Coronavirus: ಏಪ್ರಿಲ್ 20ರಿಂದ ಈ ರೀತಿಯಾಗಿ ಲಾಕ್‌ಡೌನ್‌ನಿಂದ ವಿನಾಯಿತಿ ಸಾಧ್ಯತೆ

ಕರೋನಾ ವೈರಸ್ ಸವಾಲಿನ ಮಧ್ಯೆ ಲಾಕ್‌ಡೌನ್‌ ಅನ್ನು ಮೇ 3ರವರೆಗೆ ವಿಸ್ತರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

Written by - Yashaswini V | Last Updated : Apr 14, 2020, 01:10 PM IST
Coronavirus: ಏಪ್ರಿಲ್ 20ರಿಂದ ಈ ರೀತಿಯಾಗಿ ಲಾಕ್‌ಡೌನ್‌ನಿಂದ ವಿನಾಯಿತಿ ಸಾಧ್ಯತೆ title=

ನವದೆಹಲಿ: ಕರೋನಾ ವೈರಸ್‌ನ ಸವಾಲಿನ ಮಧ್ಯೆ ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಲಾಕ್‌ಡೌನ್ ಅನ್ನು ಮೇ 3 ರವರೆಗೆ ವಿಸ್ತರಿಸುವುದಾಗಿ ಘೋಷಿಸಿದ್ದಾರೆ. ಆದರೆ ಕೊರೋನಾ ಪೀಡಿತ ಹೊಸ ಹಾಟ್ ಸ್ಪಾಟ್ ಹುಟ್ಟಿಕೊಳ್ಳದಂತೆ ಕ್ರಮ ಕೈಗೊಳ್ಳಲು ಕರೆ ನೀಡಿರುವ ಅವರು ಏಪ್ರಿಲ್ 20ರವೆರೆಗೆ ಕೊರೋನಾವೈರಸ್ ನಿಯಂತ್ರಣಕ್ಕೆ ಬಂದರೆ ಬಡವರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಹಾಟ್ ಸ್ಪಾಟ್‌ಗಳ ವರ್ಗಕ್ಕೆ ಸೇರದ ಪ್ರದೇಶಗಳಲ್ಲಿ ಕೆಲವು ಷರತ್ತುಗಳೊಂದಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಮುಂದಿನ ಒಂದು ವಾರದವರೆಗೆ ಇಡೀ ದೇಶದಲ್ಲಿ ಲಾಕ್‌ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಮೂಲಕ ಪ್ರತಿಯೊಂದು ಪಟ್ಟಣ, ಪ್ರತಿ ಪೊಲೀಸ್ ಠಾಣೆ, ಪ್ರತಿ ಜಿಲ್ಲೆ, ಪ್ರತಿ ರಾಜ್ಯವನ್ನು  ಸೂಕ್ಷ್ಮವಾಗಿ ಗಮನಿಸಲಾಗುವುದು. ಎಲ್ಲೆಡೆ  ಲಾಕ್‍ಡೌನ್ (Lockdown) ಅನ್ನು ಎಷ್ಟರ ಮಟ್ಟಿಗೆ ಅನುಸರಿಸಲಾಗುತ್ತಿದೆ ಮತ್ತು ಆ ಪ್ರದೇಶದ ಕೊರೋನಾ ಪೀಡಿತರ ಸಂಖ್ಯೆಯನ್ನು ಗಮನಿಸಿ ಪರಿಸ್ಥಿತಿಯನ್ನು ನಿರ್ಣಯಿಸಿದ ನಂತರವೇ ವಿನಾಯಿತಿ ನೀಡಲಾಗುತ್ತದೆ. ಹೊಸ ಪ್ರದೇಶವು ಹಾಟ್ ಸ್ಪಾಟ್ ಆಗಿದ್ದರೆ ಅಲ್ಲಿ ನೀಡಲಾದ ರಿಯಾಯಿತಿಯನ್ನು ತೆಗೆದುಹಾಕಬಹುದು ಎಂದವರು ಎಚ್ಚರಿಸಿದ್ದಾರೆ.

ವಾಸ್ತವವಾಗಿ ಪರಿಸ್ಥಿತಿಯನ್ನು ಅವಲೋಕಿಸಿ ದೇಶದಲ್ಲಿ ಕೊರೋನಾ  ಕೋವಿಡ್ 19 (Covid-19)  ಪೀಡಿತ ಪ್ರದೇಶಗಳನ್ನು ಕೆಂಪು, ಹಳದಿ, ಹಸಿರು ಎಂದು ಮೂರು ವಲಯಗಳಾಗಿ ವಿಂಗಡಿಸುವ ಸಾಧ್ಯತೆಯಿದ್ದು ವಲಯಗಳ ಆಧಾರದ ಮೇಲೆ ಕೆಲವು ಷರತ್ತುಬದ್ಧ ರಿಯಾಯಿತಿ ನೀಡುವ ಸಾಧ್ಯತೆ ಇದೆ.

ಏಪ್ರಿಲ್ 20ರಿಂದ ವಲಯವಾರು ನೀಡಬಹುದಾದ ಕೆಲವು ರಿಯಾಯಿತಿಗಳೆಂದರೆ:

ಮೊದಲನೆಯದಾಗಿ  ಕೊರೊನಾವೈರಸ್  (Coronavirus)  ಸೋಂಕು ಇಲ್ಲದ ಪ್ರದೇಶಗಳನ್ನು ಹಸಿರು ವಲಯ ಎಂದು ಘೋಷಿಸುವ ಮೂಲಕ ಅಂತಹ ಪ್ರದೇಶಗಳಲ್ಲಿ ಲಾಕ್‌ಡೌನ್‌ ತೆರವುಗೊಳಿಸುವ ಸಾಧ್ಯತೆ ಇದೆ. ಇಂತಹ ಪ್ರದೇಶಗಳಲ್ಲಿ ಜನರ ದಿನನಿತ್ಯದ ಅವಶ್ಯಕ ವಸ್ತುಗಳನ್ನು ಕೊಳ್ಳಲು ಯಾವುದೇ ತೊಂದರೆ ಎದುರಾಗುವುದಿಲ್ಲ. ಕೃಷಿ ಚಟುವಟಿಕೆ, ಸ್ಥಳೀಯ ಕಾರ್ಖಾನೆಗಳನ್ನು ತೆರೆಯಲು ಅವಕಾಶ ಕೊಡಬಹುದು. ಸೋಶಿಯಲ್ ಡಿಸ್ಟೆನ್ಸ್ ಮೂಲಕ ನಾಗರೀಕರಿಗೆ ಸಂಚರಿಸಲು ಮುಕ್ತ ಅವಕಾಶ ಕಲ್ಪಿಸಬಹುದು.

ದೇಶವಾಸಿಗಳಿಗೆ ಮೋದಿ ಮಹಾ ಸಂದೇಶ: ಮೇ 3ರವರೆಗೆ ಲಾಕ್‌ಡೌನ್ ವಿಸ್ತರಣೆ

ಎರಡನೆಯದಾಗಿ ಕೊರೋನಾವೈರಸ್ Covid-19 ಸ್ವಲ್ಪ ಪ್ರಮಾಣದಲ್ಲಿ ಇರುವ ಪ್ರದೇಶಗಳನ್ನು ಹಳದಿ ವಲಯ ಎಂದು ಘೋಷಿಸಿ ಅಂತಹ ಪ್ರದೇಶಗಳಲ್ಲಿ ಲಾಕ್‌ಡೌನ್‌ ಅನ್ನು ಭಾಗಶಃ ಕಡಿಮೆ ಮಾಡುವ ನಿರೀಕ್ಷೆಯಿದೆ. ಇಂತಹ ಪ್ರದೇಶಗಳಲ್ಲಿ ಜನರ ದಿನನಿತ್ಯದ ಅವಶ್ಯಕ ವಸ್ತುಗಳನ್ನು ದಿನ ಬಿಟ್ಟು ದಿನ ಲಭ್ಯವಾಗುವಂತೆ ಮಾಡಬಹುದು. ಕೃಷಿ ಚಟುವಟಿಕೆಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಬಹುದು. ಆದಾಗ್ಯೂ ಮುನ್ನೆಚ್ಚರಿಕಾ ಕ್ರಮವಾಗಿ ಜನರನ್ನು ರಸ್ತೆಗಿಳಿಯದಂತೆ ಮನವಿ ಮಾಡಬಹುದು. ಕಟ್ಟು ನಿಟ್ಟಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚನೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಜನರ ಸಂಚಾರಕ್ಕೆ ಅನುವು ಮಾಡಿಕೊಡಬಹುದು.

ಕೊರೋನಾದಿಂದ ಪಾರಾಗಲು ಮೋದಿ ಸಪ್ತ ಸೂತ್ರ

ಮೂರನೆಯದಾಗಿ ಕೊರೋನಾವೈರಸ್ ಹೆಚ್ಚು ಪ್ರಭಾವ ಬೀರುವ ಪ್ರದೇಶಗಳು ಅಂದರೆ ಹಾಟ್ ಸ್ಪಾಟ್ ಎಂದು ಕರೆಯಲಾಗುವ ಪ್ರದೇಶಗಳನ್ನು ಕೆಂಪು ವಲಯಗಳೆಂದು ಘೋಷಿಸಿ ಸಂಪೂರ್ಣವಾಗಿ ಸೀಲ್ ಡೌನ್ ಮಾಡುವ ನಿರೀಕ್ಷೆಯಿದೆ. ಇಂತಹ ಪ್ರದೇಶಗಳಲ್ಲಿ ನಿಗದಿತ ಸಮಯದಲ್ಲಿ ಮಾತ್ರವೇ ಅಗತ್ಯ ವಸ್ತುಗಳ ಪೂರೈಕೆಗೆ ಅವಕಾಶ ದೊರೆಯಬಹುದು. ಉದಾಹರಣೆಗೆ ಬೆಳಿಗ್ಗೆ 7 ಗಂಟೆಯಿಂದ 11 ಗಂಟೆವರೆಗೆ ಮಾತ್ರ ಹಾಲು, ಹಣ್ಣು, ತರಕಾರಿ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ಕೊಳ್ಳಲು ಅವಕಾಶ. ಜನರು ರಸ್ತೆಗೆ ಬರದಂತೆ ಸೂಚನೆ. ಖಾಸಗಿ ವಾಹನಗಳು ಸಂಚರಿಸದಂತೆ ಕಟ್ಟು ನಿಟ್ಟಿನ ಕ್ರಮ ಹೀಗೆ ಕೆಂಪು ವಲಯಗಳಲ್ಲಿ ಇನ್ನೂ ಕಟ್ಟುನಿಟ್ಟಾಗಿ ಲಾಕ್‌ಡೌನ್‌ ಜಾರಿಗೆ ತರುವ ಸಾಧ್ಯತೆ ಇದೆ.
 

Trending News