ನವ ದೆಹಲಿ: ನವ ದೆಹಲಿಯ ರಾಮಲೀಲಾ ಮೈದಾನವು ಬಹುತೇಕ ಹಸಿರು ಮತ್ತು ಕೆಂಪು ವರ್ಣಗಳಿಂದ ಕಂಗೊಳಿಸುತ್ತಿದೆ. ಅಲ್ಲದೆ ರೈತರ ಘೋಷಣೆಗಳು ಮುಗಿಲು ಮುಟ್ಟುವಂತಿದೆ, ಕೆಂಪು ಹಸಿರು ಶಾಲುಗಳನ್ನು ಧರಿಸಿರುವ ರೈತರು, ರಾಮಲೀಲಾ ಮೈದಾನದಿಂದ ಸಂಸತ್ತಿನವರೆಗೆ ರ್ಯಾಲಿ ಕೈಗೊಂಡಿವೆ.
ಇದೇ ಮೊದಲ ಬಾರಿಗೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ದೇಶದ ಹಲವಾರು ರೈತ ಸಂಘಟನೆಗಳ ಒಕ್ಕೂಟದೊಂದಿಗೆ ನಡೆಯುತ್ತಿರುವ ಈ ಬೃಹತ್ ರ್ಯಾಲಿಯು ರೈತ ಚಳುವಳಿಯ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದಿದೆ. ದೇಶದ ವಿವಿಧ ಭಾಗಗಳಿಂದ 180ಕ್ಕೂಹೆಚ್ಚಿನ ರೈತ ಸಂಘಟನೆಗಳು ಈ ಹೋರಾಟಕ್ಕೆ ಕೈಜೋಡಿಸಿವೆ. 'ಅಖಿಲ ಭಾರತ ಕಿಸಾನ್ ಸಂಘರ್ಷ ಸಹಕಾರಿ ಸಮಿತಿ'ಯ ಆಶ್ರಯದಲ್ಲಿ 'ಕಿಸಾನ್ ಮುಕ್ತಿ ಸಂಸದ್' ಮೂಲಕವಾಗಿ ರೈತರ ಸಮಸ್ಯೆಗಳಿಗೆ ಪೂರ್ಣ ಪ್ರಮಾಣದ ಪರಿಹಾರ ಕಂಡುಕೊಳ್ಳಲು ಈ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ಹೋರಾಟದ ಕುರಿತಾಗಿ ಟ್ವೀಟ್ ಮಾಡಿರುವ ಸ್ವರಾಜ್ ಇಂಡಿಯಾ ಪಕ್ಷದ ನಾಯಕ ಯೋಗೇಂದ್ರ ಯಾದವ್ "ಈಗ ರೈತರ ಏಕತೆಗೆ ಬಣ್ಣ ಬಂದಿದೆ. ಈ ಸಾರಿ ನಾವೆಲ್ಲಾ ಸೇರಿ ರೈತರನ್ನು ಗೆಲ್ಲಿಸೋಣ" ಎಂಬ ಪಣ ತೊಟ್ಟಿದ್ದಾರೆ.
ये एकता अब रंग लाएगी. हम सब साथ चलेंगे और इस बार किसान जीतेगा. #KisanMuktiSansad pic.twitter.com/dcX3eQRLIs
— Yogendra Yadav (@_YogendraYadav) November 20, 2017
ಈ ಚಳುವಳಿಯ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಕರ್ನಾಟಕದ ಸ್ವರಾಜ್ ಇಂಡಿಯಾ ಪಕ್ಷದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ "ಇತ್ತೀಚಿನ ದಿನಗಳಲ್ಲಿ ಹಳ್ಳಿಗಳನ್ನು ನಿರ್ಲಕ್ಷಿಸಲಾಗುತ್ತಿದೆ, ಅದರ ಕುರಿತಾಗಿಯೇ ಬೃಹತ್ ಚಳುವಳಿಯನ್ನು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲೂ ಸಹಿತ ಚಳುವಳಿಗಳು ನಡೆಯುತ್ತಲೇ ಇರುತ್ತವೆ ಎಂದಿದ್ದಾರೆ. ಜೊತೆಗೆ ಈಗ ಸಂಸತ್ತಿನ ಮುಂದೆ ಮಾಡಲಾಗುತ್ತಿರುವ ಪ್ರತಿಭಟನೆಯ ನಂತರ ಬೇರೆ ಬೇರೆ ರಾಜ್ಯಗಳಲ್ಲಿ ಮುಂದೆ ಹೇಗೆ ಚಳುವಳಿಯನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಸಮಾಲೋಚನೆ ನಡೆಸಿ ಈ ಚಳುವಳಿಯನ್ನು ಮುಂದುವರೆಸುತ್ತೇವೆ" ಎಂದು ತಿಳಿಸಿದರು.
ಮುಂದುವರೆದು ಮಾತನಾಡುತ್ತಾ ರೈತರು ಜಾಗೃತರಾಗಿದ್ದಾರೆ, ಹಳ್ಳಿಗಳನ್ನು ಉಳಿಸಿಕೊಳ್ಳಬೇಕಾಗಿದೆ. ರೈತರ ಬದುಕಿನ ಬಗ್ಗೆ ರಾಜಕೀಯ ಪಕ್ಷಗಳು ಮಾತನಾಡದೆ ಇದ್ದರೆ ಅವುಗಳಿಗೆ ಖಂಡಿತ ಅಪಾಯದ ಸ್ಥಿತಿ ಕಾದಿದೆ ಎಂದು ತಿಳಿಸುತ್ತ ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.