ಬೆಂಗಳೂರು: ಕರುನಾಡಿನ ಪ್ರೀತಿಯ ‘ಅಪ್ಪು’, ಅಭಿಮಾನಿಗಳ ಪಾಲಿನ ‘ಪವರ್ ಸ್ಟಾರ್, ‘ಕನ್ನಡದ ಕಲಾರತ್ನ’ ನಟ ಪುನೀತ್ ರಾಜ್ ಕುಮಾರ್ ವಿಧಿವಶ(Puneeth Rajkumar Dead)ರಾಗಿದ್ದಾರೆ. ಹೃದಯಾಘಾತದಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ನಟ ಪುನೀತ್ ಇಹಲೋಕ ತ್ಯಜಿಸಿದ್ದಾರೆ. ನೆಚ್ಚಿನ ನಟನ ನಿಧನದ ಸುದ್ದಿಯು ಲಕ್ಷಾಂತರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ. ಪುನೀತ್ ನಿಧನದಿಂದ ಕನ್ನಡ ಚಿತ್ರರಂಗವು ಅನಾಥವಾದಂತಾಗಿದೆ. ಹಿರಿಯ ನಟರು, ನಿರ್ಮಾಪಕರು, ನಿರ್ದೇಶಕರು, ರಾಜಕೀಯ ಗಣ್ಯರು ಸೇರಿದಂತೆ ಅನೇಕರು ಪುನೀತ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಫಿಟ್ ಅಂಡ್ ಫೈನ್ ಆಗಿದ್ದ ಪುನೀತ್ ರಾಜ್ ಕುಮಾರ್(Puneeth Rajkumar) ಸದಾ ನಗುಮೊಗದಿಂದಲೇ ಇರುತ್ತಿದ್ದರು. ಸದಾ ಚಟುವಟಿಕೆಯಿಂದ ಇರಲು ಬಯಸುತ್ತಿದ್ದ ಅವರು ಪ್ರತಿದಿನ ತಪ್ಪದೇ ವರ್ಕೌಟ್ ಮಾಡುವುದನ್ನು ರೂಢಿಸಿಕೊಂಡಿದ್ದರು. ಕೇವಲ 46ನೇ ವಯಸ್ಸಿನಲ್ಲಿ ಬಾರದ ಲೋಕಕ್ಕೆ ಪಯಣಿಸಿರುವ ನಟನ ಸಾವಿಗೆ ಇಡೀ ಕರುನಾಡಿನ ಜನತೆಯೇ ಕಂಬನಿ ಮಿಡಿಯುತ್ತಿದೆ. ತಮ್ಮ ಅದ್ಭುತ ಅಭಿನಯದ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ‘ದೊಡ್ಮನೆ ಹುಡುಗ’ ಇನ್ನು ಅನೇಕ ಸಿನಿಮಾಗಳಲ್ಲಿ ಮಿಂಚಬೇಕಾಗಿತ್ತು. ಇಷ್ಟು ಸಣ್ಣ ವಯಸ್ಸಿನಲ್ಲಿ ಪುನೀತ್ ರಾಜ್ ಕುಮಾರ್ ನಿಧನರಾಗಿರುವುದು ಅವರ ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಬೆಂಗಳೂರಿನ ಸದಾಶಿವನಗರದಲ್ಲಿರುವ ನಿವಾಸದಲ್ಲಿ ಇರಿಸಿದ್ದ ಪಾರ್ಥಿವ ಶರೀರ ನೋಡಲು ಅಭಿಮಾನಿಗಳ ದಂಡೇ ಆಗಮಿಸಿತ್ತು. ನೆಚ್ಚಿನ ನಟನನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ದೃಶ್ಯ ಈ ವೇಳೆ ಕಂಡುಬಂತು. ಎಲ್ಲರನ್ನೂ ಇದೀಗ ಕಾಡುತ್ತಿರುವ ಪ್ರಶ್ನೆ ಇಷ್ಟು ಸಣ್ಣ ವಯಸ್ಸಿನಲ್ಲಿ ‘ಅಪ್ಪು’ ನಿಧನಕ್ಕೆ ಕಾರಣವೇನು? ಎಂಬ ಪ್ರಶ್ನೆ.
ಇದನ್ನೂ ಓದಿ: RIP Puneeth Rajkumar: ಪುನೀತ್ ರಾಜ್ ಕುಮಾರ್ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು
ಹೌದು, ಸದ್ಯ ಈ ಪ್ರಶ್ನೆ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸುತ್ತಿದ್ದ ನಟ ಪುನೀತ್ ರಾಜ್ ಕುಮಾರ್ ಫಿಟ್ ಅಂಡ್ ಫೈನ್ ಆಗಿರಲು ಬಯಸುತ್ತಿದ್ದರು. ಹೀಗಾಗಿ ಪ್ರತಿದಿನವೂ ತಪ್ಪದಂತೆ ಜಿಮ್ ನಲ್ಲಿ ಬೆವರಿಳಿಸುತ್ತಿದ್ದರು. ಅಪ್ಪು ಅತಿಯಾಗಿ ಮಾಡುತ್ತಿದ್ದ ವರ್ಕೌಟ್ ಅವರ ಜೀವಕ್ಕೆ ಮಾರಕವಾಯ್ತಾ? ಅನ್ನೋ ಪ್ರಶ್ನೆ ಕಾಡುತ್ತಿದೆ. ತಮ್ಮ ದೇಹವನ್ನು ಹುರಿಗೊಳಿಸಲು ಅಪ್ಪು ದಿನದ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರಂತೆ. ತಮ್ಮ ಮುಂದಿನ ಚಿತ್ರದ ಸಿದ್ಧತೆಗೆ ಅವರು ಮತ್ತಷ್ಟು ಸ್ಮಾರ್ಟ್ ಅಂಡ್ ಸ್ಲಿಮ್ ಆಗಿ ಕಾಣಲು ಕಠಿಣ ಪರಿಶ್ರಮ ಪಡುತ್ತಿದ್ದರಂತೆ.
ದೇಹವನ್ನು ಚೆನ್ನಾಗಿ ಇಟ್ಟುಕೊಂಡು ಆಕರ್ಷಕವಾಗಿ ಕಾಣಬೇಕು. ಅಭಿಮಾನಿಗಳಿಗೆ ಇನ್ನಷ್ಟು ಅತ್ಯುತ್ತಮ ಚಿತ್ರಗಳನ್ನು ಕೊಡಬೇಕು ಅನ್ನೋ ಬಯಕೆಯಿಂದ ಅಪ್ಪು ಹೆಚ್ಚೆಚ್ಚು ವರ್ಕೌಟ್(Gym Workout) ಮಾಡುತ್ತಿದ್ದರಂತೆ. ಏನೇ ತಪ್ಪಿಸಿದ್ರೂ ಜಿಮ್ ಮಾತ್ರ ತಪ್ಪಿಸುತ್ತಿರಲಿಲ್ಲವಂತೆ. ಸದಾಶಿವನಗರದ ಮನೆ ಬಿಟ್ಟರೆ ಜಿಮ್ ಹೀಗೆ ಪುನೀತ್ ಅವರ ದಿನಚರಿಯ ಚಟುವಟಿಕೆಯ ತಾಣಗಳಾಗಿದ್ದವು. ಮನೆಯಲ್ಲಿಯೂ ಅಪ್ಪು ವರ್ಕೌಟ್ ಮಾಡುತ್ತಿದ್ದರಂತೆ. ಗಂಟೆಗಟ್ಟಲೇ ವರ್ಕೌಟ್ ಮಾಡುತ್ತಿದ್ದ ಅವರಿಗೆ ಅದುವೇ ಮುಳುವಾಯ್ತಾ ಅನ್ನೋ ಪ್ರಶ್ನೆ ಕಾಡುತ್ತಿದೆ.
ಇದನ್ನೂ ಓದಿ: Puneeth Rajkumar No More: ‘ಚಂದನವನ’ದಿಂದ ಮರೆಯಾದ 'ದೊಡ್ಮನೆ ಹುಡ್ಗ'
ನಿನ್ನೆಯಷ್ಟೇ(ಅ.28) ಸ್ನೇಹಿತರೊಬ್ಬರ ಬರ್ತ್ ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದ ಪುನೀತ್ ರಾಜ್ ಕುಮಾರ್(Puneeth Rajkumar) ಇಂದು ಬೆಳಗ್ಗೆ ಶಿವಣ್ಣರ ‘ಭಜರಂಗಿ-2’ ರಿಲೀಸ್ ಹಿನ್ನೆಲೆ ಟ್ವೀಟ್ ಮಾಡಿ ಶುಭ ಹಾರೈಸಿದ್ದರು. ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಅವರು ಅಸ್ವಸ್ಥಗೊಂಡಿದ್ದಾರೆ. ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಮೊದಲು ರಮಣಶ್ರೀ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ವಿಕ್ರಂ ಆಸ್ಪತ್ರೆಗೆ ರವಾನಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ