ಭುವನೇಶ್ವರ: ಭಾರತದ ಯಶಸ್ವೀ ಕ್ಷಿಪಣಿ ಅಗ್ನಿ-2 ಮಧ್ಯಮ ದೂರಗಾಮಿ ಕ್ಷಿಪಣಿಯನ್ನು ಮಂಗಳವಾರ ಬೆಳಗ್ಗೆ ಒಡಿಶಾದ ಬಾಲಾಸೋರ್ ನ ಅಬ್ದುಲ್ ಕಲಾಂ ದ್ವೀಪದಿಂದ ಮೊಬೈಲ್ ಲಾಂಚರ್ ಮೂಲಕ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ಮಾಡಲಾಯಿತು.
ನೆಲದಿಂದ ನೆಲಕ್ಕೆ 2000 ಕಿ.ಮೀ. ದೂರದವರೆಗೂ ಚಿಮ್ಮಬಲ್ಲ ಈ ಕ್ಷಿಪಣಿಯ ಪರೀಕ್ಷೆಯು ಒಡಿಶಾ ಕಡಲ ತೀರದ ವ್ಹೀಲರ್ ದ್ವೀಪದಲ್ಲಿ ನಡೆಯಿತು. ಇಲ್ಲಿನ ಸಮಗ್ರ ಪರೀಕ್ಷಾ ವಲಯದ (ಐಟಿಆರ್) 4ನೇ ಉಡಾವಣಾ ಸಂಕೀರ್ಣದಿಂದ ಬೆಳಿಗ್ಗೆ ಚಿಮ್ಮಿದ ಕ್ಷಿಪಣಿ ಯಶಸ್ವಿಯಾಗಿ ಗುರಿ ತಲುಪಿತು ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.
ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ನೆರವಿನೊಂದಿಗೆ ಸೇನಾಪಡೆಯ ಸ್ಟ್ರಾಟಜಿಕ್ ಫೋರ್ಸ್ಸ್ ಕಮಾಂಡ್ (ಎಸ್ಎಫ್ಸಿ) ಈ ಪರೀಕ್ಷೆ ನಡೆಸಿತು. ಸೇನಾ ಪಡೆಗಳ ತರಬೇತಿಯ ಅಂಗವಾಗಿ ಈ ಪರೀಕ್ಷೆ ಏರ್ಪಡಿಸಲಾಗಿತ್ತು ಎಂದು ಡಿಆರ್ಡಿಒ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.
ಕ್ಷಿಪಣಿ ಸುಮಾರು 2000 ಕಿ.ಮೀ ವ್ಯಾಪ್ತಿಯ ಸಾಮರ್ಥ್ಯ ಹೊಂದಿದ್ದು, ಅಗ್ನಿ-2 ಕ್ಷಿಪಣಿಯನ್ನು ಈಗಾಗಲೇ ಸೇನಾಪಡೆಯಲ್ಲಿ ಬಳಕೆ ಮಾಡಲಾಗುತ್ತಿದೆ. ಈ ಕ್ಷಿಪಣಿಯು 20 ಮೀಟರ್ ಉದ್ದ ಹಾಗೂ 17 ಟನ್ ತೂಕ ಹೊಂದಿದೆ. ಗರಿಷ್ಠ 1000 ಕಿ.ಮೀ. ತೂಕವನ್ನು ಗುರಿಯತ್ತ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ.