ನವದೆಹಲಿ: 17ನೇ ಲೋಕಸಭಾ ಚುನಾವಣೆಯಲ್ಲಿ ವಿಜಯ ಪತಾಕೆ ಹಾರಿಸುವ ಮೂಲಕ ಎರಡನೇ ಬಾರಿಗೆ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಯವರು ಇಂದು ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಮೋದಿಯವರೊಂದಿಗೆ 65ಕ್ಕೂ ಹೆಚ್ಚು ಮಂತ್ರಿಗಳು ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ 25 ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಯಾರ್ಯಾರು ಮಂತ್ರಿಯಾಗಲಿದ್ದಾರೆ ಎಂಬ ಕುತೂಹಲ ಸಹಜವಾಗಿಯೇ ಮೂಡಿತ್ತು.
ಇದೀಗ ಬಂದಿರುವ ಮಾಹಿತಿ ಪ್ರಕಾರ, ಮೋದಿ ಸಂಪುಟದಲ್ಲಿ ಸದಾನಂದ ಗೌಡ, ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿಗೆ ಮಂತ್ರಿ ಸ್ಥಾನ ಗಟ್ಟಿಯಾಗಿದೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಮತ್ತೊಮ್ಮೆ ಮಂತ್ರಿಯಾಗುವುದು ಫಿಕ್ಸ್ ಆಗಿದೆ.
ಲಿಂಗಾಯತರ ಕೋಟಾದಲ್ಲಿ ಬೆಳಗಾವಿ ಸಂಸದ ಸುರೇಶ್ ಅಂಗಡಿಯವರಿಗೂ ಮಂತ್ರಿ ಸ್ಥಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಂತೆಯೇ ಧಾರವಾಡ ಲೋಕಸಭಾ ಕ್ಷೇತ್ರದ ಸಂಸದ ಪ್ರಹ್ಲಾದ್ ಜೋಶಿಯವರಿಗೂ ಅಮಿತ್ ಶಾ ಕರೆ ಮಾಡಿದ್ದು, ಸಂಜೆ 5 ಗಂಟೆಗೆ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿ 7 ಗಂಟೆಗೆ ಪ್ರಮಾಣವಚನ ಸ್ವೀಕರಿಸುವಂತೆ ಸೂಚಿಸಿದ್ದಾರೆ.