ನವದೆಹಲಿ : ದೆಹಲಿ ಗೋವಿಂದ ಬಲ್ಲಭ ಪಂತ್ ಆಸ್ಪತ್ರೆ, ಇದೀಗ ತನ್ನ ವಿವಾದಾತ್ಮಕ ಸುತ್ತೋಲೆಯನ್ನು (Delhi Hospital Controversial Circular) ವಾಪಸ್ ಪಡೆದಿದೆ. ಆಸ್ಪತ್ರೆಯಲ್ಲಿ ಮಲೆಯಾಳಂ (Malayalam) ಮಾತಾಡದಂತೆ ನರ್ಸ್ ಸಿಬ್ಬಂದಿಗೆ ತಾಕೀತು ಮಾಡಿ ಸುತ್ತೋಲೆ ಹೊರಡಿಸಲಾಗಿತ್ತು. ಈ ಬಗ್ಗೆ ಸಾಕಷ್ಟು ವಿರೊಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಆದೇಶವನ್ನು ಹಿಂಪಡೆಯಲಾಗಿದೆ.
ಸುತ್ತೋಲೆ ಹಿಂಪಡೆದಿರುವ ಬಗ್ಗೆ ಶೀಘ್ರವೇ ಅಧಿಕೃತ ಆದೇಶ :
ಆಸ್ಪತ್ರೆಯಲ್ಲಿ ಹಿಂದಿ (hindi) ಮತ್ತು ಇಂಗ್ಲೀಷ್ ನಲ್ಲಿ ಮಾತ್ರ ವ್ಯವಹರಿಸಬೇಕು. ಮಲಯಾಳಂ ಬಳಸುವಂತಿಲ್ಲ ಎಂದು ಹೊರಡಿಸಿರುವ ಸುತ್ತೋಲೆಯನ್ನು ಗೋವಿಂದ ಬಲ್ಲಭ ಪಂತ್ ಆಸ್ಪತ್ರೆ (G B Pant hospital), ಹಿಂದಕ್ಕೆ ಪಡೆದಿದೆ. ಅಲ್ಲದೆ ಸುತ್ತೋಲೆ ಹಿಂಪಡೆದಿರುವ ಬಗ್ಗೆ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ವೈದ್ಯಕೀಯ ನಿರ್ದೇಶಕ ಡಾ.ಅನಿಲ್ ಅಗರ್ವಾಲ್ ತಿಳಿಸಿದ್ದಾರೆ. ಅಲ್ಲದೆ ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಕೂಡಲೇ ಕ್ರಮ ಜರಗಿಸಲಾಗುವುದು ಎಂದು ಅವರು ಹೇಳಿದ್ದಾರೆ. ಇನ್ನು ಗೋವಿಂದ ಬಲ್ಲಭ ಪಂತ್ ಆಸ್ಪತ್ರೆ, ಹೊರಡಿಸಿರುವ ಸುತ್ತೋಲೆ ವಿರುದ್ಧ ದೆಹಲಿ ಆರೋಗ್ಯ ಇಲಾಖೆ ಕೂಡಾ ಮೆಮೋ ಜಾರಿ ಗೊಳಿಸಿದೆ.
ಇದನ್ನೂ ಓದಿ : Labour Codes : 'ಈ 4 ಹೊಸ ವೇತನ ಸಂಹಿತೆ'ಯಿಂದ ನೌಕರರ ಸಂಬಳ ಕಡಿಮೆ, PF ಜಾಸ್ತಿ!
ಈ ವಿವಾದಕ್ಕೆ ಕಾರಣ ಆಗಿದ್ದು ಏನು..
ದೆಹಲಿ ಗೋವಿಂದ ಬಲ್ಲಭ ಪಂತ್ ಆಸ್ಪತ್ರೆಯ ಸರ್ಕುಲರ್ ಒಂದು ವಿವಾದದ ಕಿಡಿ ಹೊತ್ತಿಸಿತ್ತು. ಗೋವಿಂದ ಬಲ್ಲಬ್ ಪಂತ್ ಆಸ್ಪತ್ರೆಯ ದೆಹಲಿ ಸರ್ಕಾರದ ಆಡಳಿತಕ್ಕೆ ಒಳಪಡುತ್ತದೆ. ಹೊಸ ಸುತ್ತೋಲೆ ಹೊರಡಿಸಿದ ಆಡಳಿತ ಮಂಡಳಿ, ಆಸ್ಪತ್ರೆಯಲ್ಲಿ ಮಲೆಯಾಳಂ ಮಾತಾಡದಂತೆ ನರ್ಸ್ ಸಿಬ್ಬಂದಿಗೆ ತಾಕೀತು ಮಾಡಿತ್ತು. ಅಲ್ಲದೆ ಹಿಂದಿ ಅಥವಾ ಇಂಗ್ಲೀಷಿನಲ್ಲೇ ವ್ಯವಹರಿಸಬೇಕು ಎಂದು ಹೇಳಿತ್ತು. ಈ ನಿರ್ದೇಶನವನ್ನು ಪಾಲಿಸದೇ ಹೋದರೆ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆಯನ್ನೂ ಆಸ್ಪತ್ರೆ ನೀಡಿತ್ತು.
ನರ್ಸ್ ಸಂಘಟನೆಯ ವಿರೋಧ:
ಈ ಸುತ್ತೋಲೆಗೆ ಆಸ್ಪತ್ರೆಯ ಶುಶ್ರೂಷಕರ ಸಂಘಟನೆ ತೀವ್ರ ವಿರೋಧ ವ್ಯಕ್ತ ಪಡಿಸಿತ್ತು. ಸುತ್ತೋಲೆಯಲ್ಲಿ ಬಳಸಲಾಗಿರುವ ಶಬ್ದಗಳ ಬಗ್ಗೆಯೂ ಸಂಘಟನೆ ಆಕ್ಷೇಪ ವ್ಯಕ್ತ ಪಡಿಸಿತ್ತು. ಶುಶ್ರೂಷಕರ ಇತರ ಸಂಘಟನೆಗಳೂ ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದವು.
ಇದನ್ನೂ ಓದಿ : Earthquake Hits Jammu and Kashmir : ಕಾಶ್ಮೀರದಲ್ಲಿ ಭೂಕಂಪ , ಹಿಮಾಲಯದ ಮಡಿಲಲ್ಲೇಕೆ ಭೂಮಿ ಕಂಪಿಸುತ್ತಿದೆ..?
ರಾಹುಲ್ ಗಾಂಧಿ ಟ್ವೀಟ್ :
ದೆಹಲಿ ಆಸ್ಪತ್ರೆಯ ಈ ಸುತ್ತೋಲೆ ರಾಜಕೀಯ ವಲಯದಲ್ಲೂ ತೀವ್ರ ಟೀಕೆಗೆ ಗುರಿಯಾಗಿತ್ತು. ಈ ಸಂಬಂಧ ಕಾಂಗ್ರೆಸ್ ನಾಯಕ ವಯ್ನಾಡ್ ಸಂಸದ ರಾಹುಲ್ ಗಾಂಧಿ (Rahul Gandhi) ಟ್ವೀಟ್ ಮಾಡಿ, ಭಾಷಾ ತಾರತಮ್ಯ ನಿಲ್ಲಿಸುವಂತೆ ಮನವಿ ಮಾಡಿದ್ದರು. ಬೇರೆ ಭಾಷೆಗಳಂತೆ ಮಲೆಯಾಳಂ ಕೂಡಾ ಭಾರತದ ಭಾಷೆ ಎಂದು ರಾಹುಲ್ ಹೇಳಿದ್ದರು.
ಸುತ್ತೋಲೆ ಹಿಂತೆಗೆಯಲು ಕೇರಳ ಸಂಸದರ ಒತ್ತಾಯ :
ಕೇರಳ ಕಾಂಗ್ರೆಸ್ ಸಂಸದರಾದ ಶಶಿ ತರೂರ್ (Shashi tharoor) ಮತ್ತು ಕೆ.ಸಿ ವೇಣುಗೋಪಾಲ್ (KC Venugopal) ಕೂಡಾ ಆಸ್ಪತ್ರೆಯ ವಿವಾದಾತ್ಮಕ ಸುತ್ತೋಲೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸರ್ಕುಲರ್ ನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದರು .
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.