ನವದೆಹಲಿ: ಉತ್ತರ ಪ್ರದೇಶದ ಬಲರಾಂಪುರದ ಪೊಲೀಸ್ ಅಧೀಕ್ಷಕ (ಎಸ್‌ಪಿ) ಡೆನ್ ರಂಜನ್ ವರ್ಮಾ ಅವರು ರಜೆ ಬೇಕಾದಲ್ಲಿ ಇಂಗ್ಲಿಷ್ ನಲ್ಲಿ ರಜೆ ಪತ್ರ ಸಲ್ಲಿಸಲು ಸೂಚಿಸಿದ್ದಾರೆ.ಇಂಗ್ಲೀಶ್ ಕಲಿಯಲು ಆಂಗ್ಲ ಪತ್ರಿಕೆಗಳನ್ನು ಓದಬೇಕೆಂದು ಆದೇಶಿಸಿದ್ದಾರೆ ಎನ್ನಲಾಗಿದೆ.
ಕಳೆದ ಒಂದು ವಾರ ಹಲವಾರು ಪೊಲೀಸ್ ಠಾಣೆಗಳು, ಜಿಲ್ಲಾ ಕೇಂದ್ರಗಳಲ್ಲಿ ತರಗತಿಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸಿದ ನಂತರ ಹಿರಿಯ ಪೊಲೀಸ್ ಅಧಿಕಾರಿ ಈ ಆದೇಶ ಹೊರಡಿಸಿದ್ದಾರೆ. ಈಗ ಈ ನಿರ್ದೇಶನಗಳನ್ನು ಅನುಸರಿಸಿ, ಜಿಲ್ಲಾ ಪೊಲೀಸ್ ಸಿಬ್ಬಂದಿ ಈಗಾಗಲೇ ಇಂಗ್ಲಿಷ್ ಕಲಿಯಲು ಪುಸ್ತಕಗಳು ಮತ್ತು ನಿಘಂಟುಗಳನ್ನು ಖರೀದಿಸಲು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ. ಆದರೆ, ಈ ಆದೇಶದ ವಿಚಾರವಾಗಿ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಹೆಚ್ಚುವರಿ ಮಹಾನಿರ್ದೇಶಕ ಕಾನೂನು ಮತ್ತು ಸುವ್ಯವಸ್ಥೆ ಪಿ.ವಿ.ರಾಮಸಾಸ್ತ್ರಿ ಅವರು ಈ ಆದೇಶಗಳ ಬಗ್ಗೆ ಯಾವುದೇ ಮಾಹಿತಿ ಹೊಂದಿಲ್ಲ ಮತ್ತು ಜಿಲ್ಲಾ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ದೇವಿಪಟಾನ್ ವಿಭಾಗದ ಡಿಐಜಿ ರಾಕೇಶ್ ಸಿಂಗ್ ಅವರು ಕೂಡ ಈ ನಿರ್ಧಾರದ ಬಗ್ಗೆ ಯಾವುದೇ ಮಾಹಿತಿ ಹೊಂದಿಲ್ಲ ಎಂದು ಹೇಳಿದರು. 'ಉನ್ನತ ಮಟ್ಟದಿಂದ ಅಂತಹ ಯಾವುದೇ ಸೂಚನೆಗಳಿಲ್ಲ. ಇಂಗ್ಲಿಷ್ ಬಳಕೆ ಮುಖ್ಯವಾಗಿದೆಯೋ ಇಲ್ಲವೋ, ಇದು ಪಾಲಸಿ ನಿರ್ಧಾರ ಮತ್ತು ಪೊಲೀಸ್ ನೇಮಕಾತಿ ಮಂಡಳಿ, ಡಿಜಿಪಿ ಮತ್ತು ಇತರರು ನಮ್ಮ ಸಿಬ್ಬಂದಿಗೆ ಯಾವ ಕೌಶಲ್ಯ ಬೇಕು ಎಂದು ನಿರ್ಣಯಿಸುತ್ತಾರೆ. ಇದರ ಬಗ್ಗೆ ನಾನು ಹೆಚ್ಚು ಏನನ್ನೂ ಹೇಳಲಾರೆ, ಎಂದು ಅವರು ಹೇಳಿದರು.
ಇನ್ನೊಂದೆಡೆ ಈ ನಿರ್ಧಾರವನ್ನು ಎಸ್ಪಿ ವರ್ಮಾ ಅವರು ಸಮರ್ಥಿಸಿಕೊಂಡು ಪ್ರತಿಕ್ರಿಯಿಸಿರುವ ಅವರು 'ಈ ಕ್ರಮದ ಹಿಂದಿನ ಕಾರಣವೆಂದರೆ ಎಲ್ಲಾ ಸೈಬರ್-ಅಪರಾಧ ಮತ್ತು ಕಣ್ಗಾವಲು ಮಾಹಿತಿಯನ್ನು ಇಂಗ್ಲಿಷ್‌ನಲ್ಲಿ ಸ್ವೀಕರಿಸಲಾಗಿದೆ ಮತ್ತು ನಮ್ಮ ಪೊಲೀಸರು ಭಾಷೆಯ ಬಗ್ಗೆ ಮೂಲಭೂತ ಜ್ಞಾನವನ್ನು ಹೊಂದಿರಬೇಕು. ಪೊಲೀಸರು ಪ್ರಮಾದಗಳನ್ನು ಮಾಡುತ್ತಿರುವುದನ್ನು ನಾನು ನೋಡಿದ್ದೇನೆ ನ್ಯಾಯಾಲಯದ ತೀರ್ಪುಗಳನ್ನು ಇಂಗ್ಲಿಷ್ನಲ್ಲಿ ಅರ್ಥಮಾಡಿಕೊಳ್ಳುವುದನ್ನು ಕಲಿಯಬೇಕು. ಈ ಹಿನ್ನಲೆಯಲ್ಲಿ ಪೊಲೀಸ್ ಸಿಬ್ಬಂದಿ ಕನಿಷ್ಠ ಇಂಗ್ಲಿಷ್ ಕಲಿಯುವುದನ್ನು ಖಚಿತಪಡಿಸಿಕೊಳ್ಳಲು ನಾನು ಈ ಕ್ರಮವನ್ನು ತೆಗೆದುಕೊಳ್ಳಲು ನಿರ್ಧರಿಸಿದೆ ಎಂದು ತಿಳಿಸಿದರು.
ಜೂನ್ 9 ರಂದು ಜಿಲ್ಲೆಗೆ ಸೇರಿದ 2011 ರ ಬ್ಯಾಚ್ ಐಪಿಎಸ್ ಅಧಿಕಾರಿ ವರ್ಮಾ, ರಜೆ ಅರ್ಜಿಗಳನ್ನು ಬರೆಯಲು ಪೊಲೀಸ್ ಕಾನ್‌ಸ್ಟೆಬಲ್‌ಗಳು ಈಗ ಗೂಗಲ್‌ನಿಂದ ಸಹಾಯ ಪಡೆಯಲು ಪ್ರಾರಂಭಿಸಿದ್ದಾರೆ ಎಂದು ಹೇಳಿದರು.'ನಾನು ಅರ್ಜಿಗಳನ್ನು ಪರಿಶೀಲಿಸುತ್ತೇನೆ ಮತ್ತು ಕಾಗುಣಿತ ತಪ್ಪುಗಳನ್ನು ಸರಿಪಡಿಸುತ್ತೇನೆ. ಅವರು ಇಂಗ್ಲಿಷ್ ಪತ್ರಿಕೆಗಳನ್ನು ಓದಬೇಕು, ನಿಘಂಟುಗಳನ್ನು ಖರೀದಿಸಬೇಕು ಮತ್ತು ಇದನ್ನು ಖಚಿತಪಡಿಸಿಕೊಳ್ಳಲು ನಾನು ವಿವಿಧ ಪೊಲೀಸ್ ಠಾಣೆಗಳಿಗೆ ಹೋಗುತ್ತೇನೆ' ಎಂದು ಅವರು ಹೇಳಿದರು.