೀತುಪಡಿಸಲು ಅಂಕಿಅಂಶಗಳ ಪರಿಶೀಲನೆಯೇ ಸಾಕಾಗುತ್ತದೆ.

ಇಂಡೆಕ್ಸ್ ಆಫ್ ಇಂಡಸ್ಟ್ರಿಯಲ್ ಪ್ರೊಡಕ್ಷನ್ (ಐಐಪಿ) ವಿವಿಧ ಔದ್ಯಮಿಕ ವಲಯಗಳ ಅಭಿವೃದ್ಧಿಯನ್ನು ಗಮನಿಸುತ್ತದೆ. ಭಾರತದಲ್ಲಿ, ಐಐಪಿ ಸಾಧಾರಣ ಅಭಿವೃದ್ಧಿಯನ್ನು ತೋರಿಸಿದ್ದು, 2013-14ರ 106.7 ಅಂಕಗಳಿಂದ 2022-23ರಲ್ಲಿ 138.5ಗೆ ಏರಿಕೆ ಕಂಡಿದ್ದು, ವಾರ್ಷಿಕ ಸರಾಸರಿ ಅಭಿವೃದ್ಧಿ ದರ ಕೇವಲ 2.9% ಆಗಿದೆ. ಆದರೆ, ಒಂದು ಸುಸ್ಥಿರ ಉತ್ಪಾದನಾ ವಲಯ ಸಾಮಾನ್ಯವಾಗಿ ವಾರ್ಷಿಕ 7-8% ಅಭಿವೃದ್ಧಿ ದರವನ್ನು ಹೊಂದಿರುತ್ತದೆ. 2014ರಿಂದ, ಹಲವಾರು ವಲಯಗಳು ವಿವಿಧ ಸವಾಲುಗಳನ್ನು ಎದುರಿಸಿದ್ದು, ನಿರೀಕ್ಷಿತ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿಲ್ಲ.

ಕಟು ವಾಸ್ತವ ಏನೆಂದರೆ, ಇಲೆಕ್ಟ್ರಿಕಲ್ ಉಪಕರಣಗಳ ಉತ್ಪಾದನಾ ದರ 2013-14ನೇ ಸಾಲಿನಿಂದ -1.8% ಅಭಿವೃದ್ಧಿ ದರ ಹೊಂದಿದೆ. ಅದೇ ರೀತಿ, ಕಂಪ್ಯೂಟರ್, ಇಲೆಕ್ಟ್ರಾನಿಕ್, ಹಾಗೂ ಆಪ್ಟಿಕಲ್ ಉತ್ಪನ್ನಗಳ ವಲಯ ಕೇವಲ 2% ಪ್ರಗತಿ ಸಾಧಿಸಿದೆ. ಸಾಗಾಣಿಕಾ ಉತ್ಪನ್ನಗಳ ವಲಯ 2% ಸರಾಸರಿ ಅಭಿವೃದ್ಧಿ ದರ ಹೊಂದಿದ್ದರೆ, ಮೋಟಾರ್ ವಾಹನ ಉತ್ಪಾದನಾ ದರ ಕೇವಲ 1.6% ಪ್ರಗತಿ ಕಂಡಿದೆ. ಇನ್ನು ಸಾಂಪ್ರದಾಯಿಕವಾಗಿ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದ್ದ ಜವಳಿ, ಉಡುಪು ಹಾಗೂ ಚರ್ಮದ ಉದ್ಯಮಗಳು ಕ್ರಮವಾಗಿ -0.5%, 1.2% ಮತ್ತು -1.8% ಅಭಿವೃದ್ಧಿ ದರ ದಾಖಲಿಸಿವೆ.

ಹೆಚ್ಚುತ್ತಿರುವ ನಿರುದ್ಯೋಗ ಒಂದು ಕಳವಳಕಾರಿ ವಿಚಾರವಾಗಿದ್ದು, ಅದರಲ್ಲೂ ಯುವ ಪದವೀಧರರ ನಿರುದ್ಯೋಗ ಪ್ರಮಾಣ 42.3% ದಷ್ಟು ಹೆಚ್ಚಿದೆ. ಉತ್ಪಾದನಾ ವಲಯಕ್ಕೆ ಸಿಗಬೇಕಾದ ಬಲ ಸಿಗದಿರುವುದೂ ಇದಕ್ಕೆ ಕಾರಣವಾಗಿರಬಹುದು. ಭಾರತದಲ್ಲಿ ಆ್ಯಪಲ್ ಸಂಸ್ಥೆ ತನ್ನ ಉತ್ಪಾದನಾ ಚಟುವಟಿಕೆಗಳನ್ನು ಹೆಚ್ಚಿಸಿರುವುದು ಸ್ಪೂರ್ತಿದಾಯಕ ಬೆಳವಣಿಗೆಯಾದರೂ, ಇದು ಉದ್ಯಮದ ಸಂಪೂರ್ಣ ಚಿತ್ರಣವನ್ನು ಒದಗಿಸುವುದಿಲ್ಲ.

ಇದನ್ನೂ ಓದಿ- ಆಧಾರ್ ಸಹಾಯದಿಂದ ತ್ವರಿತ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಇಲ್ಲಿದೆ ಸುಲಭ ಮಾರ್ಗ

ಸಾಂದರ್ಭಿಕವಾಗಿ ಒಂದಷ್ಟು ಕಾರ್ಖಾನೆಗಳನ್ನು ನಿರ್ಮಿಸುವುದು ಈ ಸಮಸ್ಯೆಗೆ ಇರುವ ಸೂಕ್ತ ಪರಿಹಾರವಲ್ಲ. ಭಾರತ ತನ್ನ ವಿವಿಧ ರಾಜ್ಯಗಳಾದ್ಯಂತ ನೂರಾರು ಕಾರ್ಖಾನೆಗಳನ್ನು ಸ್ಥಾಪಿಸಿ, ವೈವಿಧ್ಯಮಯ ಜನಸಂಖ್ಯೆಗೆ ಅವಶ್ಯಕವಾಗಿರುವ ಉತ್ಪನ್ನಗಳನ್ನು ಉತ್ಪಾದಿಸಲು ಕ್ರಮ ಕೈಗೊಳ್ಳಬೇಕಿದೆ. ವಾರ್ಷಿಕ ಉದ್ಯಮ ಸಮೀಕ್ಷೆಯೂ ಔದ್ಯಮಿಕ ವಲಯ ತನ್ನ ಹುರುಪನ್ನು ಕಳೆದುಕೊಂಡಿದೆ ಎಂದೇ ಸೂಚಿಸಿದೆ.

ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸಿವ್ ಅಲಯನ್ಸ್ (ಯುಪಿಎ) ಸರ್ಕಾರದ ಅವಧಿಯಲ್ಲಿ, ಭಾರತದಲ್ಲಿ ಕಾರ್ಖಾನೆಗಳ ಸಂಖ್ಯೆ ಬಹುತೇಕ 1,00,000ದಷ್ಟು ಹೆಚ್ಚಳ ಕಂಡಿತ್ತು. ಆದರೆ, 2013-14 ಮತ್ತು 2019-20ರ ನಡುವೆ, ಕಾರ್ಖಾನೆಗಳ ಸ್ಥಾಪನೆಯ ದರ ಇಳಿಕೆ ಕಂಡಿದ್ದು, ಮೋದಿ ಸರ್ಕಾರದ ಆಡಳಿತದಲ್ಲಿ ಕೇವಲ 22,000 ನೂತನ ಕಾರ್ಖಾನೆಗಳು ಆರಂಭಗೊಂಡಿವೆ. ಯುಪಿಎ ಅವಧಿಯಲ್ಲಿ ಉತ್ಪಾದನಾ ವಲಯದಲ್ಲಿನ ಅಭಿವೃದ್ಧಿಯ ಕಾರಣದಿಂದ, ಉದ್ಯೋಗಾವಕಾಶಗಳೂ ಹೆಚ್ಚಾಗಿದ್ದವು. ಕಾರ್ಖಾನೆಗಳಲ್ಲಿನ ಉದ್ಯೋಗ ದರ ವಾರ್ಷಿಕವಾಗಿ 6.2% ಹೆಚ್ಚಳ ಕಂಡಿತ್ತು. ಆದರೆ, ಮೋದಿ ಸರ್ಕಾರದ ಅವಧಿಯಲ್ಲಿ ಈ ಉದ್ಯೋಗ ದರ 2.8%ಕ್ಕೆ ಕುಸಿತ ಕಂಡಿದೆ. ಅದೇ ರೀತಿ, ಯುಪಿಎ ಆಡಳಿತದ ಅವಧಿಯಲ್ಲಿ ಉದ್ಯೋಗಿಗಳ ಸಂಬಳ ವಾರ್ಷಿಕವಾಗಿ 17.1% ದರದಲ್ಲಿ ಹೆಚ್ಚುತ್ತಿದ್ದರೆ, 2014ರ ಬಳಿಕ ಸಂಬಳ ಹೆಚ್ಚಳದ ದರ 8.4%ಗೆ ಇಳಿಕೆ ಕಂಡಿದೆ.

ಯುಪಿಎ ಆಡಳಿತದ ಅವಧಿಯಲ್ಲಿ, ಕಾರ್ಖಾನೆಗಳ ಲಾಭ ಸ್ಥಿರವಾಗಿ ಏರುತ್ತಿದ್ದು, ವಾರ್ಷಿಕವಾಗಿ 18.9% ದರದಲ್ಲಿ ಹೆಚ್ಚಳ ಕಾಣುತ್ತಿತ್ತು. ಆದರೆ ಅದು ಈಗ ಕೇವಲ 0.6% ಆಗಿದೆ. ಸದೃಢವಾದ ನೀತಿ ನಿರೂಪಣೆಗಳು ಮಾರ್ಕೆಟಿಂಗ್ ಮತ್ತು ಘೋಷಣೆಗಳಿಗಿಂತ ಹೆಚ್ಚಿನ ಪ್ರಾಧಾನ್ಯತೆ ಹೊಂದಿದ್ದ ಅವಧಿಯಲ್ಲಿ, ಸರ್ಕಾರ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿತ್ತು. ಅದರ ಫಲಿತಾಂಶಗಳೂ ಅಷ್ಟೇ ಧನಾತ್ಮಕವಾಗಿ ಗೋಚರಿಸಿದ್ದವು. ಆ ಅವದಿಯಲ್ಲಿ ಹೆಚ್ಚು ಹೆಚ್ಚು ಕಾರ್ಖಾನೆಗಳು ಸ್ಥಾಪನೆಗೊಂಡವು, ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾದವು, ಉದ್ಯೋಗಿಗಳಿಗೆ ನ್ಯಾಯಯುತ ಸಂಬಳ ನೀಡಲಾಗುತ್ತಿತ್ತು, ಉದ್ಯಮಿಗಳು ಸೂಕ್ತ ಲಾಭ ಪಡೆಯುತ್ತಿದ್ದರು. ಇಂತಹ ವಾತಾವರಣ ಉದ್ಯಮಗಳಿಗೆ ಔದ್ಯಮಿಕ ವಲಯದಲ್ಲಿ ಸಾಕಷ್ಟು ಹೂಡಿಕೆ ನಡೆಸಲು ಉತ್ತೇಜನ ನೀಡುತ್ತಿತ್ತು. ಯುಪಿಎ ಅವಧಿಯಲ್ಲಿ 21.3% ಇದ್ದ ಬಂಡವಾಳ ರಚನೆ ಈಗ ಋಣಾತ್ಮಕವಾಗಿದ್ದು, ಪ್ರಸ್ತುತ -0.7% ಆಗಿದೆ.

ಹೂಡಿಕೆಗಳ ಕೊರತೆ ಎದುರಾಗಿರುವುದು ಉದ್ಯಮಕ್ಕೆ ಸರ್ಕಾರದ ನೀತಿಗಳಲ್ಲಿರುವ ವಿಶ್ವಾಸದ ಕೊರತೆಯನ್ನು ಪ್ರತಿನಿಧಿಸುತ್ತದೆ. ಒಂದು ವರ್ಷದ ಹಿಂದೆ, ಅರ್ಥ ಸಚಿವರು ಔದ್ಯಮಿಕ ನಾಯಕರುಗಳಿಗೆ ಉತ್ಪಾದನಾ ವಲಯದಲ್ಲಿ ಹೂಡಿಕೆ ಮಾಡಲು ಇಚ್ಛೆಯಿಲ್ಲವೆಂದು ಟೀಕಿಸಿದ್ದರು. ಅವರು ಹೂಡಿಕೆ ನಡೆಸಲು ಹಿಂಜರಿಯಲು ಕಾರಣವೇನು ಎಂದು ತಿಳಿಸಲು ಸೂಚಿಸಿದ್ದರು. ಆ ಸಂದರ್ಭದಲ್ಲಿ ಮಾತನಾಡಿದ ಸಚಿವರು, "ನಾನು ಇಂಡಿಯಾ ಐಎನ್‌ಸಿ ಸಂಸ್ಥೆ ಯಾವ ಕಾರಣಕ್ಕೆ ಹಿಂಜರಿಯುತ್ತಿದೆ ಎಂದು ತಿಳಿಯಲು ಬಯಸುತ್ತಿದ್ದೇನೆ. ಉದ್ಯಮಗಳು ಭಾರತದಲ್ಲಿ ಹೂಡಿಕೆ ಮಾಡಲು ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ನಾವು ಕಲ್ಪಿಸುತ್ತೇವೆ.." ಎಂದು ಅವರು ಹೇಳಿದ್ದರು. ಆದರೆ ಸಚಿವರಿಗೆ ಆ ದಿನ ಏನಾದರೂ ಉತ್ತರ ದೊರಕಿತೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಆರ್ಥಿಕತೆ ಮಾತ್ರ ಇಂದಿಗೂ ಬೇಡಿಕೆಯ ಕೊರತೆಯ ಕಾರಣದಿಂದ ಹರಸಾಹಸ ಪಡುತ್ತಿದೆ ಎನ್ನುವುದು ನಮಗೆಲ್ಲ ತಿಳಿದಿದೆ. ಉತ್ಪಾದನಾ ವಲಯದಲ್ಲಿ ಹೂಡಿಕೆಗೆ ಕೊರತೆ ಎದುರಾಗಲು ಪ್ರಮುಖ ಕಾರಣವೆಂದರೆ, ಸರಕು ಮತ್ತು ಸೇವೆಗಳಿಗೆ ಎದುರಾಗಿರುವ ಕನಿಷ್ಠ ಬೇಡಿಕೆ.

ಇದನ್ನೂ ಓದಿ- OPS ಮತ್ತು NPSನಲ್ಲಿ ಉದ್ಯೋಗಿಗಳಿಗೆ ಯಾವುದು ಸೂಕ್ತ ? ನಿಜವಾಗಿಯೂ ಲಾಭ ಯಾವುದರಿಂದ ?

ಸರ್ಕಾರದ ದೋಷಪೂರಿತ ನೀತಿಗಳಾದ ಅಪನಗದೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆ (ಗೂಡ್ಸ್ ಆ್ಯಂಡ್ ಸರ್ವಿಸಸ್ ಟ್ಯಾಕ್ಸ್ - ಜಿಎಸ್‌ಟಿ) ಏನಾದರೂ ಜಾರಿಗೆ ಬರದಿದ್ದರೆ, ಉತ್ಪಾದನಾ ವಲಯ ಬಹುಶಃ ಬೇರೆಯದೇ ಹಾದಿ ಹಿಡಿದು ಸಾಗುತ್ತಿತ್ತು. ಅದರಲ್ಲೂ ಜಿಎಸ್‌ಟಿ ಅಂತೂ ಮೈಕ್ರೋ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ (ಎಂಎಸ್ಎಂಇ) ಸಣ್ಣ ಲಾಭಾಂಶದ ಮೇಲೂ ಭಾರೀ ಹೊಡೆತ ನೀಡುತ್ತಿತ್ತು. ಒಂದು ವೇಳೆ ಉದ್ಯಮಗಳೇನಾದರೂ ಇದರಿಂದ ಕೊಂಚ ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎನ್ನುವಾಗಲೇ ಮಾರ್ಚ್ 2020ರಲ್ಲಿ ಅನಿರೀಕ್ಷಿತವಾಗಿ ಬಂದಪ್ಪಳಿಸಿದ ಕೋವಿಡ್-19 ಲಾಕ್‌ಡೌನ್ ಆ ಸಾಧ್ಯತೆಯನ್ನೇ ಇಲ್ಲವಾಗಿಸಿತು. ಆದರೆ ಇದಕ್ಕೆ ಸರ್ಕಾರದ ಪ್ರತಿಕ್ರಿಯೆ ಅತ್ಯಂತ ನೀರಸವಾಗಿತ್ತು. ಸರ್ಕಾರ ಹೆಚ್ಚಿನ ಆಮದು ಶುಲ್ಕ ವಿಧಿಸಿದ್ದು ಮತ್ತು ಉದ್ಯಮಗಳಿಗೆ ಹಾಗೂ 'ಚೀನಾ ಪ್ಲಸ್ ಒನ್' ಕಾರ್ಯತಂತ್ರಡಿ, ಚೀನಾದ ಹೊರಗೂ ಉತ್ಪಾದನೆ ನಡೆಸಲು ಯೋಚಿಸಿದ್ದ ವಿದೇಶಿ ಉತ್ಪಾದಕರಿಗೆ ಪರವಾನಗಿ ನೀಡಲು ಹೆಚ್ಚಿನ ಕಾನೂನು ಕ್ರಮಗಳನ್ನು ಜಾರಿಗೆ ತಂದಿದ್ದು ಉದ್ಯಮಕ್ಕೆ ಹೊಡೆತ ನೀಡಿತ್ತು.

ದುರ್ಬಲ ಉತ್ಪಾದನಾ ವಲಯ ಭಾರತದ ಮೇಲೆ ಬೀರುವ ಪರಿಣಾಮ ಅಂಕಿ ಅಂಶಗಳು ಹೇಳುವುದಕ್ಕಿಂತಲೂ ಗಂಭೀರವಾಗಿದೆ. ಆಶ್ಚರ್ಯಕರ ವಿಚಾರವೆಂದರೆ, ಸರ್ಕಾರದ ಆರ್ಥಿಕ ನೀತಿಗಳ ಕುರಿತು ಅತ್ಯಂತ ಮಹತ್ವದ ಟೀಕೆ ವಿದೇಶಾಂಗ ಸಚಿವರಾದ ಎಸ್ ಜೈಶಂಕರ್ ಅವರಿಂದ ಬಂದಿದೆ. ಈ ವರ್ಷದ ಆರಂಭದಲ್ಲಿ ಸಂದರ್ಶನ ಒಂದರಲ್ಲಿ ಮಾತನಾಡಿದ ಅವರು ಚೀನಾದ ಆರ್ಥಿಕ ಸಬಲತೆ ನಮ್ಮ ಸರ್ಕಾರ ಗಡಿ ಅತಿಕ್ರಮಣವನ್ನು ಹೇಗೆ ಎದುರಿಸುತ್ತದೆ ಎನ್ನುವುದರ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದರು. ನಮ್ಮದೇ ಸಚಿವರ ಇಂತಹ ಹಿಂಜರಿಕೆಯ ನಿಲುವು ನಮ್ಮ ರಾಷ್ಟ್ರದ ಸ್ಥಾನ ಹಾಗೂ ಸೇನಾ ಪಡೆಗಳ ನೈತಿಕ ಸ್ಥೈರ್ಯದ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ, ಸರ್ಕಾರದ ಒಳಗೂ ಪ್ರಶ್ನೆಗಳು ಏಳುವಂತೆ ಮಾಡುತ್ತದೆ.

ಕಳೆದ ಒಂದು ದಶಕದ ಅವಧಿಯ ನೀತಿಗಳನ್ನು ಮರು ಪರಿಶೀಲನೆ ಮಾಡುವುದರಿಂದ, ಅವುಗಳನ್ನು ಸುಧಾರಿಸಲು ಸಾಕಷ್ಟು ಸಮಯ ಲಭಿಸುತ್ತದೆ. ಒಂದು ಯೋಜನೆ ನಿರಂತರವಾಗಿ ಅದರ ಗುರಿಯನ್ನು ಸಾಧಿಸಲು ವಿಫಲವಾಗುತ್ತಿದೆ ಎಂದರೆ, ಅದನ್ನು ಬದಿಗಿಟ್ಟು, ಇನ್ನಷ್ಟು ಪರಿಣಾಮಕಾರಿಯಾದ ಯೋಜನೆಯನ್ನು ಜಾರಿಗೆ ತರಲು ಸರಿಯಾದ ಸಂದರ್ಭ ಎಂದು ಸರ್ಕಾರ ಭಾವಿಸುವುದು ಅವಶ್ಯಕವಾಗಿದೆ.

ಲೇಖಕರು- ಗಿರೀಶ್ ಲಿಂಗಣ್ಣ
(ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News