ನವದೆಹಲಿ: ಮುಂದಿನ ಕೆಲವೇ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.ಜಮ್ಮು ಮತ್ತು ಕಾಶ್ಮೀರದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಸುಧಾರಿಸುತ್ತಿದೆ. ನಿರ್ಬಂಧಗಳನ್ನು ಕ್ರಮೇಣ ತೆಗೆದು ಹಾಕಲಾಗುತ್ತಿದೆ ಎಂದು ಹೇಳಿದೆ.10 ದಿನಗಳಿಗಿಂತ ಹೆಚ್ಚು ಕಾಲ ಕಣಿವೆಯಲ್ಲಿನ ನಿರ್ಬಂಧಗಳನ್ನು ತಕ್ಷಣವೇ ತೆಗೆದುಹಾಕುವಂತೆ ಕೋರಿ ಸಲ್ಲಿಸಿದ ಅರ್ಜಿಯೊಂದಕ್ಕೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿಗಳಾದ ಎಸ್.ಎ.ಬಾಬ್ಡೆ ಮತ್ತು ಎಸ್.ಎ.ನಜೀರ್ ಅವರನ್ನೊಳಗೊಂಡ ನ್ಯಾಯಪೀಠ, 'ನಾವು ಸ್ವಲ್ಪ ಸಮಯವನ್ನು ನೀಡಲು ಬಯಸುತ್ತೇವೆ. ಲ್ಯಾಂಡ್ಲೈನ್ ಮತ್ತು ಬ್ರಾಡ್ಬ್ಯಾಂಡ್ ಸಂಪರ್ಕಗಳನ್ನು ಕ್ರಮೇಣ ಪುನಃ ಸ್ಥಾಪಿಸಲಾಗುತ್ತಿದೆ ಎಂದು ನಾವು ಇಂದು ಪತ್ರಿಕೆಯಲ್ಲಿ ಓದಿದ್ದೇವೆ. ಆದ್ದರಿಂದ ಇತರ ವಿಷಯಗಳ ಕುರಿತ ಅರ್ಜಿಯನ್ನು ಸ್ವೀಕರಿಸುತ್ತೇವೆ. ಜೆ & ಕೆ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಿಂದ ನಮಗೆ ಇಂದು ಕರೆ ಬಂದಿದೆ ಎಂದು ಹೇಳಿದರು.
"ಈ ವಿಷಯವನ್ನು ವಿಚಾರಣೆಗೆ ಯಾವಾಗ ಪಟ್ಟಿ ಮಾಡಬಹುದು ಎನ್ನುವುದರ ಕುರಿತು ವಿಚಾರಿಸುತ್ತೇವೆ. ಆಡಳಿತಾತ್ಮಕ ಭಾಗದಲ್ಲಿ ದಿನಾಂಕವನ್ನು ನಿಗದಿಪಡಿಸುತ್ತೇವೆ' ಎಂದು ನ್ಯಾಯಪೀಠ ಹೇಳಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಪರಿಸ್ಥಿತಿಯಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದಿದೆ ಎಂದು ಗಮನಿಸಿದರು.ಕಾಶ್ಮೀರ ಟೈಮ್ಸ್ ನ ಕಾರ್ಯನಿರ್ವಾಹಕ ಸಂಪಾದಕ ಅನುರಾಧಾ ಭಾಸಿನ್ ಪರ ಹಾಜರಾದ ವಕೀಲ ವೃಂದಾ ಗ್ರೋವರ್, ಪತ್ರಕರ್ತರು ತಮ್ಮ ಕೆಲಸಗಳನ್ನು ನಿರ್ವಹಿಸಲು ಸಂವಹನ ಕ್ರಮವನ್ನು ಶೀಘ್ರವಾಗಿ ಮರುಸ್ಥಾಪಿಸುವ ಅವಶ್ಯಕತೆಯಿದೆ ಎಂದು ಹೇಳಿದರು.