ದೆಹಲಿ ಆಡಳಿತದಲ್ಲಿ ಲೆಫ್ಟಿನೆಂಟ್ ಗವರ್ನರ್​ಗೆ ಹೆಚ್ಚಿನ ಅಧಿಕಾರ: ಸುಪ್ರೀಂ ತೀರ್ಪು

ದೆಹಲಿ ಆಡಳಿತದಲ್ಲಿ ಅಧಿಕಾರದ ವ್ಯಾಪ್ತಿ ವಿಚಾರದಲ್ಲಿ ಲೆಫ್ಟಿನೆಂಟ್ ಗವರ್ನರ್​ಗೆ ಹೆಚ್ಚಿನ ಅಧಿಕಾರ ವ್ಯಾಪ್ತಿ ಇದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ.

Last Updated : Feb 14, 2019, 12:28 PM IST
ದೆಹಲಿ ಆಡಳಿತದಲ್ಲಿ ಲೆಫ್ಟಿನೆಂಟ್ ಗವರ್ನರ್​ಗೆ ಹೆಚ್ಚಿನ ಅಧಿಕಾರ: ಸುಪ್ರೀಂ ತೀರ್ಪು title=
File Photo: PTI

ನವದೆಹಲಿ: ದೆಹಲಿ ಆಡಳಿತದಲ್ಲಿ ಅಲ್ಲಿನ ಸರ್ಕಾರಕ್ಕಿಂತ  ಲೆಫ್ಟಿನೆಂಟ್ ಗವರ್ನರ್​ಗೆ ಹೆಚ್ಚಿನ ಅಧಿಕಾರ ವ್ಯಾಪ್ತಿ ಇದೆ ಎಂದು ಸುಪ್ರೀಂಕೋರ್ಟಿನ ನ್ಯಾ. ಎ.ಕೆ. ಸಿಕ್ರಿ ಮತ್ತು ನ್ಯಾ. ಅಶೋಕ್ ಭೂಷಣ್ ದ್ವಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

ಕಳೆದ ವರ್ಷ ಆಡಳಿತಾತ್ಮಕ ವಿಚಾರದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ನಡುವೆ ಉಂಟಾದ ಬಿಕ್ಕಟ್ಟಿನ ಕುರಿತು ದೆಹಲಿ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಕೇಜ್ರಿವಾಲ್ ಸುಪ್ರೀಂ ಮೊರೆ ಹೋಗಿದ್ದರು. 

ಇಂದು ಈ ವಿಚಾರವಾಗಿ ತೀರ್ಪು ಪ್ರಕಟಿಸಿರುವ ಸುಪ್ರೀಂಕೋರ್ಟ್, ಅತ್ಯಂತ ಪ್ರಮುಖ ಭಾಗವಾದ ಭ್ರಷ್ಟಾಚಾರ ವಿರೋಧಿ ತನಿಖೆಗಳ ಅಧಿಕಾರವು ದೆಹಲಿ ಲೆಫ್ಟಿನೆಂಟ್ ರಾಜ್ಯಪಾಲರ ಕೈಯಲ್ಲೇ ಇರಲಿದೆ. ಹಾಗೆಯೇ, ಕೇಜ್ರಿವಾಲ್ ಸರಕಾರ ಬಲವಾಗಿ ಒತ್ತಾಯಿಸುತ್ತಿರುವ ಪೊಲೀಸ್ ಇಲಾಖೆಯ ನಿಯಂತ್ರಣ ಕೂಡ ಎಲ್​ಜಿ ಅವರ ಬಳಿಯೇ ಇರಲಿದೆ. ವಿವಿಧ ಇಲಾಖೆಗಳ ಜಂಟಿ ಕಾರ್ಯದರ್ಶಿ ಹಾಗೂ ಅದಕ್ಕಿಂತ ಉನ್ನತ ಹುದ್ದೆಯ ಅಧಿಕಾರಿಗಳ ನೇಮಕ ಮತ್ತು ವರ್ಗಾವಣೆ ಅಧಿಕಾರವೂ ಎಲ್​ಜಿ ಅವರ ಬಳಿಯೇ ಇರಬೇಕು ಎಂದು ತಿಳಿಸಿದೆ.

ದೆಹಲಿ ಆಡಳಿತಕ್ಕೆ ಸಂಬಂಧಿಸಿದ ಆರು ವಿಚಾರಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಅದರಲ್ಲಿ ನಾಲ್ಕು ಎಲ್​ಜಿ ಪರವಾಗಿದ್ದರೆ, ಇನ್ನೆರಡು ದೆಹಲಿ ಸರಕಾರದ ಪರವಾಗಿವೆ. ಭ್ರಷ್ಟಾಚಾರ ವಿರೋಧಿ ಸಂಸ್ಥೆ, ಗ್ರೇಡ್ 1 ಮತ್ತು 2 ಅಧಿಕಾರಿಗಳ ನೇಮಕಾತಿ ಮತ್ತು ವರ್ಗಾವಣೆ, ಕಮಿಷನ್ ಆಫ್ ಇನ್​ಕ್ವೈರಿ ಇವು ಎಲ್​ಜಿ ಮೂಲಕ ಕೇಂದ್ರ ಸರಕಾರದ ನಿಯಂತ್ರಣದಲ್ಲೇ ಇರಲಿವೆ ಎಂದು ನ್ಯಾಯಪೀಠ ತಿಳಿಸಿದೆ. 

ವಿದ್ಯುತ್ ಸುಧಾರಣೆ ಕಾಯ್ದೆಯ ಅಧಿಕಾರವನ್ನು ದೆಹಲಿ ಸರಕಾರಕ್ಕೆ ನೀಡಲಾಗಿದೆ. ಕೃಷಿ ಭೂಮಿಯ ಕನಿಷ್ಠ ದರದ ಪರಿಷ್ಕರಣೆಯ ಅಧಿಕಾರವು ದೆಹಲಿ ಸರಕಾರಕ್ಕೆ ಇದೆಯಾದರೂ ಅಗತ್ಯಬಿದ್ದಲ್ಲಿ ಎಲ್​ಜಿ ಅವರು ರಾಷ್ಟ್ರಪತಿಗಳ ಗಮನಕ್ಕೆ ತರುವ ಅಧಿಕಾರ ಹೊಂದಿರುತ್ತಾರೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. 

ಅದಾಗ್ಯೂ ಸೇವೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರೂ ನ್ಯಾಯಮೂರ್ತಿಗಳಲ್ಲಿ ವಿಭಿನ್ನ ಅಭಿಪ್ರಾಯ ಮೂಡಿರುವುದರಿಂದ ದೆಹಲಿಯಲ್ಲಿ ಸರ್ವಿಸ್ ಅಧಿಕಾರ ಇರುವುದು ದೆಹಲಿ ಸರ್ಕಾರಕ್ಕೋ? ಅಥವಾ ಲೆಫ್ಟಿನೆಂಟ್ ಗವರ್ನರ್ ಅವರಿಗೋ? ಎಂಬುದನ್ನು ತೀರ್ಮಾನಿಸಲು ಈ ವಿಷಯವನ್ನು ತ್ರಿಸದಸ್ಯ ಪೀಠಕ್ಕೆ ಸೂಚಿಸಿದೆ.
 

Trending News