ಪ್ರಧಾನಿ ಮೋದಿ ಕುರಿತ ವೆಬ್ ಸೀರಿಸ್ ನಿಷೇಧಿಸಿ ಚುನಾವಣಾ ಆಯೋಗ ಆದೇಶ

"ಮೋದಿ: ಜರ್ನಿ ಆಫ್ ಎ ಕಾಮನ್‌ ಮ್ಯಾನ್‌" ವೆಬ್‌ ಸೀರಿಸ್‌ ನ ಆನ್‌ಲೈನ್‌ ಸ್ಟ್ರೀಮಿಂಗ್‌ ನಿಲ್ಲಿಸುವಂತೆ ಚುನಾವಣಾ ಆಯೋಗ ಇಂದು ಆದೇಶಿಸಿದೆ.

Last Updated : Apr 20, 2019, 05:59 PM IST
ಪ್ರಧಾನಿ ಮೋದಿ ಕುರಿತ ವೆಬ್ ಸೀರಿಸ್ ನಿಷೇಧಿಸಿ ಚುನಾವಣಾ ಆಯೋಗ ಆದೇಶ title=
Pic Courtesy: EROS NOW

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತ ಆನ್‌ಲೈನ್‌ ಸೀರಿಸ್ "ಮೋದಿ: ಜರ್ನಿ ಆಫ್ ಎ ಕಾಮನ್‌ ಮ್ಯಾನ್‌" ಅನ್ನು ತಕ್ಷಣದಿಂದಲೇ ನಿಲ್ಲಿಸುವಂತೆ ಚುನಾವಣಾ ಆಯೋಗ 'ಎರೋಸ್ ನೌ' ಡಿಜಿಟಲ್ ಮಾಧ್ಯಮಕ್ಕೆ ಆದೇಶಿಸಿದೆ.

ಲೋಕಸಭಾ ಚುನಾವಣೆ ಮುಗಿಯುವವರೆಗೆ ನರೇಂದ್ರ ಮೋದಿ ಜೀವನ ಚರಿತ್ರೆ ಕುರಿತ ಚಿತ್ರವನ್ನು ಪ್ರದರ್ಶಿಸುವಂತಿಲ್ಲ ಎಂಬ ಎಪ್ರಿಲ್ 10 ರಂದು ನೀಡಿರುವ ತನ್ನ ಆದೇಶವನ್ನೇ ಉಲ್ಲೇಖಿಸಿ 'ಎರೋಸ್ ನೌ' ಸಂಸ್ಥೆಗೆ ಇಂದು ಈ ಸೂಚನೆ ನೀಡಿರುವ  ಚುನಾವಣಾ ಆಯೋಗ ಎರೋಸ್‌ ನೌ ಆ್ಯಪ್‌ ನಲ್ಲಿ ಈಗಾಗಲೇ ಲಭ್ಯವಿರುವ ಈ ವೆಬ್‌ ಸೀರಿಸ್‌ನ ಐದು ಕಂತುಗಳನ್ನು ತೆಗೆದು ಹಾಕುವಂತೆ ತಾಕೀತು ಮಾಡಿದೆ.

ಎರೋಸ್‌ ನೌ ಆ್ಯಪ್‌ ನಲ್ಲಿ ಬಿಡುಗಡೆಯಾಗಿರುವ ವೆಬ್‌ ಸೀರಿಸ್‌ನ ಕಂತುಗಳು ಪ್ರಸ್ತುತ ದೇಶದ ಪ್ರಧಾನಿ ಹುದ್ದೆಯನ್ನು ಅಲಂಕರಿಸಿರುವ, ರಾಜಕೀಯ ಪಕ್ಷವೊಂದರ ನಾಯಕರಾಗಿರುವ, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ನರೇಂದ್ರ ಮೋದಿ ಅವರಿಗೆ ಸಂಬಂಧಿಸಿದ್ದಾಗಿದೆ ಎಂಬುದು ದಾಖಲೆಗಳ ಪರಿಶೀಲನೆ ನಂತರ ದೃಢಪಟ್ಟಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ವೆಬ್‌ ಸೀರಿಸ್‌ನ ಪ್ರದರ್ಶನ ನಿಲ್ಲಿಸಬೇಕು ಎಂದು ಚುನಾವಣಾ ಆಯೋಗದ ಸಮಿತಿ  ಎರೋಸ್‌ ನೌಗೆ ಆದೇಶಿಸಿದೆ.

ಮೀಡಿಯಾ ಪ್ರಮಾಣೀಕರಣ ಮತ್ತು ಮಾನಿಟರಿಂಗ್ ಸಮಿತಿ(ಎಂಸಿಎಂಸಿ) ಯಿಂದ ಅನುಮತಿಯಿಲ್ಲದೆ ಏಪ್ರಿಲ್ನಲ್ಲಿ ಆನ್‌ಲೈನ್‌ ಎರೋಸ್ ನೌ ವೆಬ್ಸೈಟ್ ಪ್ರಧಾನಿ ನರೇಂದ್ರ ಮೋದಿಯ ವೆಬ್ ಸರಣಿಯನ್ನು ಬಿಡುಗಡೆ ಮಾಡಿದೆ ಎಂದು ಸೋಮವಾರದಂದು ದೆಹಲಿ ಸಿಇಒ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು.

ಲೋಕಸಭೆ ಚುನಾವಣೆ ಮುಗಿಯುವ ತನಕ ಪ್ರಧಾನ ಮಂತ್ರಿಯವರ ಜೀವನಚರಿತ್ರೆ ಆಧಾರಿತ ಚಿತ್ರವನ್ನು ನಿಷೇಧಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದ ಕೆಲ ದಿನಗಳ ನಂತರ ದೆಹಲಿ ಸಿಇಒ ಈ ವಿಷಯವನ್ನು ಹೈಲೈಟ್ ಮಾಡಿದೆ. ಯಾವುದೇ ರಾಜಕೀಯ ಅಸ್ತಿತ್ವ ಅಥವಾ ವ್ಯಕ್ತಿಯ ಉದ್ದೇಶವನ್ನು ತಗ್ಗಿಸುವ ಯಾವುದೇ ಚಲನಚಿತ್ರವು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಪ್ರದರ್ಶಿಸಬಾರದು ಎಂದು ಚುನಾವಣಾ ಆಯೋಗ ತನ್ನ ಆದೇಶದಲ್ಲಿ ಹೇಳಿದೆ.

Trending News