ಶಿಮ್ಲಾ: ಹಿಮಾಚಲಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ನಂತರ ಮುಖ್ಯಮಂತ್ರಿ ಪದವಿಗಾಗಿ ಸ್ಪರ್ಧೆ ಪ್ರಾರಂಭವಾಗಿದೆ. ನಾಮುಂದು, ತಾಮುಂದು ಎನ್ನುತ್ತಿರುವ ಸಿಎಂ ರೇಸ್ನಲ್ಲಿ ಜಯರಾಂ ಠಾಕೂರ್ ಹೆಸರು ಎಲ್ಲಕ್ಕಿಂತ ಮುಂದಿದೆ ಎಂದು ಹೇಳಲಾಗುತ್ತಿದೆ.
ಚುನಾವಣೆಯಲ್ಲಿ ಆಯ್ಕೆಯಾಗಿರುವ ಎಲ್ಲಾ ಬಿಜೆಪಿ ಶಾಸಕರೊಂದಿಗೆ ಚರ್ಚಿಸಿ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಐದನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಜಯರಾಂ ಠಾಕೂರ್ ಹಿಮಾಚಲಪ್ರದೇಶದ ಮುಂದಿನ ಮುಖ್ಯಮಂತ್ರಿ ಆಗಬಹುದು ಎಂದು ನಿರೀಕ್ಷಿಸಲಾಗಿದೆ.
ಏತನ್ಮಧ್ಯೆ, ಬಿಜೆಪಿಯ ಕೇಂದ್ರ ವೀಕ್ಷಕರಾದ ನಿರ್ಮಲಾ ಸೀತಾರಾಮನ್ ಮತ್ತು ನರೇಂದ್ರ ಸಿಂಗ್ ತೋಮರ್ ಅವರು ಹೊಸದಾಗಿ ಆಯ್ಕೆಯಾದ ಶಾಸಕರೊಂದಿಗೆ ಗುರುವಾರ ಭೇಟಿಯಾಗಿದ್ದಾರೆ.