ಡೆಹ್ರಾಡೂನ್: ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಕ್ಕಾಗಿ ಮತ್ತು ಪಕ್ಷದಿಂದ ಬೆಂಬಲಿತ ಅಭ್ಯರ್ಥಿಗಳ ವಿರುದ್ಧ ರಾಜ್ಯದಲ್ಲಿ ನಡೆಯಲಿರುವ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಆರೋಪದ ಮೇಲೆ ಬಿಜೆಪಿ ಉತ್ತರಾಖಂಡ ಘಟಕವು ತನ್ನ 40 ಸದಸ್ಯರನ್ನು ಉಚ್ಛಾಟಿಸಿದೆ.
ಜಿಲ್ಲಾ ಮಟ್ಟದಲ್ಲಿ ರಚಿಸಲಾದ ಸಾಂಸ್ಥಿಕ ಸಮಿತಿಗಳು ನೀಡಿದ ವರದಿಗಳ ಆಧಾರದ ಮೇಲೆ ರಾಜ್ಯ ಬಿಜೆಪಿ ಅಧ್ಯಕ್ಷ ಅಜಯ್ ಭಟ್ ಈ ಕ್ರಮ ಕೈಗೊಂಡಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಭಂಡಾರಿ ತಿಳಿಸಿದ್ದಾರೆ.
ಮೇಲ್ನೋಟಕ್ಕೆ 40 ಪದಾಧಿಕಾರಿಗಳು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ವಿರುದ್ಧವೇ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಈ ಪದಾಧಿಕಾರಿಗಳನ್ನು ಪಕ್ಷದ ಹುದ್ದೆಗಳಿಂದ ತೆಗೆದುಹಾಕಲಾಗಿದೆ ಎಂದು ಭಂಡಾರಿ ತಿಳಿಸಿದ್ದಾರೆ.
ರಜನೀಶ್ ಶರ್ಮಾ, ಮೀರಾ ರಾಟುರಿ, ಮೋಹನ್ ಸಿಂಗ್ ಬಿಶ್ತ್, ಮಹೇಶ್ ಬಗ್ರಿ, ಪ್ರಮೀಳಾ ಉನಿಯಾಲ್ ಮತ್ತು ಭಾವನ ಸಿಂಗ್ ಸೇರಿದಂತೆ ಒಟ್ಟು 40 ಜನರನ್ನು ಪಕ್ಷವಿರೋಧಿ ಚಟುವಟಿಕೆಗಳಿಗಾಗಿ ಉಚ್ಛಾಟಿಸಲಾಗಿದೆ ಎಂದು ತಿಳಿದುಬಂದಿದೆ.
Bharatiya Janata Party Uttarakhand has expelled 40 members from the party 'for indulging in anti-party activities.' pic.twitter.com/NPwFT4iY2u
— ANI (@ANI) September 29, 2019
ಅಲ್ಲದೆ, ಮಂಡಲ ಪ್ರಧಾನ ಕಾರ್ಯದರ್ಶಿಗಳು, ಮಂಡಲ್ ಅಧ್ಯಕ್ಷರು ಮತ್ತು ಜಿಲ್ಲಾ ಉಪಾಧ್ಯಕ್ಷರನ್ನು ಸಾಂಸ್ಥಿಕ ಜವಾಬ್ದಾರಿಗಳಿಂದ ಮುಕ್ತಗೊಳಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ರಾಜ್ಯದ 12 ಜಿಲ್ಲೆಗಳಲ್ಲಿ ಅಕ್ಟೋಬರ್ 6 ರಿಂದ ಅಕ್ಟೋಬರ್ 16 ರವರೆಗೆ ಮೂರು ಹಂತಗಳಲ್ಲಿ ಪಂಚಾಯತ್ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 21 ರಂದು ಫಲಿತಾಂಶಗಳು ಹೊರಬೀಳಲಿವೆ.
ಜುಲೈ ತಿಂಗಳಲ್ಲಿ ಬಿಜೆಪಿಯು ಪ್ರಣವ್ ಸಿಂಗ್ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಿತ್ತು. ತನ್ನ ಬಾಯಲ್ಲಿ ಮತ್ತು ಕೈಗಳಲ್ಲಿ ಬಂದೂಕು ಹಿಡಿದುಕೊಂಡು ನೃತ್ಯ ಮಾಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾದ ಬಳಿಕ ಪಕ್ಷದಿಂದ ಅವರನ್ನು ಉಚ್ಛಾಟಿಸಲಾಗಿತ್ತು.