ಸಲಿಂಗಕಾಮ ಅಪರಾಧವಲ್ಲ: ಸೆಕ್ಷನ್ 377 ಕುರಿತು ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂ

ಸೆಕ್ಷನ್ 377 ಅಡಿಯಲ್ಲಿ ಸಲಿಂಗಕಾಮ ಅಪರಾಧವಲ್ಲ ಎಂದು 2009ರಲ್ಲಿ ದೆಹಲಿ ಹೈಕೋರ್ಟ್ ತೀರ್ಪು ನೀಡಿತ್ತು. ಆದರೆ, ಈ ತೀರ್ಪನ್ನು 2013ರಲ್ಲಿ ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಈ ತೀರ್ಪನ್ನು ಮರುಪರಿಶೀಲನೆ ಮಾಡುವಂತೆ ಕೋರಿ ವಿವಿಧ ಸಂಘಟನೆಗಳು ಮತ್ತು ವ್ಯಕ್ತಿಗಳು ಅರ್ಜಿ ಸಲ್ಲಿಸಿದ್ದರು.

Last Updated : Sep 6, 2018, 12:27 PM IST
ಸಲಿಂಗಕಾಮ ಅಪರಾಧವಲ್ಲ: ಸೆಕ್ಷನ್ 377 ಕುರಿತು ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂ title=

ನವದೆಹಲಿ: ಸಲಿಂಗಕಾಮವನ್ನು ಅಪರಾಧೀಕರಿಸುವ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್​ 377ರ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ ಕಳೆದ ಜುಲೈನಲ್ಲಿ ತೀರ್ಪು ಕಾಯ್ದಿರಿಸಿದ್ದ ಸಾಂವಿಧಾನಿಕ ಪೀಠ ಇಂದು ತನ್ನ ಐತಿಹಾಸಿಕ ತೀರ್ಪು ಪ್ರಕಟಿಸಿದ್ದು ಸಲಿಂಗಕಾಮ ಅಪರಾಧವಲ್ಲ ಎಂದು ಹೇಳಿದೆ. ಈ ಮಹತ್ವದ ತೀರ್ಪಿನ ಮೂಲಕ 156 ವರ್ಷಗಳ ಹಳೆಯ ಕಾನೂನು ಐಪಿಸಿ ಸೆಕ್ಷನ್ 377 ಅನ್ನು ರದ್ದುಗೊಳಿಸಿದಂತಾಗಿದೆ.  

ಸೆಕ್ಷನ್​ 377ರ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ಸಂಬಂಧ ಸುದೀರ್ಘ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿಗಳಾದ ದೀಪಕ್​ ಮಿಶ್ರಾ, ನ್ಯಾಯಮೂರ್ತಿಗಳಾದ ರೋಹಿಂಟನ್​ ನಾರಿಮನ್​, ಎ. ಎಂ. ಖಾನ್ವಿಲ್ಕರ್​, ಡಿ.ವೈ. ಚಂದ್ರಛೂಡ ಮತ್ತು ಇಂದು ಮೆಲ್ಹೋತ್ರಾ ಅವರನ್ನೊಳಗೊಂಡ ಸಾಂವಿಧಾನಿಕ ಪೀಠದಿಂದ ಈ ತೀರ್ಪು ಪ್ರಕಟಗೊಂಡಿದೆ.

ಸೆಕ್ಷನ್ 377 ಅಡಿಯಲ್ಲಿ ಸಲಿಂಗಕಾಮ ಅಪರಾಧವಲ್ಲ ಎಂದು 2009ರಲ್ಲಿ ದೆಹಲಿ ಹೈಕೋರ್ಟ್ ತೀರ್ಪು ನೀಡಿತ್ತು. ಆದರೆ, ಈ ತೀರ್ಪನ್ನು 2013ರಲ್ಲಿ ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಈ ತೀರ್ಪನ್ನು ಮರುಪರಿಶೀಲನೆ ಮಾಡುವಂತೆ ಕೋರಿ ವಿವಿಧ ಸಂಘಟನೆಗಳು ಮತ್ತು ವ್ಯಕ್ತಿಗಳು ಅರ್ಜಿ ಸಲ್ಲಿಸಿದ್ದರು.

ಐಪಿಸಿ ಸೆಕ್ಷನ್​ 377ರ ಬಗ್ಗೆ ಮೊದಲು ಪ್ರತಿಕ್ರಿಯೆ ನೀಡಲು ಸಮಯಾವಕಾಶ ಕೇಳಿದ್ದ ಕೇಂದ್ರ ಸರ್ಕಾರ, ಬಳಿಕ ನ್ಯಾಯಾಲಯದ ವಿವೇಚನೆಗೆ ಬಿಟ್ಟಿತ್ತು. ಆದರೆ, ಸಲಿಂಗ ವಿವಾಹ ಮತ್ತು ಕೆಲವು ಹಕ್ಕುಗಳ ವಿಚಾರದಲ್ಲಿ ಗೊಂದಲ ಉಂಟಾಗಬಹುದು ಎಂಬ ಕಳವಳವನ್ನು ಸರ್ಕಾರ ವ್ಯಕ್ತಪಡಿಸಿತ್ತು.

Trending News