ನವದೆಹಲಿ: ದೇಶದಲ್ಲಿ 'ಪಟಾಕಿ' ಮಾರಾಟವನ್ನು ನಿಷೇಧಿಸಬೇಕೇ ಅಥವಾ ಬೇಡವೇ ಎಂಬುದನ್ನು ಸುಪ್ರೀಂಕೋರ್ಟ್ ಇಂದು ನಿರ್ಧರಿಸಲಿದೆ. ಪಟಾಕಿ ಮಾರಾಟ ನಿಷೇಧಿಸುವಂತೆ ಕೋರಿ ಸುಪ್ರೀಂಕೋರ್ಟ್ ನಲ್ಲಿ ಹಲವಾರು ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಲಾಗಿದೆ.
ಪಟಾಕಿಗಳ ಮೇಲೆ ನಿಷೇಧ ಹೇರುವ ಸಂದರ್ಭದಲ್ಲಿ ದೇಶದಲ್ಲಿ ಜೀವಿಸುವ ಮೂಲಭೂತ ಹಕ್ಕು ಮತ್ತು 1.3 ಶತಕೋಟಿ ಜನರ ಆರೋಗ್ಯದ ಹಕ್ಕನ್ನು ಒಳಗೊಂಡಂತೆ ಎಲ್ಲಾ ಅಂಶಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗಿದೆ ಎಂದು ಸುಪ್ರೀಂಕೋರ್ಟ್ ಆಗಸ್ಟ್ನಲ್ಲಿ ಹೇಳಿದೆ.
ಸಂವಿಧಾನದ ಪರಿಚ್ಛೇದ 21 (ಜೀವಿಸುವ ಹಕ್ಕನ್ನು) ಜನರ ಎರಡೂ ಭಾಗಗಳಿಗೆ ಅನ್ವಯಿಸುತ್ತದೆ ಎಂದು ನ್ಯಾಯಾಲಯವು ಹೇಳಿದೆ ಮತ್ತು ದೇಶಾದ್ಯಂತ 'ಪಟಾಕಿ' ನಿಷೇಧವನ್ನು ಪರಿಗಣಿಸುವಾಗ ಸಮತೋಲನವನ್ನು ಕಾಪಾಡಿಕೊಳ್ಳಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಮಾಲಿನ್ಯವನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ವಿವರಣೆ ನೀಡಿ ಆಫಿಡೆವಿಟ್ ಸಲ್ಲಿಸುವಂತೆ ನ್ಯಾಯಾಲಯ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಪಟಾಕಿ ಸಿಡಿಸುವುದರಿಂದ ಸಾರ್ವಜನಿಕರ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ? ಇದರಲ್ಲಿ ಆರ್ಥಿಕ ಅಂಶಗಳನ್ನೂ ಸೇರಿಸಿ ಎಂದು ಕೋರ್ಟ್ ಸೂಚಿಸಿತ್ತು.
ತಮಿಳುನಾಡಿನಲ್ಲಿ ಸುಮಾರು 5,000 ಕುಟುಂಬಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಒಳಗೊಂಡಿರುವ 1,750 ಪಟಾಕಿ ತಯಾರಿಕಾ ಕಂಪನಿಗಳು ಇವೆ ಎಂದು ಸರ್ಕಾರದ ಪ್ರಮಾಣ ಪತ್ರ ತಿಳಿಸಿದೆ. 6,000 ಕೋಟಿ ರೂ.ಮೌಲ್ಯದ ಪಟಾಕಿ ಕೈಗಾರಿಕೆಗಳು ಇವೆ ಎಂದು ಆಫಿಡೆವಿಟ್ ನಲ್ಲಿ ತಿಳಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಪೀಠವು ಮೂಲಭೂತ ಹಕ್ಕುಗಳ ಆರ್ಥಿಕ ಅಂಶದ ಪ್ರಸ್ತುತತೆ ಏನು ಎಂಬುದನ್ನು ನಾವು ನೋಡಬೇಕು ಎಂದು ಹೇಳಿದೆ.
ಗಾಳಿಯಲ್ಲಿ PM 2.5 ಮಟ್ಟವು ಒಂದು ಗಂಭೀರ ಸಮಸ್ಯೆಯಾಗಿದ್ದು, ಜನರ ಶ್ವಾಸಕೋಶದಲ್ಲಿ ಕಣಗಳು ಉಳಿದುಕೊಂಡು ಆರೋಗ್ಯದ ಮೇಲೆ ತೀವ್ರತರವಾದ ಪರಿಣಾಮಗಳನ್ನು ಉಂಟುಮಾಡುತ್ತವೆ ಎಂದು ನ್ಯಾಯಾಲಯ ಹೇಳಿದೆ.
ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಬದಲು ಕಟ್ಟುನಿಟ್ಟಾಗಿ ನಿಯಂತ್ರಿಸುವಂತೆ ಪಟಾಕಿ ತಯಾರಕರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ವಾಯು ಮಾಲಿನ್ಯ ಹೆಚ್ಚಳಕ್ಕೆ ಪಟಾಕಿಗಳು ಕಾರಣವಲ್ಲ ಎಂದು ಅವರು ವಾದಿಸಿದ್ದಾರೆ. ಗಾಳಿ ಮತ್ತು ಉಷ್ಣತೆಯಂತಹ ಇತರ ಅಂಶಗಳು ಇದಕ್ಕೆ ಕಾರಣವಾಗಿವೆ. ಪಟಾಕಿ ತಯಾರಕರು ಸತ್ಯದಿಂದ ಬೆಂಬಲಿಸದ ಹೇಳಿಕೆಗಳ ಆಧಾರದ ಮೇಲೆ ವ್ಯಾಪಾರ ಮಾಡುವ ಹಕ್ಕನ್ನು ಕಳೆದುಕೊಳ್ಳಬಹುದು ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್ 9 ರಂದು ಸರ್ವೋಚ್ಚ ನ್ಯಾಯಾಲಯ ತಾತ್ಕಾಲಿಕವಾಗಿ ದೀಪಾವಳಿಗೆ ಮುಂಚಿತವಾಗಿ ಪಟಾಕಿ ಮಾರಾಟವನ್ನು ನಿಷೇಧಿಸಿತು. ನಂತರ, ಅಕ್ಟೋಬರ್ 19, 2017 ರಂದು ದೀಪಾವಳಿಗೆ ಮುಂಚಿತವಾಗಿ ಕನಿಷ್ಟ ಒಂದು ದಿನ ಅಥವಾ ಎರಡು ದಿನಗಳವರೆಗೆ ಪಟಾಕಿ ಮಾರಲು ಅನುಮತಿ ಪಡೆದ ವ್ಯಾಪಾರಿಗಳ ಮನವಿಗೆ ಸ್ಪಂಧಿಸಿತ್ತು.
ಆ ಪ್ರದೇಶದ ಮಾಲಿನ್ಯದ ಮಟ್ಟಗಳ ಮೇಲೆ ಅದರ ಪರಿಣಾಮವನ್ನು ಪರೀಕ್ಷಿಸಲು ಆ ವರ್ಷ ದೀಪಾವಳಿಯ ಸಮಯದಲ್ಲಿ ನಿಷೇಧ ಹೇರಿತ್ತು ಎಂದು ಸುಪ್ರೀಂ ಕೋರ್ಟ್ ತಿಳಿಸಿತ್ತು.