ನವದೆಹಲಿ: ಪುತ್ರಿ ಆರುಷಿ ತಲ್ವಾರ್ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ನೂಪುರ್ ಮತ್ತು ರಾಜೇಶ್ ತಲ್ವಾರ್ ದಂಪತಿಗಳು ಇಂದು ಬಿಡುಗಡೆಗೊಳ್ಳಲಿದ್ದಾರೆ. ಆದರೆ ಬಿಡುಗಡೆಯ ನಂತರವೂ ಕೈದಿಗಳಿಗೆ ದಂತ ಚಿಕಿತ್ಸೆ ನೀಡುವ ಸಲುವಾಗಿ 15 ದಿನಗಳಿಗೊಮ್ಮೆ ಜೈಲಿಗೆ ಹೋಗಲು ನಿರ್ಧರಿಸಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ವೃತ್ತಿಯಲ್ಲಿ ದಂತ ವೈದ್ಯರಾಗಿರುವ ತಲ್ವಾರ್ ದಂಪತಿಗಳು 2008ರ ಮೇ 16 ರಂದು ನೊಯಿಡಾದ ಅವರ ನಿವಾಸದಲ್ಲಿ ಅವರ ಪುತ್ರಿ ಆರುಷಿ ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ತನಿಖೆ ನಡಿಸಿ 2013ರಲ್ಲಿ ಸಿಬಿಐ ಕೋರ್ಟ್ ಅವರನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸಿತ್ತು. ನಂತರ ಅವರು ದಾಸ್ನ ಜೈಲಿನಲ್ಲಿ ಖೈದಿಗಳಾಗಿದ್ದರು.
ಸಿಬಿಐ ಕೋರ್ಟ್ ನೀಡಿದ್ದ ಶಿಕ್ಷೆಯನ್ನು ಪ್ರಶ್ನಿಸಿ ತಲ್ವಾರ್ ದಂಪತಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು, ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈ ಕೋರ್ಟ್ನ ನ್ಯಾಯಮೂರ್ತಿ ಬಿ.ಕೆ. ನಾರಾಯಣ ಮತ್ತು ನ್ಯಾಯಮೂರ್ತಿ ಎ.ಕೆ. ಮಿಶ್ರಾ ಅವರನ್ನೊಳಗೊಂಡ ಪೀಠವು ಅ.12 ರಂದು ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ದಂಪತಿಗಳನ್ನು ಖುಲಾಸೆಗೊಳಿಸಿ ಆದೇಶ ನೀಡಿತ್ತು.