ನೋಯ್ಡಾ: ಕಳೆದ ಎಂಟು ವರ್ಷಗಳಿಂದ ಉತ್ತರಪ್ರದೇಶದ ನೋಯ್ಡಾದಲ್ಲಿ ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳೆಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದ ಇಬ್ಬರನ್ನು ಪೊಲೀಸರು ಗುರುವಾರ ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಅಲ್ಲದೆ, ಆರೋಪಿಗಳ ಬಳಿ ಇದ್ದ ಖಾಕಿ ಸಮವಸ್ತ್ರ, ನಕಲಿ ಗುರುತಿನ ಚೀಟಿ ಮತ್ತು ಐಪಿಎಸ್ ಮತ್ತು ಐಎಎಸ್ ಬ್ಯಾಡ್ಜ್ಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಿಜೆಪಿಯ ಹಿರಿಯ ಮುಖಂಡರೊಬ್ಬರ ಹೆಸರಿನಲ್ಲಿ ಕರೆ ಮಾಡಿ ತಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿ ಇತ್ತೀಚೆಗೆ ವ್ಯಕ್ತಿಯೊಬ್ಬರು ನೋಯ್ಡಾ ಸೆಕ್ಟರ್ 20ರ ಪೊಲೀಸರಿಗೆ ದೂರು ನೀಡಿದ ಬಳಿಕ ಈ ನಕಲಿ ಐಎಎಸ್, ಐಪಿಎಸ್ ಅಧಿಕಾರಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ. ಬಳಿಕ ಪೊಲೀಸರು ಸೆಕ್ಟರ್ 18 ಮೆಟ್ರೋ ನಿಲ್ದಾಣದ ಬಳಿ ಈ ಇಬ್ಬರನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಗೌರವ್ ಮಿಶ್ರಾ ಮತ್ತು ಅಶುತೋಷ್ ರತಿ ಎಂದು ಗುರುತಿಸಲಾಗಿದೆ. ಇವರು ಪೊಲೀಸ್ ಸಿಬ್ಬಂದಿಗೆ ವರ್ಗಾವಣೆ ಮಾಡುವುದಾಗಿ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುತ್ತಿದ್ದರು ಎಂದು ನೋಯ್ಡಾ ಎಸ್ಎಸ್ಪಿ ವೈಭವ್ ಕ್ರಿಶಾ ಹೇಳಿದ್ದಾರೆ.
ಆರೋಪಿ ಗೌರವ್ ಬಿ.ಟೆಕ್ ಪೂರ್ಣಗೊಳಿಸಿದರೆ, ಅಶುತೋಷ್ ಬಿಕಾಂ ಪದವಿ ಪಡೆದಿದ್ದಾರೆ. ಗೌರವ್ ಅವರ ತಂದೆ ಪ್ರಯಾಗರಾಜ್ನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ಕ್ರಿಶಾ ತಿಳಿಸಿದ್ದಾರೆ.