ನವದೆಹಲಿ: ಉತ್ತರ ಪ್ರದೇಶದ ಹತ್ರಾಸ್ (Hathras) ಗ್ರಾಮದಲ್ಲಿ ನಡೆದ ಅತ್ಯಾಚಾರ ಹಾಗೂ ಸಾವಿನ ಪ್ರಕರಣವೂ ಸೇರಿದಂತೆ ಉತ್ತರ ಪ್ರದೇಶ (Uttar Pradesh) ದಲ್ಲಿ ಇತ್ತೀಚೆಗೆ ನಿರಂತರವಾಗಿ ನಡೆಯುತ್ತಿರುವ ದಲಿತರ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ, ದಲಿತರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಸಂಪೂರ್ಣವಾಗಿ ವಿಫಲವಾಗಿರುವ ಯೋಗಿ ಆದಿತ್ಯನಾಥ್ (Yogi Adityanath) ಸರ್ಕಾರದ ಕ್ರಮವನ್ನು ಖಂಡಿಸಿ ಹಾಗೂ ಉತ್ತರ ಪ್ರದೇಶದಲ್ಲಿ ಇಷ್ಟೆಲ್ಲಾ ಅಮಾನವೀಯ ಘಟನೆಗಳು ಜರುಗುತ್ತಿದ್ದರೂ ಮೌನವಾಗಿರುವ ಕೇಂದ್ರ ಸರ್ಕಾರ ಮತ್ತು ಬಿಜೆಪಿ (BJP) ನಾಯಕರ ನಡೆಗಳನ್ನು ಇಂದು ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
ಶಾಂತಯುತವಾಗಿ ಸತ್ಯಾಗ್ರಹ ನಡೆಸಲು ನಿರ್ಧರಿಸಿರುವ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಎಲ್ಲೆಡೆ ಇರುವ ಮಹಾತ್ಮ ಗಾಂಧಿ (Mahatma Gandhi) ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ (Dr. B.R. Ambedkar) ಪ್ರತಿಮೆ ಎದುರು ಧರಣಿ ನಡೆಸಲು ಸೂಚಿಸಿದೆ.
Video: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಪೋಲಿಸ್ ಲಾಠಿಚಾರ್ಜ್ ನಿಂದ ರಕ್ಷಿಸಿದ ಪ್ರಿಯಾಂಕಾ ಗಾಂಧಿ
ಉತ್ತರ ಪ್ರದೇಶ ಮತ್ತು ಕೇಂದ್ರದ ಬಿಜೆಪಿ ನಾಯಕರ ದಲಿತ ವಿರೋಧಿ, ಬಡಬರ ವಿರೋಧಿ ನಿಲುವನ್ನು ಖಂಡಿಸಿ ಅಕ್ಟೋಬರ್ 5ರಂದು ದೇಶಾದ್ಯಂತ ಮಹಾತ್ಮ ಗಾಂಧಿ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಧರಣಿ ನಡೆಸುವಂತೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC)ಯ ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಎಲ್ಲಾ ರಾಜ್ಯ ಘಟಕಗಳಿಗೂ ಪತ್ರ ಬರೆದಿದ್ದಾರೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸೂಚನೆ ಮೇರೆಗೆ ಇಂದು ಎಲ್ಲಾ ರಾಜ್ಯ ಘಟಕಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಮಹಾತ್ಮ ಗಾಂಧಿ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಶಾಂತಯುತ ಸತ್ಯಾಗ್ರಹ ನಡೆಸುತ್ತಿವೆ.
ಮೋದಿ ಪ್ರಧಾನಿಯಾದ ಬಳಿಕ ದಲಿತ ಯುವತಿಯರ ಅತ್ಯಾಚಾರ-ಸಾವು ಹೆಚ್ಚಾಗಿದೆ: ಖರ್ಗೆ
ಕರ್ನಾಟಕದ ಕಾಂಗ್ರೆಸ್ ನಾಯಕರು ಇಂದು ಬೆಳಿಗ್ಗೆ 11.30ಕ್ಕೆ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಎದುರು ಪ್ರತಿಭಟನೆ ನಡೆಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಪ್ರತಿಪಕ್ಷದ ಸಿದ್ದರಾಮಯ್ಯ (Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿ ಉತ್ತರ ಪ್ರದೇಶ ದಲಿತ ಯುವತಿಯರ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಲಿದ್ದಾರೆ.