ನವದೆಹಲಿ: ಭಾರತದಲ್ಲಿ ಟೆಲಿಕಾಂ ಸಂಸ್ಥೆಗಳ ಬೆಲೆ ಸಮರ ಮುಂದುವರೆದಿದೆ. ಹೆಚ್ಚು ಗ್ರಾಹಕರನ್ನು ಗಳಿಸುವ ಉದ್ದೇಶದಿಂದ ನಾಮುಂದು, ತಾಮುಂದು ಎನ್ನುತ್ತಾ ಟೆಲಿಕಾಂ ಸಂಸ್ಥೆಗಳು ಅತೀ ಕಡಿಮೆ ದರ ಪಟ್ಟಿಯನ್ನು ಗ್ರಾಹಕರಿಗೆ ಒದಗಿಸಿವೆ. ಆದರೆ ಇದು ಎಲ್ಲಿಯವರೆಗೆ ಸಾಧ್ಯ? ಈ ಬಗ್ಗೆ ದೇಶದ ಪ್ರತಿಷ್ಟಿತ ಟೆಲಿಕಾಂ ಕಂಪನಿಯಾದ ಏರ್ಟೆಲ್ ಸಿಎಂಡಿ ಸುನೀಲ್ ಭಾರತಿ ಮಿತ್ತಲ್ ವಿವರಿಸಿದ್ದಾರೆ.
ಇಡೀ ವಿಶ್ವದಲ್ಲೇ ಅತೀ ಕಡಿಮೆ ಮೊಬೈಲ್ ಟ್ಯಾರಿಫ್ ಹೊಂದಿರುವ ರಾಷ್ಟ್ರ ಎಂದರೆ ಭಾರತ ಮಾತ್ರ. ಆದರೆ, ಇನ್ಮುಂದೆ ಯಾವುದೇ ಸೇವೆ ಉಚಿತವಾಗಿ ಸಿಗುವುದಿಲ್ಲ. ಮೊಬೈಲ್ ಸಂಖ್ಯೆಯನ್ನು ಚಾಲ್ತಿಯಲ್ಲಿಡಲು ಕನಿಷ್ಠ 35 ರೂ.ಗಳ ರೀಚಾರ್ಜ್ ಅಗತ್ಯವಿದ್ದು, ಮುಂದಿನ ದಿನಗಳಲ್ಲಿ 75 ರೂ.ಗಳಿಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.
ದಾವೋಸ್'ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ ಅವರು, ಪ್ರಸ್ತುತ 41.30 ಕೋಟಿ ಗ್ರಾಹಕರನ್ನು ಏರ್ಟೆಲ್ಹೊಂ ಹೊಂದಿದೆ. 2019ರಲ್ಲಿ ಕೇವಲ ಮೂರು ಕಂಪನಿಗಳು ಭಾರತೀಯ ಟೆಲಿಕಾಂ ಬಿಜಿನೆಸ್ ಅನ್ನು ನಿಯಂತ್ರಿಸಲಿವೆ. ಆದರೆ ಈ ಯಾವುದೇ ಕಂಪನಿಯ ನೆಟ್ವರ್ಕ್ ಬಳಸಲು ನೀವು ಇನ್ಮುಂದೆ ಸ್ವಲ್ಪ ಹೆಚ್ಚು ಹಣ ವ್ಯಯಿಸಬೇಕಾಗುತ್ತದೆ. ಈ ಹಿಂದೆ ಡಾಟಾ ಬಳಸಲು ಹೆಚ್ಚು ಹಣ ಪಾವತಿಸಬೇಕಾಗುತ್ತಿತ್ತು. ಆದರೀಗ ಕೇವಲ 100ರೂ.ಗಳಿಗೆ 11 ರಿಂದ 12ಜಿಬಿ ಡಾಟಾ ದೊರೆಯುತ್ತಿದೆ. ಆದಾಗ್ಯೂ, ಬೆಲೆಗಳ ಏರಿಕೆಯ ಹೊರತಾಗಿಯೂ, ಭಾರತದಲ್ಲಿ ಡಾಟಾ ದರಗಳು ಅಗ್ಗವಾಗಲಿವೆ ಎಂದು ಅವರು ಹೇಳಿದರು.
ಏರ್ಟೆಲ್ ಅಷ್ಟೇ ಅಲ್ಲದೆ, ವೊಡಾಫೋನ್ ಮತ್ತು ಐಡಿಯಾ ಕಂಪನಿಗಳೂ ಸಹ ಕನಿಷ್ಠ ರೀಚಾರ್ಜ್ ದರವನ್ನು ನಿಗದಿ ಮಾಡುವ ಸಾಧ್ಯತೆ ಇದೆ. ಇದರಿಂದಾಗಿ ಗ್ರಾಹಕರು ಟೆಲಿಕಾಂ ನೆಟ್ವರ್ಕ್ ಬಳಸಲು ಪ್ರತಿ ತಿಂಗಳು ನಿಗದಿತ ಮೊತ್ತದ ರೀಚಾರ್ಜ್ ಮಾಡಿಸಲೇಬೇಕಾಗುವ ಅನಿವಾರ್ಯತೆ ಎದುರಾಗಲಿದೆ.