ಬೆಂಗಳೂರು: ‘ಕೆಜಿಎಫ್-2’ ಅಬ್ಬರಕ್ಕೆ ಎಲ್ಲೆಲ್ಲೂ ಬಿರುಗಾಳಿ ಎದ್ದಿದೆ. ಜಗತ್ತಿನಾದ್ಯಂತ ‘ಕೆಜಿಎಫ್’ ಅಬ್ಬರದ ಎದುರು ಇತರ ಸಿನಿಮಾಗಳಿಗೆ ನಡುಕ ಶುರುವಾಗಿದೆ. ಅದರಲ್ಲೂ ಹಾಲಿವುಡ್ ಸಿನಿಮಾಗಳು ಕೂಡ ಈ ಸಿನಿಮಾದ ಎದುರು ನಲುಗಿವೆ. ಈಗಾಗಲೇ ‘ಕೆಜಿಎಫ್ ಚಾಪ್ಟರ್ 2’ ರಿಲೀಸ್ ಆಗಿ 12 ದಿನ ಕಳೆದಿದ್ದರೂ, ಕನ್ನಡದ ಸಿನಿಮಾ ಹವಾ ಮಾತ್ರ ಕಡಿಮೆಯಾಗಿಲ್ಲ. ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಬಂದ ‘ಕೆಜಿಎಫ್-2’ ಗಲ್ಲಾ ಪೆಟ್ಟಿಗೆಯನ್ನೇ ಉಡೀಸ್ ಮಾಡುವ ಮುನ್ಸೂಚನೆ ನೀಡಿತ್ತು. ಅದರಂತೆ ಸಾವಿರ ಕೋಟಿ ರೂ. ಕ್ಲಬ್ ತಲುಪಲು ‘ಕೆಜಿಎಫ್-2’ಗೆ ಕೆಲವೇ ಹೆಜ್ಜೆಗಳು ಬಾಕಿ ಉಳಿದಿದೆ.
ಕನ್ನಡ ಸಿನಿಮಾ ಯಾವ ಮಟ್ಟಿಗೆ ಹವಾ ಎಬ್ಬಿಸಿದೆ ಅಂದ್ರೆ, ಜಗತ್ತಿನ ಮೂಲೆ ಮೂಲೆಯಲ್ಲೂ ‘ಕೆಜಿಎಫ್-2’ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಯಾರ ಬಾಯಲ್ಲಿ ಕೇಳಿದರೂ ಕೆಜಿಎಫ್.. ಕೆಜಿಎಫ್… ಅನ್ನೋ ಪದವೇ ಕೇಳಿಬರುತ್ತಿದೆ. ಅದರಲ್ಲೂ ಉತ್ತರ ಭಾರತದ ಪ್ರೇಕ್ಷಕರು ‘ಕೆಜಿಎಫ್-2’ ಕಣ್ತುಂಬಿಕೊಂಡು ಫಿದಾ ಆಗಿದ್ದಾರೆ. ಗಲ್ಲಾ ಪೆಟ್ಟಿಗೆಯಲ್ಲಿ ಮೊದಲ ದಿನದಿಂದಲೂ ಗುಡುಗುತ್ತಲೇ ಬಂದಿದ್ದ ಈ ಸಿನಿಮಾ ಈಗಾಗಲೇ 900 ಕೋಟಿ ರೂ.ಗೂ ಹೆಚ್ಚು ಹಣ ಬಾಚಿಕೊಂಡಿದೆ. ಇನ್ನೇನು ಸಾವಿರ ಕೋಟಿ ರೂ. ಗಳಿಕೆಗೆ ಸನಿಹದಲ್ಲಿದ್ದು, ಹೊಸ ಹೊಸ ರೆಕಾರ್ಡ್ ಕ್ರಿಯೇಟ್ ಮಾಡುತ್ತಿದೆ.
ಇದನ್ನೂ ಓದಿ: ಹೊಸ ಪರ್ವ! ಯುವರಾಜ್‌ಕುಮಾರ್‌ಗೆ ಹೊಂಬಾಳೆ ಫಿಲ್ಮ್ಸ್ ಮುನ್ನುಡಿ!?
10 ಸಾವಿರಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಬಿಡುಗಡೆ
ಒಂದು ಕಡೆ 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದ್ದ ‘ಕೆಜಿಎಫ್-2’ ಸಿನಿಮಾ ರಿಲೀಸ್‌ಗೂ ಮೊದಲೇ 500 ಕೋಟಿ ರೂ. ಗಳಿಸಿತ್ತು ಎನ್ನಲಾಗಿತ್ತು. ಇದನ್ನು ಹೊರತುಪಡಿಸಿ ರಿಲೀಸ್ ಆದ ಬಳಿಕ ಕೇವಲ ಚಿತ್ರಮಂದಿರಗಳಿಂದಲೇ ಸುಮಾರು 900 ಕೋಟಿಗೂ ಹೆಚ್ಚು ಹಣ ಸಂಪಾದಿಸಿದೆ ಯಶ್ ಅಭಿನಯದ ಸಿನಿಮಾ. ಈ ಮೂಲಕ ಸ್ಯಾಂಡಲ್‌ವುಡ್ ಸಿನಿಮಾವೊಂದು ಜಗತ್ತಿನ ಗಲ್ಲಾ ಪೆಟ್ಟಿಗೆಯನ್ನು ಧೂಳ್ ಧೂಳ್ ಮಾಡುತ್ತಿದೆ. ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ‘ಕೆಜಿಎಫ್-2’ ಹೊಸದೊಂದು ಇತಿಹಾಸ ಸೃಷ್ಟಿಸುತ್ತಿದೆ.
ಭಾರೀ ಗಳಿಕೆಯಲ್ಲಿ ದಾಖಲೆ
ಭಾರತದ ಸಿನಿಮಾ ಒಂದು ರಿಲೀಸ್ ಆಗೋದಕ್ಕೂ ಮೊದಲೇ ಇಷ್ಟು ದೊಡ್ಡಮಟ್ಟದ ಹಣವನ್ನು ಗಳಿಸಿರೋದು ಇದುವರೆಗಿನ ದಾಖಲೆಗಳನ್ನು ಪುಡಿ ಪುಡಿ ಮಾಡಿದಂತಾಗಿದೆ. ‘ಕೆಜಿಎಫ್-2’ ಸಿನಿಮಾ ಹೊಸ ಹೊಸ ದಾಖಲೆ ನಿರ್ಮಿಸುವ ಜೊತೆಗೆ ಬಾಕ್ಸ್ ಆಫೀಸ್ ಕೂಡ ಉಡೀಸ್ ಮಾಡಿತ್ತು. ಹಿಂದೆಂದೂ ಕಾಣದ ದಾಖಲೆಗಳನ್ನು ಕನ್ನಡ ಸಿನಿಮಾ ಮಾಡಿ ತೋರಿಸುತ್ತಿದೆ. ಸಿನಿಮಾ ರಿಲೀಸ್ ಆಗಿ 12 ದಿನ ಕಳೆದರೂ ಸಾವಿರಾರು ಸ್ಕ್ರೀನ್‌ಗಳಲ್ಲಿ ಈಗಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.
ಇದನ್ನೂ ಓದಿ: KGF 2 ಸಿನಿಮಾ ಕಲಾವಿದರ ಸಂಭಾವನೆ ಎಷ್ಟು ಗೊತ್ತಾ?
ಕನ್ನಡಿಗರ ಹೆಮ್ಮೆಯ ಸಿನಿಮಾ
ಇದಿಷ್ಟೂ ಒಂದು ಕಡೆಯಾದರೆ ಮತ್ತೊಂದು ಕಡೆ ಹೊರ ದೇಶದಲ್ಲೂ ಕನ್ನಡ ಸಿನಿಮಾ ಭಾರೀ ಅಬ್ಬರ ತೋರುತ್ತಿದೆ. ಈ ಮೂಲಕ ಸಪ್ತ ಸಾಗರದ ಆಚೆಗೂ ಕನ್ನಡಿಗರ ಧ್ವನಿ ಮೊಳಗುತ್ತಿದೆ. ಸ್ಯಾಂಡಲ್‌ವುಡ್‌ನ ಕಂಪು ಹೊರ ದೇಶಕ್ಕೂ ಹಬ್ಬಿದ್ದು, ‘ಕೆಜಿಎಫ್-2’ ಕಣ್ತುಂಬಿಕೊಂಡ ವಿದೇಶಿಗರು, ವಾವ್ ವಾವ್ ಅಂತಿದ್ದಾರೆ. ಜೊತೆಗೆ ಕನ್ನಡ ಸಿನಿಮಾಗಳ ಬಗ್ಗೆ ಹೆಮ್ಮೆಯ ಮಾತುಗಳನ್ನು ಆಡುತ್ತಿದ್ದಾರೆ. ಈ ಮೂಲಕ ಕನ್ನಡ ಸಿನಿಮಾಗಳ ಮಾರುಕಟ್ಟೆ ಜಾಗತಿಕ ಮಾರುಕಟ್ಟೆಯನ್ನೇ ಅಲುಗಾಡಿಸುತ್ತಿದೆ. ಇನ್ನೂ ಹಲವು ದಿನಗಳ ಕಾಲ ಇದೇ ರೀತಿ ‘ಕೆಜಿಎಫ್-2’ ಬಿರುಗಾಳಿ ಜಗತ್ತಿಗೆ ಅಪ್ಪಳಿಸಲಿದ್ದು, ಪ್ರೇಕ್ಷಕಪ್ರಭು 2-3 ಬಾರಿ ಸಿನಿಮಾ ಕಣ್ತುಂಬಿಕೊಳ್ಳುತ್ತಿದ್ದಾರೆ. ಇದು ಮತ್ತೊಂದು ದಾಖಲೆ ಎನ್ನಬಹುದು.
ಅಮೆರಿಕಾದಲ್ಲೂ ಅಬ್ಬರ!
ಉತ್ತರ ಅಮೆರಿಕಾದಲ್ಲಿ ಇದುವರೆಗೂ ಯಾವುದೇ ಭಾರತೀಯ ಸಿನಿಮಾ ನಿರ್ಮಿಸದ ದಾಖಲೆಗಳನ್ನು 'ಕೆಜಿಎಫ್' ಚಾಪ್ಟರ್ 2’ ಮಾಡಿ ತೋರಿಸುತ್ತಿದೆ. ಹೊರ ದೇಶಗಳಲ್ಲೇ 'ಕೆಜಿಎಫ್-2' ಸುಮಾರು 150 ಕೋಟಿ ರೂ.ಗೂ ಹೆಚ್ಚು ಸಂಪಾದನೆ ಮಾಡಿದೆ ಎನ್ನಲಾಗಿದೆ. ಅದರಲ್ಲೂ ಉತ್ತರ ಅಮೆರಿಕದ ಚಿತ್ರಮಂದಿರಗಳಲ್ಲಿ ಹತ್ತಾರು ಕೋಟಿ ವಸೂಲಿ ಮಾಡಿದ್ದಾನೆ ರಾಕಿಭಾಯ್. ಈಗಲೂ ಯುಎಸ್‌ನ ಹಲವು ಸಿನಿಮಾ ಮಂದಿರಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, ವೀಕೆಂಡ್ ಬಂದರೆ ಸಾಕು 'ಕೆಜಿಎಫ್-2' ಟಿಕೆಟ್ ಸಿಗುತ್ತಿಲ್ಲವಂತೆ. ಹಾಗೇ ಕೆನಡಾದಲ್ಲೂ ಇದೇ ರೀತಿ 'ಕೆಜಿಎಫ್' ಚಾಪ್ಟರ್ 2 ಹಬ್ಬ ನಡೆಯುತ್ತಿದೆ. ಎಲ್ಲೆಲ್ಲೂ ರಾಕಿ ಭಾಯ್ ಅಬ್ಬರ ಜೋರಾಗಿದೆ.
ಒಟ್ಟಾರೆ ಹೇಳೋದಾದ್ರೆ 'ಕೆಜಿಎಫ್' ಚಾಪ್ಟರ್-2' ಕನ್ನಡ ಚಿತ್ರರಂಗವನ್ನ ಜಾಗತಿಕ ಮಟ್ಟದಲ್ಲಿ ಮಿನುಗುವಂತೆ ಮಾಡುತ್ತಿದೆ. ಯಶ್ ಅಭಿಮಾನಿಗಳು ಹಾಗೂ 'ಕೆಜಿಎಫ್' ಫ್ಯಾನ್ಸ್ ಸಿನಿಮಾವನ್ನ ಹಬ್ಬದಂತೆ ಈಗಲೂ ಆಚರಿಸುತ್ತಿದ್ದಾರೆ. ಏಪ್ರಿಲ್ 14ರಂದು ಜಗತ್ತಿನಾದ್ಯಂತ ಶುರುವಾದ 'ಕೆಜಿಎಫ್' ಚಾಪ್ಟರ್ 2’ ಹಬ್ಬ ಇಂದಿಗೂ ಕಳೆಗುಂದಿಲ್ಲ. ಪ್ರತಿಯೊಂದು ಸಿನಿ ಮಂದಿರದಲ್ಲೂ 'ಕೆಜಿಎಫ್' ಚಾಪ್ಟರ್ 2 ಅಬ್ಬರಿಸುತ್ತಲೇ ಇದೆ. ರಾಕಿ ಭಾಯ್ ಅಭಿನಯ ಹಾಗೂ ಪ್ರಶಾಂತ್ ನೀಲ್ ಡೈರೆಕ್ಷನ್‌ಗೆ ಪ್ರೇಕ್ಷಕ ಪ್ರಭು ಫಿದಾ ಆಗಿದ್ದು, 'ಕೆಜಿಎಫ್' ಚಾಪ್ಟರ್ 3 ಯಾವಾಗ ಬರುತ್ತೆ ಅಂತಾ ಕಾಯುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.