ನವದೆಹಲಿ: ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಆರೋಗ್ಯ ಸೋಮವಾರ ಸಂಜೆ ತೀವ್ರವಾಗಿ ಕ್ಷೀನಿಸಿದ್ದು, ಅವರನ್ನು ಗುರುಗ್ರಾಂ ನಲ್ಲಿರುವ ಮೆದಾಂತ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆದಿದೆ.
ಭಾನುವಾರ ಸಂಜೆಯೇ ಮುಲಾಯಂ ಸಿಂಗ್ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಕಾರಣ ಅವರು ಲಕ್ನೋನ ಡಾ. ರಾಮ್ ಮನೋಹರ್ ಲೋಹಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಮುಲಾಯಂ ಸಿಂಗ್ ಯಾದವ್ ಹೈ ಶುಗರ್ ಮತ್ತು ಕಾರ್ಡಿಯೋ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಾಹಿತಿ ಪ್ರಕಾರ, ಮುಲಾಯಂ ಸಿಂಗ್ ಯಾದವ್ ಅವರ ಅರೋಗ್ಯ ತೀವ್ರವಾಗಿ ಕ್ಷೀಣಿಸಿದ ಹಿನ್ನೆಲೆಯಲ್ಲಿ ಅವರನ್ನು ಖಾಸಗಿ ವಿಮಾನದ ಮೂಲಕ ದೆಹಲಿಯ ಆಸ್ಪತ್ರೆಗೆ ಕರೆತರಲಾಗಿದೆ.
ಸೋಮವಾರ (ಜೂನ್ 10) ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಮಾಜವಾದಿ ಪಕ್ಷದ ಪೋಷಕ ಮುಲಾಯಂ ಸಿಂಗ್ ಯಾದವ್ ಅವರ ನಿವಾಸದಲ್ಲಿ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಆ ವೇಳೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಪ್ರಗತಿಪರ ಸಮಾಜವಾದಿ ಪಕ್ಷದ (ಲೋಹಿಯಾ) ಮತ್ತು ಮುಲಾಯಂ ಸಿಂಗ್ ಅವರ ಕಿರಿಯ ಸಹೋದರ ಶಿವಪಾಲ್ ಯಾದವ್ ಉಪಸ್ಥಿತರಿದ್ದರು.