ನವದೆಹಲಿ: ಅತ್ಯಾಚಾರ ಆರೋಪ ಹೊಂದಿರುವ ಮಗನನ್ನು ರಕ್ಷಿಸುವುದಿಲ್ಲ ಎಂದು ಕೇರಳ ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಹೇಳಿದ್ದಾರೆ. ಹಿರಿಯ ಮಗನಾದ ಬಿನೊಯ್ ಕೊಡಿಯೇರಿ ವಿರುದ್ಧ 33 ವರ್ಷದ ಮಹಿಳೆ ದೂರು ದಾಖಲಿಸಿರುವ ವಿಚಾರವನ್ನು ಅವರು ನಿರಾಕರಿಸಿದ್ದಾರೆ.
ಈಗ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿರುವ ವಿಚಾರವಾಗಿ ತಿರುವಂತಪುರಂ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು "ನನ್ನ ಪಕ್ಷ (ಸಿಪಿಐ-ಎಂ) ಅಥವಾ ನಾನು ಬಿನೊಯ್ ಕೊಡಿಯೇರಿಯನ್ನು ರಕ್ಷಿಸುವುದಿಲ್ಲ. ಅವನು ವಯಸ್ಕ. ಅವನು ಸ್ವತಂತ್ರವಾಗಿ ಬದುಕುತ್ತಾನೆ ಮತ್ತು ತಾನು ಮಾಡಿರುವ ಕಾರ್ಯಗಳಿಗೆ ಜವಾಬ್ದಾರನಾಗಿರುತ್ತಾನೆ" ಎಂದು ಈ ವಿಷಯದ ಬಗ್ಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದರು.
ಇನ್ನು ಮುಂದುವರೆದು ಮಗನು ಎಲ್ಲಿದ್ದಾನೆಂದು ಇನ್ನು ತಿಳಿದಿಲ್ಲ, ಈ ಬಗ್ಗೆ ಪತ್ರಕರ್ತರು ಪ್ರಶ್ನೆಗಳನ್ನು ಮುಂದುವರೆಸಿದಾಗ ತಾವು ಮುಂಬೈ ಪೋಲಿಸ್ ಅಧಿಕಾರಿಯಲ್ಲ ಎಂದು ತಿರುಗೇಟು ನೀಡಿದರು.ಕೆಲವು ದಿನಗಳ ಹಿಂದೆ ಅತ್ಯಾಚಾರ ವಿಚಾರವಾಗಿ ವಿವಾದ ಭುಗಿಲೆದ್ದ ನಂತರ ಇದೇ ಮೊದಲ ಬಾರಿಗೆ ಮಾಧ್ಯಮಗಳಿಗೆ ಕೊಡಿಯೇರಿ ಬಾಲಕೃಷ್ಣನ್ ಪ್ರತಿಕ್ರಿಯೆ ನೀಡಿದ್ದಾರೆ.
ಮುಂಬೈನ ಮಾಜಿ ಬಾರ್ ನರ್ತಕಿ ಮದುವೆಯಾಗುವುದಾಗಿ ಭರವಸೆ ನೀಡಿದ್ದ ಬಿನೊಯ್ ಕೊಡಿಯೇರಿ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಅಲ್ಲದೆ ಇಬ್ಬರಿಗೆ 8 ವರ್ಷದ ಮಗನಿದ್ದಾನೆ ಎಂದು ಅವಳು ಹೇಳಿಕೊಂಡಿದ್ದಾಳೆ.
ಈ ಪ್ರಕರಣದ ವಿಚಾರವಾಗಿ ಗುರುವಾರದಂದು ಪೊಲೀಸರು ಬಿನೊಯ್ ಕೊಡಿಯೇರಿಗೆ ನೋಟಿಸ್ ಕಳುಹಿಸಿ ತನಿಖಾ ಅಧಿಕಾರಿಗಳ ಮುಂದೆ 72 ಗಂಟೆಗಳ ಒಳಗೆ ಹಾಜರಾಗುವಂತೆ ಹೇಳಿದ್ದಾರೆ.ಸ್ಥಳೀಯ ಪೊಲೀಸರೊಂದಿಗೆ ಇಬ್ಬರು ಮುಂಬೈ ಪೊಲೀಸ್ ಸಿಬ್ಬಂದಿ ಕೇರಳದ ಕಣ್ಣೂರಿನಲ್ಲಿರುವ ಅವರ ಪೂರ್ವಜರ ಮನೆಗೆ ಭೇಟಿ ನೀಡಿ ನೋಟಿಸ್ ಅನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಿದರು.