ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಚಾಲನೆ

ಅಕ್ಟೋಬರ್ 10 ರಿಂದ 19 ರವರೆಗೆ ನಡೆಯುವ ದಸರಾ ವೈಭವವನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ ಪ್ರವಾಸಿಗರು ಅರಮನೆ ನಗರಿಗೆ ಆಗಮಿಸುತ್ತಾರೆ. 

Yashaswini V Yashaswini V | Updated: Oct 10, 2018 , 07:47 AM IST
ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಚಾಲನೆ

ಮೈಸೂರು: ನಾಡಿನ ಪರಂಪರೆ ಮತ್ತು ಸಾಂಪ್ರದಾಯಿಕ ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಇಂದು ಚಾಲನೆ ದೊರೆಯಲಿದ್ದು, ಇದಕ್ಕಾಗಿ ಮಧುವಣಗಿತ್ತಿಯಂತೆ ಸಿಂಗಾರಗೊಂಡ ಅರಮನೆ ನಗರ ವೈಭವೋಪೇತವಾಗಿ ಕಂಗೊಳಿಸುತ್ತಿದೆ. ನವರಾತ್ರಿಯ ವೈಭವಕ್ಕೆ ಬುಧವಾರ ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಗುವುದು. ಬೆಳಗ್ಗೆ 7.05ರಿಂದ 7.35ಕ್ಕೆ ಸಲ್ಲುವ ತುಲಾ ಲಗ್ನದ ಶುಭ ಮುಹೂರ್ತದಲ್ಲಿ ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ದಸರಾ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. 

ಅಕ್ಟೋಬರ್ 10 ರಿಂದ 19 ರವರೆಗೆ 20ಕ್ಕೂ ಹೆಚ್ಚು ಕಡೆ, 30ಕ್ಕೂ ಅಧಿಕ ಪ್ರಕಾರದ ಕಾರ್ಯಕ್ರಮಗಳು ಅನಾವರಣಗೊಳ್ಳಲಿವೆ. ಸಾಂಸ್ಕೃತಿಕ ನಗರಿಯಲ್ಲಿ ನಡೆಯುವ ದಸರಾ ವೈಭವವನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ ಪ್ರವಾಸಿಗರು ಅರಮನೆ ನಗರಿಗೆ ಆಗಮಿಸುತ್ತಾರೆ. 

ನಗರದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳನ್ನು ಝಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಇಂಡೋ ಸಾರ್ಸನಿಕ್ ಶೈಲಿಯಲ್ಲಿ ವೇದಿಕೆ ನಿರ್ಮಾಣವಾಗಿದೆ. ವಿವಿಧ ಪ್ರಕಾರಗಳ ಸಂಗೀತ, ನೃತ್ಯ ಕಾರ್ಯಕ್ರಮಗಳು, ಜಂಬೂಸವಾರಿ, ಪಂಜಿನ ಕವಾಯಿತು, ರೈತ ದಸರಾ, ಮಹಿಳಾ ಮತ್ತು ಮಕ್ಕಳ ದಸರಾ, ಮೆರವಣಿಗೆ ಮಾರ್ಗದಲ್ಲಿ ದೀಪಾಲಂಕಾರ, ದಸರಾ ವಸ್ತು ಪ್ರದರ್ಶನ, ಫಲಪುಷ್ಪ ಪದರ್ಶನ, ಪಾರಂಪರಿಕ ನಡಿಗೆ, ಹಾಫ್ ಮ್ಯಾರಥಾನ್, ದಸರಾ ಕ್ರೀಡಾಕೂಟ, ಯುವ ದಸರಾ, ಚಲನಚಿತ್ರೋತ್ಸವ, ಕುಸ್ತಿ ಪಂದ್ಯಾವಳಿ, ಕವಿಗೋಷ್ಠಿ ಮುಂತಾದ ಕಾರ್ಯಕ್ರಮಗಳನ್ನು ದಸರಾ ಅಂಗವಾಗಿ ಆಯೋಜಿಸಲಾಗಿದೆ.

ಅರಮನೆ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳು:

  • ಬೆಳಗ್ಗೆ 5.30 ಗಂಟೆಯಿಂದ 6 ಗಂಟೆಯವರೆಗೆ ಚಿನ್ನದ ಸಿಂಹಾಸನಕ್ಕೆ ಸಿಂಹದ ಮೂರ್ತಿಯನ್ನು ಜೋಡಣೆ ಮಾಡುವ ಕಾರ್ಯ ನೆರವೇರಲಿದೆ.
  • ಬೆಳಿಗ್ಗೆ 7 ಗಂಟೆಯಿಂದ 7.45 ರವರೆಗೆ ಮಹಾರಾಜ ಯಧುವೀರ್‌ಗೆ ಅರಮನೆಯ ಚಾಮುಂಡಿತೊಟ್ಟಿಯಲ್ಲಿ ಕಂಕಣಧಾರಣೆ ಮಹೋತ್ಸವ ನೆರವೇರಲಿದೆ.
  • ಬೆಳಿಗ್ಗೆ 10 ಗಂಟೆಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳು ಸವಾರಿ ತೊಟ್ಟಿಗೆ ಆಗಮಿಸಲಿವೆ. 
  • ನಂತರ ಕಳಸ ಪೂಜೆ ಹಾಗೂ ಇತರ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿವೆ.
  • ಬೆಳಿಗ್ಗೆ 11 ಗಂಟೆಯಿಂದ 12 ಗಂಟೆವರೆಗಿನ ಶುಭಘಳಿಗೆಯಲ್ಲಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನರೋಹಣ ಮಾಡುವ ಮೂಲಕ ಖಾಸಗಿ ದರ್ಬಾರು ಆರಂಭವಾಗಲಿದೆ. 
  • 1.42 ರಿಂದ 2 ಗಂಟೆ ಒಳಗೆ ಚಾಮುಂಡಿತೊಟ್ಟಿಯಲ್ಲಿರುವ ಮೈಸೂರು ಅರಸರ ಕುಲದೇವತೆಯಾಗಿರುವ ಚಾಮುಂಡೇಶ್ವರಿಯ ಮೂರ್ತಿಯನ್ನು ಕನ್ನಡಿ ತೊಟ್ಟಿಗೆ ಸ್ಥಳಾಂತರಿಸಿ ವಿಶೇಷ ಪೂಜೆ ನೆರವೇರಿಸಲಾಗುವುದು.