ಅಯೋಧ್ಯೆ: ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮಮಂದಿರ ನಿರ್ಮಾಣಕ್ಕಾಗಿ ಇಂದು ಕೇಂದ್ರ ಸರ್ಕಾರ ಟ್ರಸ್ಟ್ ವೊಂದನ್ನು ರಚಿಸಿದೆ. ಕೇಂದ್ರ ಸಚಿವ ಸಂಪುಟ ಬುಧವಾರ 'ಶ್ರೀ ರಾಮ ಮಂದಿರ ತೀರ್ಥಕ್ಷೇತ್ರ' ಹೆಸರಿನ ಈ ಟ್ರಸ್ಟ್ ಗೆ ಅನುಮೋದನೆ ನೀಡಿದ್ದು, ಪ್ರಧಾನಿ ಮೋದಿ ಲೋಕಸಭೆಯಲ್ಲಿ ಈ ಕುರಿತು ಘೋಷಣೆ ಮಾಡಿದ್ದಾರೆ. ಇನ್ನೊಂದೆಡೆ ಮೋದಿ ಸರ್ಕಾರ ಕೈಗೊಂಡ ಈ ನಿರ್ಣಯದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ಟ್ರಸ್ಟ್ ನ ಸದಸ್ಯರ ಹೆಸರುಗಳನ್ನು ಘೋಷಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅಮಿತ್ ಶಾ, ಈ ಟ್ರಸ್ಟ್ ನಲ್ಲಿ ಒಟ್ಟು 15 ಟ್ರಸ್ಟಿಗಳು ಇರಲಿದ್ದು. ಅವರಲ್ಲಿ ಓರ್ವ ದಲಿತ ಟ್ರಸ್ಟಿ ಕೂಡ ಶಾಮೀಲಾಗಿದ್ದಾರೆ ಎಂದು ಹೇಳಿದ್ದಾರೆ.
श्री राम जन्मभूमि तीर्थ क्षेत्र ट्रस्ट में 15 ट्रस्टी होंगे जिसमें से एक ट्रस्टी हमेशा दलित समाज से रहेगा। सामाजिक सौहार्द को मजबूत करने वाले ऐसे अभूतपूर्व निर्णय के लिए मैं प्रधानमंत्री श्री @narendramodi जी को अनेक अनेक बधाई देता हूँ।
— Amit Shah (@AmitShah) February 5, 2020
ಗೃಹ ಸಚಿವ ಅಮಿತ್ ಶಾ ಅವರ ಘೋಷಣೆಯ ಬಳಿಕ ಇದೀಗ 'ಶ್ರೀರಾಮ್ ಮಂದಿರ ತೀರ್ಥಕ್ಷೇತ್ರ' ಟ್ರಸ್ಟ್ ನ ಎಲ್ಲ 15 ಸದಸ್ಯರ ಪಟ್ಟಿ ಬಿಡುಗಡೆಯಾಗಿದೆ. ಈ ಪಟ್ಟಿಯ ಪ್ರಕಾರ ಈ ಟ್ರಸ್ಟ್ ನಲ್ಲಿ ಒಟ್ಟು 15 ಸದಸ್ಯರು ಇರಲಿದ್ದು, ಅವರಲ್ಲಿ 9 ಸದಸ್ಯರು ಖಾಯಂ ಹಾಗೂ 6 ನಾಮನಿರ್ದೇಶಿತ ಸದಸ್ಯರು ಇರಲಿದ್ದಾರೆ ಎನ್ನಲಾಗಿದೆ. ಈ ಟ್ರಸ್ಟ್ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಮಾಡಲಿದ್ದು, ಕೆ. ಪರಾಸರನ್ ಅವರು ಈ ಟ್ರಸ್ಟ್ ನ ಅಧ್ಯಕ್ಷರಾಗಿರಲಿದ್ದಾರೆ.
ಪಟ್ಟಿ ಕೆಳಗಿನಂತಿದೆ
ಕೆ. ಪರಸರನ್, ಅಧ್ಯಕ್ಷ
ಶಂಕರಾಚಾರ್ಯ ವಸುದೆವಾನಂದ್ ಮಹಾರಾಜ್, ಸದಸ್ಯ
ಪರಮಾನಂದ್ ಮಹಾರಾಜ್ ಜೀ ಹರಿದ್ವಾರ್, ಸದಸ್ಯ
ಸ್ವಾಮಿ ಗೋವಿಂದಗಿರಿ ಜೀ ಪುಣೆ, ಸದಸ್ಯ
ವಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ, ಸದಸ್ಯ
ಡಾ. ಕಮಲೇಶ್ವರ್ ಚೌಪಾಲ್ ಪಾಟ್ನಾ, ಸದಸ್ಯ
ಡಾ. ಅನಿಲ್ ಮಿಶ್ರಾ, ಹೋಮಿಯೋಪತಿ ವೈದ್ಯ, ಅಯೋಧ್ಯಾ, ಸದಸ್ಯ
ಮಹಂತ ದಿನೆಂದ್ರದಾಸ್ ನಿರ್ಮೋಹಿ ಅಖಾಡ, ಸದಸ್ಯ
ಡಿಎಂ ಅಯೋಧ್ಯ ಟ್ರಸ್ಟ್ ನ ಸಂಯೋಜಕ ಸದಸ್ಯ
ಇವರನ್ನು ಹೊರತುಪಡಿಸಿ ಈ ಟ್ರಸ್ಟ್ ನಲ್ಲಿ ಒಟ್ಟು 6 ನಾಮನಿರ್ದೇಶಿತ ಸದಸ್ಯರು ಇರಲಿದ್ದು. ಅವರ ಆಯ್ಕೆ ಟ್ರಸ್ಟ್ ಮಂಡಳಿ ಮಾಡಲಿದೆ.
ಲೋಕಸಭೆಯಲ್ಲಿ ಮಂದಿರ ಟ್ರಸ್ಟ್ ಕುರಿತು ಘೋಷಣೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ತಮ್ಮ ಸರ್ಕಾರ ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ಹಾಗೂ ಅದಕ್ಕೆ ಸಂಬಧಿಸಿದ ಇತರೆ ವಿಷಯಗಳಿಗಾಗಿ ಬೃಹತ್ ಯೋಜನೆ ಸಿದ್ದಪಡಿಸಿದೆ. ಸುಪ್ರೀಂ ಕೋರ್ಟ್ ನ ಆದೇಶದಂತೆ ಒಂದು ಸ್ವಾಯತ್ತ ಟ್ರಸ್ಟ್ 'ಶ್ರೀರಾಮ್ ಜನ್ಮಭೂಮಿ ತೀರ್ಥಕ್ಷೇತ್ರ'ದ ರಚನೆಗಾಗಿ ಪ್ರಸ್ತಾವನೆಗೆ ಅನುಮೋದನೆ ನೀಡಿದೆ" ಎಂದಿದ್ದರು.
ಪ್ರಧಾನಿ ಅವರ ಈ ಘೋಷಣೆಯ ಬಳಿಕ, ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, "ಭಾರತದ ನಂಬಿಕೆ ಮತ್ತು ಅಚಲತೆಯ ಸಂಕೇತವಾಗಿರುವ ಭಗವಾನ್ ಶ್ರೀ ರಾಮ್ ದೇವಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಬದ್ಧತೆಯನ್ನು ನಾನು ಅಭಿನಂದಿಸುತ್ತೇನೆ. ಈ ದಿನ ಇಡೀ ಭಾರತೀಯರ ಪಾಲಿದೆ ಸಂತೋಷದ ಮತ್ತು ಹೆಮ್ಮೆಯ ದಿನವಾಗಿದೆ" ಎಂದಿದ್ದರು.