ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Puneeth Rajkumar) 46ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಶುಕ್ರವಾರ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಕುರುನಾಡಿನ ಕಣ್ಮಣಿ ‘ಅಪ್ಪು’ ಕೊನೆಯುಸಿರೆಳೆದಿದ್ದಾರೆ. ತಮ್ಮ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಇನ್ನಿಲ್ಲವೆಂಬ ಸುದ್ದಿ ತಿಳಿದು ಅವರ ಅಭಿಮಾನಿಗಳು ಆಘಾತಗೊಂಡಿದ್ದಾರೆ. ನಿನ್ನೆಯಿಂದಲೇ ಬೆಂಗಳೂರಿನ ಕಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ನಾಡಿನ ಮೂಲೆ ಮೂಲೆಯಿಂದ ಬೆಂಗಳೂರಿನತ್ತ ಧಾವಿಸಿ ಬರುತ್ತಿರುವ ಲಕ್ಷಾಂತರ ಅಭಿಮಾನಿಗಳ ದಂಡು ಕಂಠೀರವ ಸ್ಟೇಡಿಯಂ(Kanteerava Stadium)ಗೆ ಭೇಟಿ ನೀಡುತ್ತಿದ್ದು, ಪುನೀತ್ ರಾಜ್ ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ನಡೆಯುತ್ತಿದ್ದಾರೆ. ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದ್ದು, ನೆಚ್ಚಿನ ನಟನನ್ನು ನೆನೆದು ಕಣ್ಣೀರಿಡುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಬಾರದ ಲೋಕಕ್ಕೆ ಪಯಣಿಸಿರುವ ಪುನೀತ್ ಅವರ ಪಾರ್ಥಿವ ಶರೀರವನ್ನು ನೋಡಿ ಅಭಿಮಾನಿಗಳು ಅಳುತ್ತಿದ್ದಾರೆ.
ಇದನ್ನೂ ಓದಿ: Puneeth Rajkumar No More: ‘ಚಂದನವನ’ದಿಂದ ಮರೆಯಾದ 'ದೊಡ್ಮನೆ ಹುಡ್ಗ'
ಶುಕ್ರವಾರ ರಾತ್ರಿ ಕಂಠೀರವ ಕ್ರೀಡಾಂಗಣಕ್ಕೆ ಪುನೀತ್ ಅವರ ಪಾರ್ಥಿವ ಶರೀರವನ್ನು ತರುತ್ತಲೇ ಅಭಿಮಾನಿಗಳ(Puneeth Rajkumar Fans) ದುಃಖದ ಕಟ್ಟೆ ಸ್ಫೋಟಗೊಂಡಿತ್ತು. ಅಪ್ಪು.. ಅಪ್ಪು… ಪುನೀತಣ್ಣ… ಸಾರ್ ಮತ್ತೆ ಹುಟ್ಟಿ ಬನ್ನಿ ಸಾರ್.. ಹೀಗೆ ಅಭಿಮಾನಿಗಳ ಘೋಷಣೆಗಳು ಮುಗಿಲು ಮುಟ್ಟಿದ್ದವು. ಭಾರೀ ನೂಕುನುಗ್ಗಲಿನಲ್ಲಿಯೇ ಸಾಗಿ ನೆಚ್ಚಿನ ನಟನಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.
ಇಂದು ಇಡೀ ದಿನ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ರಾಜ್ಯದ ವಿವಿಧ ಮೂಲೆಗಳಿಂದ ಅಭಿಮಾನಿಗಳು ಬಸ್, ರೈಲುಗಳ ಮೂಲಕ ಬೆಂಗಳೂರಿಗೆ ಬರುತ್ತಿದ್ದಾರೆ. ನಿನ್ನೆ ರಾತ್ರಿಯಿಂದಲೇ ತಂಡೋಪತಂಡವಾಗಿ ಅಭಿಮಾನಿಗಳು ಆಗಮಿಸುತ್ತಿದ್ದು, ಪುನೀತ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕಣ್ಣೀರಧಾರೆ ಸುರಿಸುತ್ತಿದ್ದಾರೆ.
ಇದನ್ನೂ ಓದಿ: ಬೆಟ್ಟದ ಹೂ’ ಮೂಲಕ ಬಾಲ್ಯದಲ್ಲಿಯೇ ಮೋಡಿ ಮಾಡಿದ್ದ ಪುನೀತ್ ರಾಜ್ ಕುಮಾರ್
ಸ್ಯಾಂಡಲ್ ವುಡ್(Sandalwood)ಸೇರಿದಂತೆ ಭಾರತೀಯ ಚಿತ್ರರಂಗದ ಹಿರಿಯ ನಟ-ನಟಿಯರು, ರಾಜಕೀಯ ನಾಯಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಕ್ರೀಡಾಂಗಣಕ್ಕೆ ಆಗಮಿಸಿ ಅಗಲಿದ ನಟನ ದರ್ಶನ ಪಡೆದು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಇಂದು ಸಂಜೆ ಬೆಂಗಳೂರಿಗೆ ಮೆಗಾಸ್ಟಾರ್ ಚಿರಂಜೀವಿ ಕೂಡ ಆಗಮಿಸಲಿದ್ದು, ಅಂತಿಮ ದರ್ಶನ ಪಡೆಯಲಿದ್ದಾರೆ. ತೆಲುಗು ಚಿತ್ರರಂಗದ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರು ಕೂಡ ಹೈದರಾಬಾದ್ ನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಇನ್ನು ವಿದೇಶದಲ್ಲಿರುವ ಪುನೀತ್ ರಾಜ್ ಕುಮಾರ್(Puneeth Rajkumar) ಪುತ್ರಿ ಧೃತಿ ಅವರು ವಿಶೇಷ ವಿಮಾನದಲ್ಲಿ ಅಮೆರಿಕದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ನಾಳೆ ಸಕಲ ಸರ್ಕಾರಿ ಗೌರವಗಳೊಂದಿಗೆ ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್ ಕುಮಾರ್ ಸಮಾಧಿ ಪಕ್ಕವೇ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ನೆರವೇರಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ