ಅಮರನಾಥ ಯಾತ್ರೆ ಮಧ್ಯದಲ್ಲಿ ಭೂಕುಸಿತ, ಐವರು ಯಾತ್ರಿಕರ ಸಾವು

ಬಾಲ್ ತಾಲ್ ಮಾರ್ಗದ ರೇಲ್ ಪಟ್ರಿ ಮತ್ತು ಬ್ರಾರಿಮಾರ್ಗದಲ್ಲಿ ಭೂ ಕುಸಿತ ಉಂಟಾಗಿ ನಾಲ್ವರು ಪುರುಷರು ಹಾಗೂ ಒಬ್ಬ ಮಹಿಳೆ ಮೃತಪಟ್ಟಿದ್ದಾರೆ.  

Updated: Jul 4, 2018 , 08:25 AM IST
ಅಮರನಾಥ ಯಾತ್ರೆ ಮಧ್ಯದಲ್ಲಿ ಭೂಕುಸಿತ, ಐವರು ಯಾತ್ರಿಕರ ಸಾವು

ಶ್ರೀನಗರ: ಹವಾಮಾನ ವೈಪರಿತ್ಯದಿಂದಾಗಿ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಮಂಗಳವಾರ ಮತ್ತೆ ಆರಂಭಗೊಂಡಿತು. ಅಮರನಾಥ ಯಾತ್ರೆ ಮಧ್ಯೆದಲ್ಲಿ ಬಾಲ್ ತಾಲ್ ಮಾರ್ಗದ ರೇಲ್ ಪಟ್ರಿ ಮತ್ತು ಬ್ರಾರಿಮಾರ್ಗದಲ್ಲಿ ಭೂ ಕುಸಿತ ಉಂಟಾಗಿ ಐವರು ಯಾತ್ರಿಕರು ಮೃತಪಟ್ಟಿದ್ದು, 3 ಯಾತ್ರಿಕರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆರ್ಮಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮೃತರ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಹಿತಿಯ ಪ್ರಕಾರ, ಮಂಗಳವಾರ ಸಂಜೆ 6 ಗಂಟೆಯ ವೇಳೆಗೆ ಹವಾಮಾನವು ಇದ್ದಕ್ಕಿದ್ದಂತೆ ಬದಲಾಯಿತು. ಮಳೆ ಆರಂಭವಾಯಿತು. ಭಾರಿ ಮಳೆಯಿಂದಾಗಿ ಬಾಲ್ವಾಲ್ ನಲ್ಲಿ ನಾಲ್ಕು ಪ್ರತ್ಯೇಕ ಸ್ಥಳಗಳಲ್ಲಿ ಭೂಕುಸಿತ ಸಂಭವಿಸಿದೆ. ಇದರಲ್ಲಿ ಮೂರು ಭೂಕುಸಿತಗಳು ಬಾಲ್ವಾಲ್ ಕ್ಯಾಂಪ್ ಪ್ರದೇಶದಲ್ಲ್ಲಿ ಸಂಭವಿಸಿದೆ. ಆದರೆ ಈ ಪ್ರದೇಶದಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಇದಲ್ಲದೆ, ಅಮರನಾಥ ಯಾತ್ರಾರ್ಥಿಗಳ ಟ್ರಕ್ಕಿಂಗ್ ಮಾರ್ಗದಲ್ಲಿ ಭೂಕುಸಿತ ಉಂಟಾಗಿದೆ. ಇದ್ದಕ್ಕಿದ್ದಂತೆ ಮಣ್ಣು ಮತ್ತು ಕಲ್ಲುಗಳು ಬೀಳಲು ಪ್ರಾರಂಭಿಸಿದೆ. ಆ ಸಮಯದಲ್ಲಿ ಕೆಲ ಯಾತ್ರಿಕರು ಕೆಳಗೆ ಜಾರಿದ್ದಾರೆ. ಇಬ್ಬರು ಸ್ಥಳದಲ್ಲೇ ನಿಧನರಾದರು ಮತ್ತು 3 ಮಂದಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಗಾಯಗೊಂಡಿರುವ ಮೂವರಿಗೆ ಚಿಕಿತ್ಸೆ ಮುಂದುವರೆದಿದೆ. ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಉಳಿದ ಯಾತ್ರಿಗಳ ರಕ್ಷಣೆ ಮಾಡಿದ್ದಾರೆ.