ಪುಲ್ವಾಮ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ (Pulwama) ಜಿಲ್ಲೆಯ ಅವಂತಿಪೋರಾದ ದಕ್ಷಿಣ ಭಾಗದ ಕ್ರೂ ಪಾನ್‌ಪೋರ್‌ನ ಶರ್ಸಾಲಿ ಪ್ರದೇಶದಲ್ಲಿ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ಭಯೋತ್ಪಾದಕನನ್ನು ಹತ್ಯೆಗೈಯಲಾಗಿದೆ.
ಸೈನ್ಯದ 50 RR, ಸಿಆರ್ಪಿಎಫ್ನ 185 ಬಿಎನ್ ಮತ್ತು ಪೊಲೀಸರ ಜಂಟಿ ತಂಡವು ಖ್ರೂನ ಶರ್ಸಾಲಿ ಪ್ರದೇಶದಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ವರದಿಗಳು ತಿಳಿಸಿವೆ. ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯ ಸಮಯದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಭದ್ರತಾ ಪಡೆಗಳು ಶಂಕಿತ ಸ್ಥಳದ ಸುತ್ತ ಕಾರ್ಡನ್ ಅನ್ನು ಬಿಗಿಗೊಳಿಸಿ ಭಯೋತ್ಪಾದಕನನ್ನು ಕೊಂದವು. ಪ್ರದೇಶದಲ್ಲಿ ಇನ್ನೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಉನ್ನತ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ರಿಯಾಜ್ ನಾಯ್ಕು ಅವರ ಸ್ಥಳೀಯ ಗ್ರಾಮವಾದ ಅವಂತಿಪೋರಾದ ಬೀಘ್ಪೊರಾ ಪ್ರದೇಶದಲ್ಲಿ ಬೃಹತ್ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಜಮ್ಮು ಮತ್ತು ಕಾಶ್ಮೀರದ ಪಖೆರ್ಪೊರಾದಲ್ಲಿ ಮಂಗಳವಾರ (ಮೇ 5) ಸಿಆರ್ಪಿಎಫ್ನ 181 ಬೆಟಾಲಿಯನ್ ಸೈನಿಕರ ಮೇಲೆ ಅಪರಿಚಿತ ಭಯೋತ್ಪಾದಕರು ಗ್ರೆನೇಡ್ ಎಸೆದ ನಂತರ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿಗೆ ಮೊಣಕಾಲಿನ ಕೆಳಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯಲ್ಲಿ ನಾಲ್ವರು ನಾಗರಿಕರು ಗಾಯಗೊಂಡಿದ್ದಾರೆ ಎಂದು ಸಿಆರ್‌ಪಿಎಫ್ ಮೂಲಗಳು ತಿಳಿಸಿವೆ.
ದೋಡಾ ಜಿಲ್ಲೆಯ ಗುಂಡಾನಾ ತಹಸಿಲ್‌ನಲ್ಲಿ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಬಂಧಿಸಿದ ಕೆಲವೇ ಗಂಟೆಗಳ ನಂತರ ಈ ದಾಳಿ ನಡೆದಿದೆ. ಬಂದಿತ ಭಯೋತ್ಪಾದಕನನ್ನು ತನ್ವೀರ್ ಅಹ್ಮದ್ ಮಲಿಕ್ ಎಂದು ಗುರುತಿಸಲಾಗಿದೆ.