ನವದೆಹಲಿ: 1992 ರ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಧೀಶರಿಗೆ 9 ತಿಂಗಳೊಳಗಾಗಿ ತೀರ್ಪು ನೀಡುವಂತೆ ಸುಪ್ರೀಂಕೋರ್ಟ್ ಶುಕ್ರವಾರದಂದು ಆದೇಶಿಸಿದೆ.ಈ ಪ್ರಕರಣದಲ್ಲಿ ಬಿಜೆಪಿ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ, ಎಂ ಎಂ ಜೋಶಿ ಮತ್ತು ಉಮಾ ಭಾರತಿಯಂತಹ ಘಟಾನುಘಟಿಗಳು ಭಾಗಿಯಾಗಿದ್ದಾರೆ.
ಈ ಪ್ರಕರಣದ ಸಾಕ್ಷ್ಯಗಳ ದಾಖಲೆಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ನ್ಯಾಯಮೂರ್ತಿ ಆರ್ ಎಫ್ ನಾರಿಮನ್ ಮತ್ತು ಸೂರ್ಯ ಕಾಂತ್ ಅವರ ನ್ಯಾಯಪೀಠ ಸೂಚಿಸಿದೆ. ಸೆಪ್ಟೆಂಬರ್ 30 ರಂದು ನಿವೃತ್ತಿ ಹೊಂದಲಿರುವ ವಿಶೇಷ ನ್ಯಾಯಾಧೀಶರ ಅಧಿಕಾರಾವಧಿಯನ್ನು ವಿಸ್ತರಿಸಲು ನಾಲ್ಕು ವಾರಗಳಲ್ಲಿ ಸೂಕ್ತ ಆದೇಶಗಳನ್ನು ಜಾರಿಗೊಳಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶನ ನೀಡಿದೆ.
ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸುವ ಮತ್ತು ತೀರ್ಪು ನೀಡುವ ಉದ್ದೇಶದಿಂದ ಮಾತ್ರ ವಿಶೇಷ ನ್ಯಾಯಾಧೀಶರ ಅಧಿಕಾರಾವಧಿಯನ್ನು ವಿಸ್ತರಿಸಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.ಈ ವಿಸ್ತೃತ ಅವಧಿಯಲ್ಲಿ ಅವರು ಅಲಹಾಬಾದ್ ಹೈಕೋರ್ಟ್ನ ಆಡಳಿತ ನಿಯಂತ್ರಣದಲ್ಲಿ ಉಳಿಯುತ್ತಾರೆ ಎಂದು ಅದು ಹೇಳಿದೆ. ಸೋಮವಾರದಂದು ವಿಶೇಷ ನ್ಯಾಯಾಧೀಶರು ಈ ಪ್ರಕರಣದ ಇತ್ಯರ್ಥಕ್ಕೆ ಆರು ತಿಂಗಳ ಕಾಲಾವಕಾಶವನ್ನು ಕೇಳಿದ್ದಾರೆ.
ವಿಶ್ವ ಹಿಂದೂ ಪರಿಷತ್ ನಾಯಕ ಅಶೋಕ್ ಸಿಂಘಾಲ್ ಮತ್ತು ವಿಷ್ಣು ಹರಿ ದಾಲ್ಮಿಯಾ ವಿಚಾರಣೆಯ ಸಮಯದಲ್ಲಿ ಸಾವನ್ನಪ್ಪಿದರು. ಹೀಗಾಗಿ ಅವರ ವಿರುದ್ಧದ ವಿಚಾರಣೆಯನ್ನು ರದ್ದುಪಡಿಸಲಾಗಿದೆ.