ನವದೆಹಲಿ: ಬಾಲಿವುಡ್ ನಲ್ಲಿ ಇತ್ತೀಚಿಗೆ ಬಾಲಿವುಡ್ ನಟಿ ಮಲೈಕಾ ಆರೋರಾ ಹಾಗೂ ಅರ್ಜುನ್ ಕಪೂರ್ ನಡುವಿನ ಲವ್ವಿ ಡವ್ವಿ ಸಮಾಚಾರ ಕೆಲವು ತಿಂಗಳಿಂದ ನಡೆಯುತ್ತಲೇ ಇದೆ. ಇತ್ತೀಚಿಗೆ ಇವರಿಬ್ಬರು ಮಾಲ್ಡಿವ್ಸ್ ಗೆ ಗುಟ್ಟಾಗಿ ಪ್ರವಾಸ ಮಾಡಿಕೊಂಡು ಬಂದಿದ್ದು ಈಗ ಗುಟ್ಟಾಗಿ ಅಂತೂ ಉಳಿದಿಲ್ಲ.
ಈ ಜೋಡಿಗಳು ಆಗಾಗ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು ಕೂಡ, ಯಾರು ತಮ್ಮ ಸಂಬಂಧದ ಕುರಿತಾಗಿ ಮುಕ್ತವಾಗಿ ಮಾತನಾಡಿರಲಿಲ್ಲ. ಆದರೆ ಮಾಧ್ಯಮಗಳಲ್ಲಿ ಈ ಜೋಡಿಗಳು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಗಳು ಪ್ರಕಟವಾಗಿದ್ದವು.ಈ ಕುರಿತಾಗಿ ಈಗ ಡಿ.ಎನ್.ಎ ಗೆ ನೀಡಿರುವ ಸಂದರ್ಶನದಲ್ಲಿ ಮಲೈಕಾ ಜೊತೆಗಿನ ಮದುವೆ ವಿಚಾರವಾಗಿ ಪ್ರಶ್ನಿಸಿದಾಗ ಉತ್ತರಿಸಿದ ಅರ್ಜುನ್ ಕಪೂರ್ "ಇಲ್ಲ, ನನಗೆ ಈಗ 33 ವರ್ಷ, ಮದುವೆ ಆಗುವ ಅವಸರದಲ್ಲಿ ನಾನಿಲ್ಲ, ನಾನು ಹೀಗೆ ಹೇಳುತ್ತಿರುವಾಗ ನನ್ನ ಮಾತುಗಳನ್ನು ಗಣನೆಗೆ ತೆಗೆದುಕೊಳ್ಳಬೇಕು" ಎಂದು ಹೇಳಿದರು.
ನಿರಂತರವಾಗಿ ಮದುವೆ ವಿಚಾರವಾಗಿ ಹಬ್ಬಿರುವ ಊಹಾಪೋಹಗಳ ಬಗ್ಗೆ ಗಮನ ಸೆಳೆದಾಗ ಉತ್ತರಿಸಿದ ಅರ್ಜುನ್ ಕಪೂರ್ "ಊಹಾಪೋಹಗಳು ಕೆಟ್ಟದ್ದೇನಲ್ಲ. ಅದನ್ನು ನಾನು ಒಪ್ಪುತ್ತೇನೆ, ಆದರೆ ಅದಕ್ಕೆ ಯಾವಾಗಲು ಪ್ರತಿಕ್ರಿಯಿಸಲು ನಾನು ಇಷ್ಟಪಡುವುದಿಲ್ಲ.ಈ ವಿಚಾರವಾಗಿ ಸಾಕಷ್ಟು ಗಾಸಿಪ್ ಗಳಿವೆ, ಆದರೆ ಇದಕ್ಕೂ ಮೊದಲು ನಂಬುತ್ತಿದ್ದ ಜನರು ಕೂಡ ಅದನ್ನು ನಂಬುತ್ತಿಲ್ಲ. ಆದರೆ ಇದಕ್ಕೆ ನನಗೇನೂ ವಿರೋಧವಿಲ್ಲ" ಎಂದು ಉತ್ತರಿಸಿದರು.ಇದೇ ವೇಳೆ ಆರೋರಾ ನಿಮಗೆ ಸ್ಪೆಷಲ್ಲಾ ? ಎಂದು ಪ್ರಶ್ನಿಸಿದಾಗ "ಖಂಡಿತ ಹೌದು" ಎಂದು ಉತ್ತರಿಸಿದರು.