ಅಹಮದಾಬಾದ್: ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ ಗೆಲ್ಲಲು ಇವಿಎಂ ತಿರುಚಿದ್ದೇ ಕಾರಣ ಎಂದು ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ ಸಂಚಾಲಕ ಹಾರ್ದಿಕ್ ಪಟೇಲ್ ಆರೋಪಿಸಿದ್ದಾರೆ.
ಗುಜರಾತ್ ಚುನಾವಣಾ ಫಲಿತಾಂಶದ ಬೆನ್ನಿಗೆ ಅಹಮದಾಬಾದ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, "ಸೂರತ್, ರಾಜ್ ಕೋಟ್, ಅಹಮದಾಬಾದ್ ನಲ್ಲಿ ಇವಿಎಂ ತಿರುಚಲಾಗಿದೆ. ಎಲ್ಲೆಲ್ಲಿ ಟ್ಯಾಂಪರಿಂಗ್ ನಡೆದಿದೆಯೋ ಅಲ್ಲೆಲ್ಲಾ ಗೆಲುವಿನ ಅಂತರ ಕಡಿಮೆಯಾಗಿದೆ. ಒಂದು ವೇಳೆ ಬಿಜೆಪಿ ಅಕ್ರಮ ನಡೆಸದಿದ್ದರೆ ಖಂಡಿತಾ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ'' ಎಂದು ಹೇಳಿಕೆ ನೀಡಿದ್ದಾರೆ.
ಗುಜರಾತ್ ಚುನಾವಣೆ 'ಫಿಕ್ಸೆಡ್ ಮ್ಯಾಚ್' ಇದ್ದಂತೆ ಎಂದು ಬಣ್ಣಿಸಿರುವ ಹಾರ್ದಿಕ್ ಪಟೇಲ್ ಮರು ಮತಎಣಿಕೆ ನಡೆಸುವಂತೆ ಇದೇ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ. ಇನ್ನು ಗುಜರಾತಿನ ಜನರು ಒಳ್ಳೆಯವರು. ಆದರೆ ಹಣಬಲ ಮತ್ತು ಕೊಳಕು ತಂತ್ರಗಳ ಮೂಲಕ ಜನರ ಮೇಲೆ ಪ್ರಭಾವ ಬೀರಲಾಯಿತು ಎಂದು ಅವರು ದೂರಿದ್ದಾರೆ.
ನಮಗಿನ್ನೂ ಇವಿಎಂಗಳ ಬಗ್ಗೆ ನಂಬಿಕೆ ಬಂದಿಲ್ಲ ಎಂದು ಹೇಳಿರುವ ಹಾರ್ದಿಕ್ ಪಟೇಲ್, ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲದ ಕಾರಣ ನನ್ನ ಹೋರಾಟ ಸದಾ ಮುಂದುವರಿಯಲಿದೆ ಎಂದು ಗುಡುಗಿದ್ದಾರೆ.