ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಕಲ್ಲು ತೂರಾಟದಿಂದ ನಾಗರಿಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಒಂದು ವಾರದೊಳಗೆ ನಡೆದ ಎರಡನೇ ಘಟನೆ ಇದಾಗಿದೆ. ಭಾನುವಾರ ಸಂಜೆ ಜಿಲ್ಲೆಯ ಹಣ್ಣಿನ ತೋಟವೊಂದರಲ್ಲಿ ತಲೆಮರೆಸಿಕೊಂಡಿದ್ದ ಯುವಕರಿಂದ ಕಲ್ಲು ತೂರಾಟ ನಡೆಸಲಾಗಿದೆ.
ಮನೆಗೆ ತೆರಳುತ್ತಿದ್ದ ನಾಗರೀಕನ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆದಿದೆ. ಅವರನ್ನು ಚಿಕಿತ್ಸೆಗಾಗಿ ಶ್ರೀನಗರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆಗಸ್ಟ್ 25 ರಂದು ಭೀಜ್ಬೆರಾ ಪ್ರದೇಶದಲ್ಲಿ ಕಲ್ಲು ತೂರಾಟದಲ್ಲಿ ಟ್ರಕ್ ಚಾಲಕ ಸಾವನ್ನಪ್ಪಿದ್ದಾನೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರ ಪ್ರಕಾರ, ದುಷ್ಕರ್ಮಿಗಳು ಟ್ರಕ್ ಅನ್ನು ಭದ್ರತಾ ಪಡೆಗಳ ವಾಹನ ಎಂದು ಭಾವಿಸಿ ಕಲ್ಲು ತೂರಾಟ ನಡೆಸಿದ್ದರು. ಕಲ್ಲುಗಳು ಟ್ರಕ್ನ ಮುಂಭಾಗದ ಫಲಕದ ಮೂಲಕ ಬಲವಾಗಿ ಚಾಲಕನ ತಲೆಗೆ ಬಿದ್ದಿದ್ದರಿಂದ ಚಾಲಕ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯಲಾಯಿತಾದರೂ ಆತ ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ ಸಾವನ್ನಪ್ಪಿರುವ ಟ್ರಕ್ ಚಾಲಕನನ್ನು ನೂರ್ ಮೊಹಮ್ಮದ್ ದಾರ್ ಎಂದು ಗುರುತಿಸಲಾಗಿದೆ.
ಶೀಘ್ರವೇ ಕಾರ್ಯೋನ್ಮುಖರಾದ ಪೊಲೀಸರು ಕಲ್ಲು ತೂರಾಟ ನಡೆಸಿದ್ದ ವ್ಯಕ್ತಿಯನ್ನು ಗುರುತಿಸಿ ಬಂಧಿಸಿದ್ದಾರೆ. ಅಪರಾಧಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.