ಹೊಸದಿಲ್ಲಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಗೋವಾ ಸರ್ಕಾರದ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಏಮ್ಸ್ನಲ್ಲಿ ಪ್ಯಾಂಕ್ರಿಯಾಟಿಕ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೆಪ್ಟೆಂಬರ್ 15 ರಂದು ದಾಖಲಾದ ನಂತರ ಮೊದಲ ಅಧಿಕೃತ ಸಭೆ ನಡೆಸುತ್ತಿದ್ದಾರೆ.
ಮಹಾರಾಷ್ಟ್ರವಾದಿ ಗೊಮಾಂತಕ್ ಪಾರ್ಟಿ (ಎಂಜಿಪಿ) ಮತ್ತು ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್ಪಿ) ಯೊಂದಿಗೆ ರಾಜ್ಯ ಆಡಳಿತಕ್ಕೆ ಸಂಬಂಧಿಸಿದಂತೆ ಪರಿಕರ್ ಅವರು ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ. ಎಂ.ಜಿ.ಪಿ ನಾಯಕ ಮತ್ತು ಪಿಡಬ್ಲ್ಯೂಡಿ ಸಚಿವ ಸುಡಿನ್ ಧವಳಿಕರ್, ಜಿಎಫ್ಪಿ ನಾಯಕ ಮತ್ತು ಪಟ್ಟಣ ಯೋಜನಾ ಸಚಿವ ವಿಜಯ್ ಸರ್ದೇಸಾಯಿ, ಆದಾಯ ಸಚಿವ ರೋಹನ್ ಖೌಂಟೆ ಮತ್ತು ಕಲಾ ಮತ್ತು ಸಂಸ್ಕೃತಿ ಸಚಿವ ಗೋವಿಂದ್ ಗಾವೆಡೆ ಅವರನ್ನು ಸಭೆಗೆ ಆಹ್ವಾನಿಸಲಾಗಿದೆ. ಬಿಜೆಪಿಯ ನೇತೃತ್ವದ ಗೋವಾ ಮೈತ್ರಿಗೆ ಬೆಂಬಲ ನೀಡಿರುವ ಸ್ವತಂತ್ರ ಅಭ್ಯರ್ತಿ ಪ್ರಸಾದ್ ಗಾಂಕರ್ ಇಂದಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
"ಅಕ್ಟೋಬರ್ 12 ರಂದು ದೆಹಲಿಯಲ್ಲಿ ಗೋವಾ ಮುಖ್ಯಮಂತ್ರಿಯೊಂದಿಗೆ ಸಭೆಗೆ ನನ್ನನ್ನು ಆಮಂತ್ರಿಸಲಾಗಿದೆ.ಇನ್ನು ಯಾರನ್ನು ಆಹ್ವಾನಿಸಲಾಗಿದೆ ಎಂದು ನನಗೆ ಗೊತ್ತಿಲ್ಲ" ಎಂದು ಗವೆಡೆ ಪಿಟಿಐಗೆ ತಿಳಿಸಿದರು.ಪರಿಕ್ಕರ್ ಅವರ ಅನಾರೋಗ್ಯದ ಕಾರಣ ಗೋವಾದಲ್ಲಿ ವಿರೋಧ ಪಕ್ಷಗಳು ಸರ್ಕಾರದ ಸ್ಥಿರತೆ ಬಗ್ಗೆ ಪ್ರಶ್ನೆಗಳನ್ನು ಎತ್ತಿವೆ.
40 ಸದಸ್ಯರ ಅಸೆಂಬ್ಲಿಯಲ್ಲಿ 14 ಶಾಸಕರನ್ನು ಹೊಂದಿರುವ ಬಿಜೆಪಿ, ಎಂಜಿಪಿ, ಜಿಎಫ್ಪಿ, ಎನ್ಸಿಪಿ ಮತ್ತು ಮೂರು ಸ್ವತಂತ್ರ ಅಭ್ಯರ್ಥಿಗಳ ಸಹಾಯದಿಂದ ರಾಜ್ಯವನ್ನು ಆಳುತ್ತಿದೆ. ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ 16 ಶಾಸಕರನ್ನು ಹೊಂದಿದೆ.