ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ: ಸುಪ್ರೀಂನಲ್ಲಿ ಪುನರ್‌ಪರಿಶೀಲನಾ ಅರ್ಜಿ

ಸುಪ್ರೀಂ ಕೋರ್ಟ್ನ ಸಂವಿಧಾನದ ಪೀಠದ ತೀರ್ಪಿನಲ್ಲಿ ಕೇರಳದ ಜನರ ಧಾರ್ಮಿಕ ಭಾವನೆಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಅರ್ಜಿದಾರರು ಹೇಳುತ್ತಾರೆ. 

Last Updated : Oct 8, 2018, 01:08 PM IST
ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ: ಸುಪ್ರೀಂನಲ್ಲಿ ಪುನರ್‌ಪರಿಶೀಲನಾ ಅರ್ಜಿ title=

ನವದೆಹಲಿ: ಶಬರಿಮಲೆ ದೇವಾಲಯಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವ ತೀರ್ಪನ್ನು ಪುನರ್‌ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ಗೆ ರಾಷ್ಟ್ರೀಯ ಅಯ್ಯಪ್ಪ ಭಕ್ತಾದಿಗಳ ಸಂಘ ಸೋಮವಾರ (ಅಕ್ಟೋಬರ್ 8) ಅರ್ಜಿ ಸಲ್ಲಿಸಿದೆ. ರಾಷ್ಟ್ರೀಯ ಅಯಪ್ಪ ಸಂಘದ ಅಧ್ಯಕ್ಷೆ ಶೈಲಜಾ ವಿಜಯನ್ ಸುಪ್ರೀಂ ಕೋರ್ಟ್ನಲ್ಲಿ ಮರುಪರಿಶೀಲನೆ ಅರ್ಜಿಯನ್ನು ಸಲ್ಲಿಸಿದ್ದಾರೆ. 

ಸುಪ್ರೀಂ ಕೋರ್ಟ್ನ ಸಂವಿಧಾನದ ಪೀಠದ ತೀರ್ಪಿನಲ್ಲಿ ಕೇರಳದ ಜನರ ಧಾರ್ಮಿಕ ಭಾವನೆಗಳನ್ನು ನಿರ್ಲಕ್ಷಿಸಲಾಗಿದೆ. ಅಂತಹ ಸಂದರ್ಭದಲ್ಲಿ, ನ್ಯಾಯಾಲಯದ ಸೆಪ್ಟೆಂಬರ್ 28 ತೀರ್ಪು ಅಸಂವಿಧಾನಿಕವಾಗಿದೆ, ಆದ್ದರಿಂದ ನ್ಯಾಯಾಲಯ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಅರ್ಜಿದಾರರು ಹೇಳುತ್ತಾರೆ.

ವಾಸ್ತವವಾಗಿ, ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶ ನಿಷೇಧಿಸಿರುವುದನ್ನು ವಿರೋಧಿಸಿ 2006ರ ಜನವರಿಯಲ್ಲಿ ಯಂಗ್ ಲಾಯರ್ಸ್ ಅಸೋಸಿಯೇಷನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಈ ಸಂಬಂಧಿಸಿದಂತೆ ವಿಚಾರಣೆ ನಡೆಸಲು 2017ರ ಅಕ್ಟೋಬರ್ 13ರಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠ ರಚಿಸಿತ್ತು. ತ್ವರಿತ ವಿಚಾರಣೆ ನಡೆಸಿದ ಸಂವಿಧಾನಿಕ ಪೀಠ ಆಗಸ್ಟ್ 1ರಂದು ತೀರ್ಪು ಅನ್ನು ಕಾಯ್ದಿರಿಸಿತ್ತು. ಸೆಪ್ಟೆಂಬರ್ 28ರಂದು ಆ ತೀರ್ಪು ಅನ್ನು ಪ್ರಕಟಿಸಿ ಎಲ್ಲಾ ವಯೋಮಾನದ ಮಹಿಳೆಯರಿಗೂ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕೊಡಬೇಕು. ಧಾರ್ಮಿಕ ಆಚರಣೆ ಹೆಸರಿನಲ್ಲಿ ಲಿಂಗತಾರತಮ್ಯ ಮಾಡಬಾರದೆಂದು ಹೇಳಿತ್ತು.‌ ಜೊತೆಗೆ ಪುರುಷರಿಗಿಂತ ಮಹಿಳೆಯರೇನೂ ಕಡಿಮೆ ಅಲ್ಲ ಎಂದೂ ಸಹ ಅಭಿಪ್ರಾಯಪಟ್ಟಿತ್ತು. 

ಅರ್ಜಿ ವಿಚಾರಣೆ ಸಂದರ್ಭದಲ್ಲೂ ಮಹಿಳೆಯರ ನಿಷೇಧ ಕ್ರಮವನ್ನು ಪ್ರಶ್ನಿಸಿದ್ದ ಸಂವಿಧಾನ ಪೀಠ, ಮಹಿಳೆಯರ ಧಾರ್ವಿುಕ ಹಕ್ಕನ್ನು ಕಸಿದುಕೊಳ್ಳುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿತ್ತು. ದೇಶಾದ್ಯಂತ ಪ್ರಶಂಸೆಗೆ ಒಳಗಾಗುತ್ತಿರುವ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಅಯ್ಯಪ್ಪ ಸ್ವಾಮಿ ದೇವಾಲಯ ಅಸಮಾಧಾನ ವ್ಯಕ್ತಪಡಿಸಿತ್ತು. ಸಿಎಂ ಪಿಣರಾಯಿ ವಿಜಯನ್‌ ಅವರು ಸೋಮವಾರ ಕರೆದಿರುವ ಸಂಧಾನ ಸಭೆಯಲ್ಲಿ ಭಾಗವಹಿಸಲು ದೇವಸ್ಥಾನದ ತಂತ್ರಿ ಕುಟುಂಬ ಮತ್ತು ರಾಜ ಮನೆತನಗಳು ನಿರಾಕರಿಸಿದ್ದವು. ಈ ನಡುವೆ, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಆಗ್ರಹಿಸಿ ಕೇರಳ, ದಿಲ್ಲಿ ಸೇರಿದಂತೆ ದೇಶದ ಹಲವೆಡೆ ಸೋಮವಾರ ಭಕ್ತರ ಪ್ರತಿಭಟನೆ ಸಹ ನಡೆದಿತ್ತು. ಅಲ್ಲದೆ ಕೇರಳದ ಐತಿಹಾಸಿಕ ಶಬರಿಮಲೆ ದೇವಾಲಯಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವ ತೀರ್ಪುನ್ನು ಪುನರ್‌ಪರಿಶೀಲಿಸುವಂತೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿವೆ.

ಅಲ್ಲದೆ, ಅಕ್ಟೋಬರ್​ 17ರಂದು ಬಾಗಿಲು ತೆರೆಯಲಿರುವ ಅಯ್ಯಪ್ಪ ದೇವಸ್ಥಾನವನ್ನು ಋತುಚಕ್ರವಾಗುತ್ತಿರುವ ವಯಸ್ಸಿನ ಮಹಿಳೆಯರು ಪ್ರವೇಶಿಸಲು ಮುಂದಾದರೆ ದೇಗುಲದ ಬಾಗಿಲಲ್ಲಿ ಮಲಗಿ ಪ್ರತಿಭಟನೆ ನಡೆಸುತ್ತೇವೆ ಎಂದು ಅಯ್ಯಪ್ಪ ಧರ್ಮ ಸೇನಾದ ಮುಖ್ಯಸ್ಥ, ಶಬರಿಮಲೆ ಮಾಜಿ ತಂತ್ರಿಯ ಮೊಮ್ಮಗ ಹೇಳಿದ್ದಾರೆ.

Trending News