ನವದೆಹಲಿ: ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಕಾಶ್ಮೀರದಲ್ಲಿ ದೀರ್ಘಕಾಲದ ಸಮಸ್ಯೆಗೆ ಕಾರಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಆರೋಪಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಕಾಶ್ಮೀರವನ್ನು ವಿಶ್ವಸಂಸ್ಥೆಗೆ ಕೊಂಡೊಯ್ಯುವ ನಿರ್ಧಾರವನ್ನು ಪ್ರತ್ಯೇಕವಾಗಿ ಜವಾಹರಲಾಲ್ ನೆಹರು ತೆಗೆದುಕೊಂಡಿದ್ದಾರೆ ಎಂದು ಹೇಳಿದರು. ಈ ತಪ್ಪು ಹಿಮಾಲಯಕ್ಕಿಂತ ದೊಡ್ಡದಾಗಿದೆ ಎಂದು ಅಮಿತ್ ಶಾ ಹೇಳಿದರು. 'ಸರ್ದಾರ್ ಪಟೇಲ್ 630 ಪ್ರಾಂತ್ಯಗಳನ್ನು ಒಂದುಗೂಡಿಸಿದರೆ. ನೆಹರೂ ಅವರಿಗೆ ಕೇವಲ ಭಾರತದೊಂದಿಗೆ ಜೆ & ಕೆ ಅನ್ನು ಒಂದುಗೂಡಿಸುವ ಕೆಲಸವಿತ್ತು .ಆದರೆ ಆ ಕೆಲಸವು ಆಗಸ್ಟ್ 2019 ರಲ್ಲಿ ಮೋದಿಯವರು 370 ನೇ ವಿಧಿ ಕುರಿತು ನಿರ್ಧಾರ ತೆಗೆದುಕೊಂಡ ನಂತರ ನಡೆಯಿತು' ಎಂದು ಅಮಿತ್ ಶಾ ಹೇಳಿದರು.
ವಿಧಿ 370 ರ ಅಡಿಯಲ್ಲಿ ಜೆ & ಕೆ ಅನುಭವಿಸುತ್ತಿರುವ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಮೋದಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ಅಮಿತ್ ಶಾ, 'ಇಂದಿಗೂ ಸಹ 370 ನೇ ವಿಧಿ ಮತ್ತು ಕಾಶ್ಮೀರದ ಬಗ್ಗೆ ಅನೇಕ ವದಂತಿಗಳು ನಡೆಯುತ್ತಿವೆ. ಅವುಗಳನ್ನು ಸ್ಪಷ್ಟಪಡಿಸುವುದು ಮುಖ್ಯವಾಗಿದೆ' ಎಂದು ಹೇಳಿದರು.
'1947 ರಿಂದ ನಮಗೆ ತಿಳಿದಿದೆ, ಕಾಶ್ಮೀರ ಚರ್ಚೆಯ ಮತ್ತು ವಿವಾದದ ವಿಷಯವಾಗಿದೆ, ಆದರೆ ವಿಕೃತ ಇತಿಹಾಸವನ್ನು ಜನರ ಮುಂದೆ ಪ್ರಸ್ತುತಪಡಿಸಲಾಯಿತು. ಇತಿಹಾಸವನ್ನು ಬರೆಯುವ ಜವಾಬ್ದಾರಿ ತಪ್ಪುಗಳನ್ನು ಮಾಡಿದ ಅದೇ ಜನರ ಕೈಯಲ್ಲಿರುವುದರಿಂದ, ನಿಜವಾದ ಸಂಗತಿಗಳನ್ನು ಮರೆಮಾಡಲಾಗಿದೆ. ಸರಿಯಾದ ಇತಿಹಾಸವನ್ನು ಜನರ ಮುಂದೆ ಬರೆದು ಪ್ರಸ್ತುತಪಡಿಸುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ ಎಂದು ಅಮಿತ್ ಶಾ ಹೇಳಿದರು. ದೇಶದ ಹಿಂದಿನ ಕಾಂಗ್ರೆಸ್ ಸರ್ಕಾರಗಳು ಇತಿಹಾಸವನ್ನು ವಿರೂಪಗೊಳಿಸುತ್ತಿವೆ ಎಂದು ಶಾ ಈ ಸಂದರ್ಭದಲ್ಲಿ ಆರೋಪಿಸಿದರು.
ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕಾಶ್ಮೀರ ಸಮಸ್ಯೆಯನ್ನು ಪದೇ ಪದೇ ಪ್ರಸ್ತಾಪಿಸಿದ್ದಕ್ಕಾಗಿ ಪಾಕಿಸ್ತಾನದ ಮೇಲೆ ವಾಗ್ದಾಳಿ ನಡೆಸಿದ ಅಮಿತ್ ಶಾ, 'ವಿಶ್ವಸಂಸ್ಥೆಯಲ್ಲಿ ಯಾವುದೇ ದೇಶ ಪಾಕಿಸ್ತಾನವನ್ನು ಬೆಂಬಲಿಸಲಿಲ್ಲ. ಎಲ್ಲಾ ದೇಶಗಳು ಭಾರತದ ಆತ್ಮರಕ್ಷಣೆಯ ಹಕ್ಕನ್ನು ಬೆಂಬಲಿಸಿದವು. ಇದು ಪ್ರಧಾನಿ ನರೇಂದ್ರ ಮೋದಿಯವರ ಅತಿದೊಡ್ಡ ರಾಜತಾಂತ್ರಿಕ ವಿಜಯವಾಗಿದೆ ಎಂದು ಶಾ ಹೊಗಳಿದರು.