ಚೆನ್ನೈ: ಸಮುದ್ರದ ಮಾರ್ಗವಾಗಿ ಪಾಕಿಸ್ತಾನ ಮೂಲಕ ಲಷ್ಕರ್-ಎ-ತೊಯ್ಬಾ ಸಂಘಟನೆಯ ಉಗ್ರರ ಗುಂಪು ತಮಿಳುನಾಡಿಗೆ ಪ್ರವೇಶಿಸಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ತಮಿಳುನಾಡಿನಾದ್ಯಂತ ಭಾರೀ ಬಿಗಿ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯದ ಹಲವು ಪ್ರಮುಖ ನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಶ್ರೀಲಂಕಾದಿಂದ ಸಮುದ್ರ ಮಾರ್ಗವಾಗಿ ಕನಿಷ್ಠ ಆರು ಮಂದಿ ಉಗ್ರರು ತಮಿಳುನಾಡು ಪ್ರವೇಶಿಸಿದ್ದು, ಕೊಯಂಬತ್ತೂರು ಸೇರಿದಂತೆ ಹಲವು ನಗರಗಳಿಗೆ ಲಗ್ಗೆ ಇಡುವ ಸಾಧ್ಯತೆ ಇದೇ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣ, ಧಾರ್ಮಿಕ ಕ್ಷೇತ್ರಗಳು ಸೇರಿದಂತೆ ಎಲ್ಲೆಡೆ ಭದ್ರತೆ ಹೆಚ್ಚಿಸಲಾಗಿದೆ.
ಉಗ್ರರ ಹೆಚ್ಚಿನ ಒಳನುಸುಳುವಿಕೆಯನ್ನು ತಡೆಗಟ್ಟಲು ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ಎಚ್ಚರಿಕೆ ನೀಡಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯಕ್ಕೆ ಕಾಲಿಟ್ಟ ಆರು ಭಯೋತ್ಪಾದಕರಲ್ಲಿ ಒಬ್ಬ ಪಾಕಿಸ್ತಾನಿ ಮತ್ತು ಐದು ಶ್ರೀಲಂಕಾದ ತಮಿಳು ಮುಸ್ಲಿಮರು ಸೇರಿದ್ದಾರೆ. ಪಾಕಿಸ್ತಾನದ ಭಯೋತ್ಪಾದಕನನ್ನು ಇಲಿಯಾಸ್ ಅನ್ವರ್ ಎಂದು ಗುರುತಿಸಲಾಗಿದೆ.
ಎಚ್ಚರಿಕೆಯ ಪ್ರಕಾರ, ಪುರುಷರು ಹಿಂದೂಗಳಂತೆ ವೇಷ ಧರಿಸಿ ಪ್ರವೇಶಿಸಿದ್ದಾರೆ ಎಂದು ಹೇಳಲಾಗಿದೆ. ಗುಪ್ತಚರ ಎಚ್ಚರಿಕೆಯ ಪರಿಣಾಮವಾಗಿ, ಕೊಯಮತ್ತೂರು ಜಿಲ್ಲೆಯಾದ್ಯಂತ ಗಸ್ತು ಹೆಚ್ಚಿಸಲಾಗಿದೆ.
ನಗರ ಮತ್ತು ಗಡಿ ಪ್ರದೇಶಗಳಲ್ಲಿ ವಾಹನ ತಪಾಸಣೆ ತೀವ್ರಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲಾ ನಗರ ಪೊಲೀಸ್ ಆಯುಕ್ತರು ಮತ್ತು ಎಸ್‌ಪಿಗಳಿಗೆ ಎಚ್ಚರಿಕೆ ಕಳುಹಿಸಲಾಗಿದ್ದು, ರಾಜ್ಯ ಪೊಲೀಸ್ ಪಡೆ ಗರಿಷ್ಠ ಎಚ್ಚರಿಕೆ ವಹಿಸುವಂತೆ ಕೇಳಿದೆ.
ಚೆನ್ನೈ ಪೊಲೀಸ್ ಆಯುಕ್ತ ಕೆ. ವಿಶ್ವನಾಥನ್, '' ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಹೆಚ್ಚಿನ ಎಚ್ಚರಿಕೆ ವಹಿಸಿದ್ದಾರೆ'' ಎಂದು ತಿಳಿಸಿದರು.