ನವದೆಹಲಿ: ಅಮರನಾಥ ತೀರ್ಥಯಾತ್ರೆಗೆ ಬಲ್ಟಾಲ್ ಮತ್ತು ಪಹಲ್ಗಮ್ ಮಾರ್ಗಗಳಲ್ಲಿ ಸುಮಾರು 60,000 ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಭದ್ರತಾ ಸಿಬ್ಬಂದಿಯ ಕಣ್ಗಾವಲಿನಲ್ಲಿ ಭಾನುವಾರದಂದು ಜಮ್ಮು ಶಿಬಿರದಲ್ಲಿ ಪೂಜೆಯ ನಂತರ ಮೊದಲ ಬ್ಯಾಚ್ ಭಕ್ತರರಿಗೆ ಯಾತ್ರೆಯ ಅನುವು ಮಾಡಿಕೊಡಲಾಗಿದೆ. ಸುಮಾರು 3,880 ಅಡಿ ಎತ್ತರದಲ್ಲಿರುವ ಈ ಪವಿತ್ರ ಗುಹೆಗೆ ಹೋಗುವ ಎರಡೂ ಮಾರ್ಗಗಳನ್ನು ತೆರವುಗೊಳಿಸಲಾಗಿದೆ ಮತ್ತು ಭದ್ರತಾ ರಕ್ಷಣೆ ನೀಡುವ ಜವಾಬ್ದಾರಿಯನ್ನು ಹೆಚ್ಚಾಗಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಜೆ & ಕೆ ಪೊಲೀಸರಿಗೆ ವಹಿಸಲಾಗಿದೆ.
ಈಗ ಯಾತ್ರೆಯ ಕುರಿತಾಗಿ ಪ್ರತಿಕ್ರಿಯಿಸಿರುವ ಸಿಆರ್‌ಪಿಎಫ್‌ನ ಐಜಿ ರವೀದೀಪ್ ಸಹೈ" ಈ ಅಮರನಾಥ ಯಾತ್ರೆ ನಮಗೆ ದೊಡ್ಡ ಕಾರ್ಯಕ್ರಮವಾಗಿದೆ. ಆದ್ದರಿಂದ ಈಗ ಪೂರ್ಣ ಪ್ರಮಾಣದ ಭದ್ರತೆಯನ್ನು ಒದಗಿಸಲಾಗಿದೆ. ಭಾರತೀಯ ಸೇನೆ, ಬಿಎಸ್ಎಫ್, ಪೊಲೀಸ್ ಮತ್ತು ಸಿಆರ್ಪಿಎಫ್ ಗೆ ಈಗ ಭದ್ರತೆ ಜವಾಬ್ದಾರಿಯನ್ನು ಒದಗಿಸಲಾಗಿದೆ. ಯಾತ್ರಾರ್ಥಿಗಳಿಗೆ ಯಾವುದೇ ತೊಂದರೆ ಎದುರಾಗದಂತೆ ನಾವು ನೋಡಿಕೊಳ್ಳುತ್ತೇವೆ ' ಎಂದು ತಿಳಿಸಿದ್ದಾರೆ. ಈ ವರ್ಷ ಹೆಚ್ಚುವರಿಯಾಗಿ 40,000 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅನುಕೂಲತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಂತ್ರಜ್ಞಾನದ ಸಹಾಯವನ್ನು ಸಹ ಪಡೆದುಕೊಳ್ಳಲಾಗಿದೆ.
"ತಂತ್ರಜ್ಞಾನವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಮತ್ತು ನಾವು ನಮ್ಮ ತಂತ್ರಜ್ಞಾನವನ್ನು ಅಪ್‌ಗ್ರೇಡ್ ಮಾಡಿದ್ದೇವೆ. ವಾಹನಗಳಿಗೆ ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್‌ಎಫ್‌ಐಡಿ) ಟ್ಯಾಗ್‌ಗಳನ್ನು ಅಳವಡಿಸಲಾಗಿದೆ. ಇದು ಯಾತ್ರಾರ್ಥಿಗಳ ನಿಖರವಾದ ಸ್ಥಾನವನ್ನು ತಿಳಿಯಲು ಸಹಾಯ ಮಾಡುತ್ತದೆ. ನಾವು ಮಾನವರಹಿತ ವೈಮಾನಿಕ ವಾಹನಗಳನ್ನು (ಯುಎವಿ) ಬಳಸಿದ್ದೇವೆ. ಹಾಗೆಯೇ ಸಿಸಿಟಿವಿಗಳು ಅವರಿಂದ ಲೈವ್ ಫೀಡ್ ಅನ್ನು ಮೇಲ್ವಿಚಾರಣೆ ಮಾಡುವ ಮೂಲಕ ಪರಿಶೀಲನೆ ನಡೆಸುತ್ತವೆ "ಎಂದು ಸಹೈ ಹೇಳಿದರು.