ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯ ಘೋಷಣೆ: ಪಡಿತರ ಚೀಟಿ ಇಲ್ಲದಿದ್ದರೂ ಸಿಗಲಿದೆ ಸೌಲಭ್ಯ

ಆಗಸ್ಟ್ 2020ರ ವೇಳೆಗೆ ಈ ವ್ಯವಸ್ಥೆಯು ದೇಶಾದ್ಯಂತ ಅನ್ವಯವಾಗಲಿದೆ. ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆಯಲ್ಲಿ ದೇಶದಲ್ಲಿ ವಾಸಿಸುವ ಯಾವುದೇ ನಾಗರಿಕರಿಗೆ ಕೇವಲ ಒಂದು ಪಡಿತರ ಚೀಟಿ ಇರುತ್ತದೆ. ಅವರು ಎಲ್ಲಿಂದಲಾದರೂ ಪಡಿತರವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

Written by - Yashaswini V | Last Updated : May 15, 2020, 07:49 AM IST
ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯ ಘೋಷಣೆ: ಪಡಿತರ ಚೀಟಿ ಇಲ್ಲದಿದ್ದರೂ ಸಿಗಲಿದೆ ಸೌಲಭ್ಯ title=

ನವದೆಹಲಿ: ಕರೋನಾ ಬಿಕ್ಕಟ್ಟಿನ ಮಧ್ಯೆ ಪ್ರಧಾನಿ ನರೇಂದ್ರ ಮೋದಿ (Narendra Modi) ಘೋಷಿಸಿದ 20 ಲಕ್ಷ ಕೋಟಿ ರೂ.ಗಳ ಎರಡನೇ ಕಂತಿನ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮಾಹಿತಿ ನೀಡಿದರು. ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಸರ್ಕಾರವು ಅನೇಕ ಪ್ರಮುಖ ಕ್ಷೇತ್ರಗಳನ್ನು ಆರ್ಥಿಕ ಪ್ಯಾಕೇಜ್‌ನಲ್ಲಿ ಇರಿಸಿದೆ. ಎಂಎಸ್‌ಎಂಇ ವಲಯಕ್ಕೆ ಬುಧವಾರ (ಮೇ 13) ದೊಡ್ಡ ಘೋಷಣೆಯ ನಂತರ ಗುರುವಾರ (ಮೇ 14) ಕಾರ್ಮಿಕರು, ರೈತರು ಮತ್ತು ರಸ್ತೆ ಬೀದಿ ಬದಿಯ ಮಾರಾಟಗಾರರಿಗೆ ಅನೇಕ ಪ್ರಕಟಣೆಗಳನ್ನು ಮಾಡಲಾಯಿತು. 

ಒಂದು ರಾಷ್ಟ್ರ - ಒಂದು ಪಡಿತರ ಚೀಟಿ (One Nation One Ration Card)
ಒನ್ ನೇಷನ್-ಒನ್ ರೇಷನ್ ಕಾರ್ಡ್ ಯೋಜನೆ ಬಗ್ಗೆ ಘೋಷಣೆ ಮಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇದು ಪ್ರತಿ ರಾಜ್ಯದಲ್ಲೂ ಅನ್ವಯವಾಗುತ್ತದೆ. ಈ ಕಾರ್ಡ್ ಸಹಾಯದಿಂದ ವಲಸಿಗರು ಯಾವುದೇ ರಾಜ್ಯದ ಪಡಿತರ ಡಿಪೋದಿಂದ ಪಡಿತರವನ್ನು ತೆಗೆದುಕೊಳ್ಳಬಹುದು. ಆಗಸ್ಟ್ 2020ರ ವೇಳೆಗೆ ಈ ವ್ಯವಸ್ಥೆಯು ದೇಶಾದ್ಯಂತ ಅನ್ವಯವಾಗಲಿದೆ. ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆಯಲ್ಲಿ, ದೇಶದಲ್ಲಿ ವಾಸಿಸುವ ಯಾವುದೇ ನಾಗರಿಕರಿಗೆ ಕೇವಲ ಒಂದು ಪಡಿತರ ಚೀಟಿ ಇರುತ್ತದೆ. ಅವರು ಎಲ್ಲಿಂದಲಾದರೂ ಪಡಿತರವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಈ ಯೋಜನೆಯ ಲಾಭವನ್ನು ಪಡಿತರ ಚೀಟಿ ಹೊಂದಿರುವವರಿಗೆ ನೀಡಲಾಗುವುದು. ಪಡಿತರ ಚೀಟಿ ಹೊಂದಿರುವವರು ದೇಶದ ಯಾವುದೇ ಭಾಗದಲ್ಲಿರುವ ಸರ್ಕಾರಿ ಪಡಿತರ ಅಂಗಡಿಗಳಿಂದ ಕಡಿಮೆ ಬೆಲೆಗೆ ಧಾನ್ಯವನ್ನು ಖರೀದಿಸಲು ಸಾಧ್ಯವಾಗುತ್ತದೆ. ಉದಾಹರಣೆಗೆ ಕರ್ನಾಟಕದ ನಾಗರೀಕರು ತಮಿಳುನಾಡು, ಆಂಧ್ರ ಪ್ರದೇಶ, ಪಂಜಾಬ್, ಉತ್ತರಪ್ರದೇಶ ಹೀಗೆ ಯಾವುದೇ ರಾಜ್ಯದಲ್ಲಾದರೂ ಪಡಿತರ ಪಡೆಯಬಹುದು.

ಪಡಿತರ ಚೀಟಿ ಹೊಂದಿಲ್ಲದವರಿಗೂ ಸಿಗಲಿದೆ ಈ ಸೌಲಭ್ಯ:
ಆದರೆ ಪಡಿತರ ಚೀಟಿ (Ration Card) ಅಥವಾ ಯಾವುದೇ ಕಾರ್ಡ್ ಇಲ್ಲದವರಿಗೆ 5 ಕೆಜಿ ಗೋಧಿ, ಅಕ್ಕಿ ಮತ್ತು ಒಂದು ಕೆಜಿ ಬೇಳೆ ನೀಡಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಇದರಿಂದ 8 ಕೋಟಿ ವಲಸೆ ಕಾರ್ಮಿಕರು ಪ್ರಯೋಜನ ಪಡೆಯಲಿದ್ದಾರೆ. ಇದಕ್ಕೆ 3500 ಕೋಟಿ ರೂಪಾಯಿ ವೆಚ್ಚವಾಗಲಿದೆ. ಇದನ್ನು ರಾಜ್ಯ ಸರ್ಕಾರಗಳ ಮೂಲಕ ಪರಿಣಾಮಕಾರಿಯಾಗಿಸಲಾಗುವುದು. ರಾಜ್ಯಗಳು ಮಾತ್ರವೇ ಇಂತಹ ಕಾರ್ಮಿಕರ ಬಗ್ಗೆ ಮಾಹಿತಿಯನ್ನು ಹೊಂದಿವೆ. ಮುಂದಿನ ಎರಡು ತಿಂಗಳವರೆಗೆ ಈ ಪ್ರಕ್ರಿಯೆಯು ಮುಂದುವರಿಯುತ್ತದೆ ಎಂದು ಹಣಕಾಸು ಸಚಿವರು ವಿವರಣೆ ನೀಡಿದರು.

ಇಡೀ ದೇಶದಲ್ಲಿ ಈ ಯೋಜನೆ ಜಾರಿ:
ಒನ್ ನೇಷನ್ ಒನ್ ರೇಷನ್ ಇಡೀ ದೇಶದಲ್ಲಿ ಅನ್ವಯವಾಗಲಿದ್ದು ಯೋಜನೆಯ ದೊಡ್ಡ ಲಾಭವೆಂದರೆ ಜನರು ಈಗ ಇತರ ರಾಜ್ಯಗಳಿಂದ ಪಡಿತರವನ್ನು ಖರೀದಿಸಲು ಸಾಧ್ಯವಾಗುತ್ತದೆ. 

ಯೋಜನೆಯಿಂದ ಏನು ಪ್ರಯೋಜನ?

  • ಯೋಜನೆಯ ದೊಡ್ಡ ಲಾಭವನ್ನು ಬಡವರಿಗೆ ನೀಡಲಾಗುವುದು.
  • ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಗೊಂಡವರಿಗೆ ಲಾಭ ಸಿಗುತ್ತದೆ.
  • ನಕಲಿ ಪಡಿತರ ಚೀಟಿ ನಿಲ್ಲಿಸಲು ಸಹ ಇದು ಸಹಾಯ ಮಾಡುತ್ತದೆ.
  • ಎಲ್ಲಾ ಪಡಿತರ ಚೀಟಿಗಳನ್ನು ಆಧಾರ್ ಕಾರ್ಡ್‌ಗೆ ಸಂಪರ್ಕಿಸುವ ಮತ್ತು ಪಾಯಿಂಟ್ ಆಫ್ ಸೇಲ್, ಪಿಒಎಸ್ ಯಂತ್ರದ ಮೂಲಕ ಆಹಾರ ಧಾನ್ಯಗಳನ್ನು ವಿತರಿಸುವ ವ್ಯವಸ್ಥೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ.
  • 85 ರಷ್ಟು ಆಧಾರ್ ಕಾರ್ಡ್‌ಗಳನ್ನು ಪಾಯಿಂಟ್ ಆಫ್ ಸೇಲ್ (ಪಿಒಎಸ್) ಯಂತ್ರಗಳಿಗೆ ಸಂಪರ್ಕಿಸಲಾಗಿದೆ.
  • 22 ರಾಜ್ಯಗಳಲ್ಲಿ 100 ಪ್ರತಿಶತ ಪಿಓಎಸ್ ಯಂತ್ರಗಳನ್ನು ಸ್ಥಾಪಿಸಲಾಗಿದೆ.

ಈ ಯೋಜನೆಗೆ ಸಂಬಂಧಿಸಿದ ವಿವರ:
ಈ ಯೋಜನೆಯೊಂದಿಗೆ ಸಾರ್ವಜನಿಕರನ್ನು ಇನ್ನು ಮುಂದೆ ಯಾವುದೇ ಪಿಡಿಎಸ್ ಅಂಗಡಿಯೊಂದಿಗೆ ಸೀಮಿತವಾಗಿರಿಸುವುದಿಲ್ಲ ಮತ್ತು ಅಂಗಡಿ ಮಾಲೀಕರ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಇದರಿಂದಾಗಿ ಭ್ರಷ್ಟಾಚಾರವೂ ಕಡಿಮೆಯಾಗುತ್ತದೆ. ಈ ಯೋಜನೆಯೊಂದಿಗೆ ಸರ್ಕಾರವು ಕೇಂದ್ರ ಭಂಡಾರವನ್ನು ರಚಿಸಿ ಆಧಾರ್‌ಗೆ ಸಂಪರ್ಕಿಸುವ ಮೂಲಕ ಎಲ್ಲಾ ಪಡಿತರ ಚೀಟಿಗಳಿಗೆ ಸಂಪೂರ್ಣ ಒಯ್ಯಬಲ್ಲತೆಯನ್ನು ಒದಗಿಸುತ್ತದೆ. ಇದು ಜನರಿಗೆ ಯಾವುದೇ ರಾಜ್ಯದಲ್ಲಿದ್ದರೂ ಪಡಿತರ ಪಡೆಯುವುದನ್ನು ಸರಾಗವಾಗಿಸುತ್ತದೆ, ಏಕೆಂದರೆ ಅವರು ಯಾವುದೇ ಒಂದು ಪಡಿತರ ಅಂಗಡಿಯಿಂದ ಮಾತ್ರವೇ ಪಡಿತರ ಖರೀದಿಸಲು ಒತ್ತಾಯಿಸುವುದಿಲ್ಲ.

Trending News