ದಲಿತರ ತಲ್ಲಣಗಳಿಗೆ ಹಿಪ್ ಹಾಪ್ ಸಂಗೀತ ಬೆಸೆದ ಈ ಜೆಎನ್ಯು ಹುಡುಗ!

   

Last Updated : Jul 29, 2018, 04:25 PM IST
ದಲಿತರ ತಲ್ಲಣಗಳಿಗೆ ಹಿಪ್ ಹಾಪ್ ಸಂಗೀತ ಬೆಸೆದ ಈ ಜೆಎನ್ಯು ಹುಡುಗ!  title=
Photo courtesy: Facebook

ಹಿಪ್ ಹಾಪ್ ಸಂಗೀತ ಮೂಲತಃ ಅಮೆರಿಕಾದ ನ್ಯೂಯಾರ್ಕ್ ನಲ್ಲಿ ಉಪಸಂಸ್ಕೃತಿಯನ್ನು ಪ್ರತಿನಿಧಿಸುವ ಸಾಂಸ್ಕೃತಿಕ ಚಳುವಳಿಯಾಗಿ 70ರ ದಶಕಾರ್ಧದಲ್ಲಿ ರೂಪುಗೊಂಡಿತು.ಅದರಲ್ಲೂ ಪ್ರಮುಖವಾಗಿ ವರ್ಣಬೇದಕ್ಕೆ ತುತ್ತಾದ ಆಫ್ರಿಕನ್ ಅಮೇರಿಕನ್ ಸಮುದಾಯವು ತಮ್ಮ ಆಕ್ರೋಶ ಮತ್ತು ತಲ್ಲಣಗಳಿಗೆ ಪ್ರತಿಕ್ರಿಯೆಯ ಮಾರ್ಗವಾಗಿ ಇಂತಹ ಚಳುವಳಿಯನ್ನು ಹುಟ್ಟು ಹಾಕಿತು.

ಈಗ ಇಲ್ಲೂಬ್ಬ ವ್ಯಕ್ತಿ ಇದೇ ಮಾದರಿಯ ಹಿಪ್ ಹಾಪ್ ಅಥವಾ ರಾಪ್ ಸಂಗೀತದ ಮೂಲಕ ಹೆಸರು ಮಾಡುತ್ತಿದ್ದಾನೆ.ಆತನ ಹೆಸರು ಸುಮೀತ್ ಸಮೊಸ್. ಇತ ಈಗ ದಲಿತರ ನೋವುಗಳಿಗೆ ಪ್ರತಿಭಟನೆಯ ಧ್ವನಿಯಾಗಿ ಹಿಪ್ ಹಾಪ್ ಮಾದರಿಯ ಸಂಗೀತವನ್ನು ಬಳಸುತ್ತಿದ್ದಾನೆ. ಈಗಾಗಲೇ ಇದಕ್ಕೆ ಪೂರಕ ಎನ್ನುವಂತೆ  'ಲಡಾಯಿ ಸೀಕ ಲೆ' ಎನ್ನುವ ಹಿಪ್ ಹಾಪ್ ವಿಡಿಯೋ ಮೂಲಕ ಈಗ ದಲಿತರ ಕಥನಗಳನ್ನು ಹೇಳ ಹೊರಟಿದ್ದಾನೆ.ಸುಮೀತ್ ಸಮೊಸ್ ಮೂಲತಃ ಓಡಿಸ್ಸಾದ ಹಿಂದುಳಿದ ಕೊರಾಪುಟ್ ಜಿಲ್ಲೆಯವನು, ಇತ ಈಗ ದೆಹಲಿಯ ಜವಾಹರ್ ಲಾಲ್ ನೆಹರು ವಿವಿಯಲ್ಲಿ ಲ್ಯಾಟಿನ್ ಅಮೆರಿಕಾದ ಸಾಹಿತ್ಯದಲ್ಲಿ ಸ್ನಾತ್ತಕೊತ್ತರ್ ಪದವಿಯನ್ನು ಪಡೆದಿದ್ದಾನೆ. ಈಗಾಗಲೇ ತಮ್ಮ ಜಾತಿ ವಿರೋಧಿ ಕುರಿತಾದ ಇಂಗ್ಲಿಷ್ ಕವಿತೆಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದಾನೆ. 

ಈ ಸುಮಿತ್ ನ ಹಿಪ್ ಹಾಪ್ ನ ಪ್ರತಿಸ್ಪಂಧನೆ ನೋಡುವುದಾದರೆ ಇದು ಪ್ರಮುಖವಾಗಿ ಇಂಗ್ಲಿಷ್ ಅಧ್ಯಯನದಿಂದ ಜಾಗೃತಗೊಂಡ ಮೂರನೇ ತಲೆಮಾರಿನ ಶೋಷಿತ ವರ್ಗವನ್ನು ಪ್ರತಿಬಿಂಬಿಸುವಂತಿದೆ. ಆದ್ದರಿಂದಲೇ ವಿವಿ ಗಳಲ್ಲಿ ಅನುಭವಿಸುತ್ತಿರುವ ನವೀನ ಮಾದರಿಯ ವೈದಿಕತೆಯನ್ನು ಪ್ರಶ್ನಿಸುವಂತಹ ಪ್ರವೃತ್ತಿಯನ್ನು ಈಗ ವಿವಿಗಳಲ್ಲಿ ಅಂಬೇಡ್ಕರ್ವಾದಿ ವಿದ್ಯಾರ್ಥಿ ಸಂಘಟನೆಗಳ ಮೂಲಕ ಕಾಣುತ್ತಿದ್ದೇವೆ.

ಇನ್ನು ನಾವಿರುವ ಕಾಲಘಟ್ಟಕ್ಕೆ ಬರುವುದಾದರೆ ಪ್ರತಿದಿನ ದೇಶದಲ್ಲಿ ದಲಿತರ ಮೇಲೆ ಜಾತಿ ನಿಂದನೆ ಮತ್ತು ಅತ್ಯಾಚಾರದಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿವೆ. ಅಧಿಕಾರದ ಮೇರು ಪರ್ವತದಲ್ಲಿರುವ ಫ್ಯಾಸಿವಾದಿ ಶಕ್ತಿಗಳು ಇಂತಹ ಎಲ್ಲ ಸಂಗತಿಗಳಲ್ಲಿ ಪ್ರಾರಮ್ಯ ಮೆರೆಯುತ್ತಿವೆ. ಹೀಗಾಗಿ ಪ್ರತಿದಿನ ನಡೆಯುವ ಈ ಎಲ್ಲ ಘಟನಾವಳಿಗಳು ಪ್ರಾಯೋಜಿತ ಎನ್ನುವಷ್ಟರ ಮಟ್ಟಿಗೆ ಪುಷ್ಟಿ ನೀಡುತ್ತಿವೆ.

ಕರಮ್ ಚೇಡು, ಕಂಬಾಲಪಲ್ಲಿ, ಹಾಗೂ ಬಿಹಾರದಲ್ಲಿನ ಲಕ್ಸಾಮ್ಪುರ್ ದಂತಹ ಪ್ರಕರಣಗಳು ನಮ್ಮ ಸ್ಮೃತಿಯಿಂದ ಮಾಸುವ ಮುನ್ನವೇ ರೋಹಿತ ವೇಮುಲಾ,ಹಾಗೂ ಉನಾದಂತಹ ಘಟನೆಗಳು ನಮ್ಮ ಕಣ್ಣೆದುರಿಗೆ ಬರುತ್ತವೆ.ಇದಕ್ಕೆ ಸರ್ಕಾರಗಳು ಕೂಡ ಇಂತಹ ಘಟನಗಳಲ್ಲಿ ಜಾಣಮೌನ ವಹಿಸಿರುವುದು ಸವರ್ಣೀಯ ನಡೆಗಳಿಗೆ ಪರೋಕ್ಷ ಬೆಂಬಲ ನೀಡುವಂತಹ ನಿಲುವುಗಳನ್ನು ದಿನವಿಡಿ ನಡೆಯುತ್ತಿರುವ ವಿಧ್ಯಮಾನಗಳಲ್ಲಿ ನೋಡುತ್ತಿದ್ದೇವೆ.

ಇಂತಹ ಕಾಲಘಟ್ಟದಲ್ಲಿ ಧಮನಿತರ ಪ್ರಾತಿನಿಧಿಕ ಧ್ವನಿಯಾಗಿ ಸುಮಿತ್ ಸಮೊಸ್ನಂತವರು ಅಂಬೇಡ್ಕರ್ ಸಾಂಸ್ಕೃತಿಕ ಚಳುವಳಿಯಲ್ಲಿ ಛಾಪು ಮೂಡಿಸುತ್ತಿದ್ದಾರೆ. 

ಸುಮೀತ್  ಸಮೋಸ್ ಜಾತಿ ವ್ಯವಸ್ಥೆಯನ್ನು ವಿರೋಧಿಸುವ ಕವಿತೆಯೊಂದರಲ್ಲಿ ಹೇಳುವಂತೆ 

"ನೀವು ನನ್ನ ಅಸ್ತಿತ್ವವನ್ನು ನಿರಾಕರಿಸಿದಿರಿ,
ಜಾತಿ ನಿಮಗೆ ಹೆಮ್ಮ ಮತ್ತು ಮಾರ್ಗದರ್ಶನವಾಗಿತ್ತು 
ಈಗೆಲ್ಲಾ ನಂದೇ ಉಪಸ್ಥಿತಿ
ನಾ ಆಡುವ ಮಾತುಗಳು ನಿಮ್ಮನ್ನು ಗಾಸಿಗೊಳಿಸಲಿವೆ 
ನನ್ನ ಪೂರ್ವಿಕರ ಪಾಠಗಳೇ ನನಗೆ ಮಾರ್ಗದರ್ಶನ 
ಸಾಧ್ಯವಾದರೆ ಸ್ವೀಕರಿಸಿ ಇಲ್ಲ ಬಿಡಿ 
ಪ್ರೇಕ್ಷಕರಾಗಿ ಅಥವಾ ಸಾಧ್ಯವಾದರೆ ನನ್ನ ವಿರುದ್ದ ಹೋರಾಡಿ
ಈ ನದಿಯ ಹರಿವು ಎಲ್ಲಿಗೆ ತಲುಪುತ್ತೆ ಎನ್ನುವುದನ್ನು ನಾ ನಿರ್ಧರಿಸುವೆ 
ಸಂಕ್ಷಿಪ್ತಗೊಳಿಸುವುದಾದರೆ 
ನಮ್ಮದು ಕೇವಲ ತುಂಡಿಗಾಗಿ ಅಲ್ಲ ಹೋರಾಟ 
ಇಡೀ ಭಾಗವನ್ನೇ ವಶಪಡಿಸಿಕೊಳ್ಳತ್ತೇವೆ."

-ಕಟು ಸತ್ಯ

ಸುಮೀತ್ ತನ್ನ 'ಲಡಾಯಿ ಸೀಕ್ ಲೆ' ಕುರಿತಾಗಿ ಪ್ರತಿಕ್ರಯಿಸುತ್ತಾ"  ಇದು ಟಿಸರ್ ನಲ್ಲಿನ ಒಂದು ಭಾಗವಷ್ಟೇ. ಪೂರ್ಣ ವಿಡಿಯೋ ಬಿಡುಗಡೆಯಾಗುವ ಮೊದಲು ಈ ಚಿತ್ರಣದ ಅರ್ಥವನ್ನು ಒಂದು ಅಥವಾ ಎರಡು ದೃಶ್ಯಗಳಲ್ಲಿ ನೀಡುವ ಪ್ರಯತ್ನ ಮಾಡಿದ್ದೇನೆ. ನನ್ನ ಹಿಂದೆ ಇರುವ ನೀಲಿ ಗೋಡೆಯು ಶತಮಾನಗಳವರೆಗೆ ನಿರ್ಮಿಸಲಾದ ಜಾತಿ ವಿರೋಧಿ ಚಳವಳಿ ಕೋಟೆಯ ಮಹತ್ವವನ್ನು ತಿಳಿಸುತ್ತದೆ. ಇಲ್ಲಿನ ಪ್ರತಿ ಇಟ್ಟಿಗೆಯು ಕೂಡ ಬುದ್ದ, ಕಬೀರ್, ಗುರುನಾನಕ್, ರವಿದಾಸ್, ಪುಲೆ,ಸಾವಿತ್ರಿಬಾಯಿ, ಪೂಲನ್ ದೇವಿ, ರಮಾಬಾಯಿ, ಅಸಿಮ್ ಬಿಹಾರಿ, ಅಯಂಕಾಲಿ, ಜ್ಯೋತಿ ತಾಸರ್, ಪೆರಿಯಾರ್, ಬಾಬಾಸಾಹೇಬ್, ಕಾನ್ಶಿರಾಂ ಇನ್ನು ಹಲವು ಜಾತಿ ವಿರೋಧಿ ವಿಮೋಚಕರನ್ನು ಪ್ರತಿನಿಧಿಸುತ್ತದೆ" ಎಂದು ಸುಮೀತ್ ತಮ್ಮ ನೂತನ ರಾಪ್ ಸಂಗೀತದ ವೀಡಿಯೋ ಕುರಿತಾಗಿ ಹೇಳುತ್ತಾರೆ.

ಹೀಗೆ ಸುಮಿತ್ ಸಮೊಸ್ ನ ಹಿಪ್ ಹಾಪ್ ಸಂಗೀತವು ಆಧುನಿಕ ಭಾರತದಲ್ಲಿನ Dalit upsurge ನ ಮೂರನೇ ತಲೆಮಾರಿನ ಮುಂದುವರೆದ ಭಾಗದಂತಿದೆ. ಈಗಾಗಲೇ ಮಹಾರಾಷ್ಟ್ರದ ಶೀತಲ್ ಸಾತೆ, ಸಚಿನ್ ಮಾಳಿ, ಪಂಜಾಬಿನ ಗಿನ್ನಿ ಮಹಿಯಂತಹ ಹಾಡುಗಾರರು ಈ ಹೊಸ ಮಾದರಿಯ ಪ್ರತಿಭಟನಾ ವಿಧಾನವನ್ನು ಸಂಗೀತದಲ್ಲಿ ಪ್ರಯೋಗಿಸುತ್ತಿರುವುದು ಅಂಬೇಡ್ಕರವಾದಿ ಸಾಂಸ್ಕೃತಿಕ ಚಳುವಳಿಯನ್ನು ವಿಸ್ತರಿಸುವಂತೆ ಮಾಡಿದೆ.

Trending News