ಮುಂಬೈ: ಸೆಂಟ್ರಲ್ ಮುಂಬೈನ ನಾಯರ್ ಆಸ್ಪತ್ರೆಯಿಂದ ಐದು ದಿನಗಳ ಗಂಡು ಮಗುವನ್ನು ಅಪಹರಿಸಿದ ಪ್ರಕರಣವನ್ನು ಮುಂಬೈ ಪೊಲೀಸರು ಗುರುವಾರ ಭೇದಿಸಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಆಸ್ಪತ್ರೆಯಿಂದ ಮಗುವನ್ನು ಕದ್ದಿರುವ ಆರೋಪದ ಮೇಲೆ ಮಧ್ಯವಯಸ್ಕ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಆಸ್ಪತ್ರೆಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಫೂಟೇಜ್ ಆಧರಿಸಿ ಮಹಿಳೆಯನ್ನು ಗುರುತಿಸಲಾಗಿದ್ದು ಆಕೆಯನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.
ಆಸ್ಪತ್ರೆಯ ವಾರ್ಡ್ ಸಂಖ್ಯೆ 7 ರಲ್ಲಿ 5.30 ರ ವೇಳೆಗೆ ಈ ಘಟನೆ ಬೆಳಕಿಗೆ ಬಂದಿದೆ. ಮಗುವಿನ ತಾಯಿ ಶಿತಾಲ್ ಸಾಲ್ವಿ (34) ನಿದ್ರಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ.
ತಾಯಿ ಎಚ್ಚರಗೊಂಡಾಗ ಹಾಸಿಗೆ ಮೇಲೆ ಮಗು ಕಾಣದ ಕಾರಣ ತಕ್ಷಣ ಆಸ್ಪತ್ರೆ ಸಿಬ್ಬಂದಿಗೆ ಮಾಹಿತಿ ನೀಡಿದರು. ಸಿಬ್ಬಂದಿ ತಕ್ಷಣ ಆಸ್ಪತ್ರೆಯಲ್ಲಿ ಸಿಸಿಟಿವಿಗಳ ವೀಡಿಯೊ ತುಣುಕನ್ನು ಪರಿಶೀಲಿಸಿದಾಗ, ಅವರ ಮಗುವಿನೊಂದಿಗೆ ಆಸ್ಪತ್ರೆಯ ಹೊರಗೆ ಬರುತ್ತಿದ್ದ ಮಹಿಳೆಯನ್ನು ಪತ್ತೆ ಹಚ್ಚಿರುವುದಾಗಿ ಪೊಲೀಸರು ತಿಳಿಸಿದರು.
ಅಗ್ರಿಪಾಡಾ ಪೊಲೀಸರು ಐಪಿಸಿ ಸೆಕ್ಷನ್ 363 (ಅಪಹರಣ) ಅಡಿಯಲ್ಲಿ ಸುಮಾರು 40 ವರ್ಷ ವಯಸ್ಸಿನ ಅಪರಿಚಿತ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆಕೆಗಾಗಿ ಭಾರಿ ಶೋಧ ನಡೆಸಲಾಗಿತ್ತು.
ಮುಂಬೈನ ಸಾಂತಕ್ರೂಜ್ ಪ್ರದೇಶದ ಆಸ್ಪತ್ರೆಯಿಂದ ಮಹಿಳೆಯನ್ನು ತಡವಾಗಿ ಬಂಧಿಸಲಾಗಿದ್ದು, ಆಕೆಯಿಂದ ಗಂಡು ಮಗುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.