ಭಾರತೀಯ ಸೇನೆಯಲ್ಲಿ ಮಹಿಳೆಯರಿಗೂ ಸಿಗುತ್ತಿದೆ ನಾಯಕತ್ವದ ಪಾತ್ರಗಳು

2019ರಲ್ಲಿ, ಭಾರತೀಯ ಸೇನೆ ಶಾರ್ಟ್ ಸರ್ವಿಸ್ ಕಮಿಷನ್ (ಎಸ್ಎಸ್‌ಸಿ) ಮಹಿಳಾ ಅಧಿಕಾರಿಗಳನ್ನು ಶಾಶ್ವತ ನೇಮಕ ಮಾಡಿಕೊಳ್ಳುವಂತೆ ತನ್ನ ನಿಯಮವನ್ನು ಬದಲಾಯಿಸಿತು. ಇಲ್ಲವಾದರೆ ಈ ಅಧಿಕಾರಿಗಳು 14 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿ ಹೊಂದುತ್ತಿದ್ದರು

Written by - Girish Linganna | Edited by - Bhavishya Shetty | Last Updated : Mar 7, 2023, 07:23 PM IST
    • ಭಾರತೀಯ ಸೇನೆ 108 ಮಹಿಳಾ ಅಧಿಕಾರಿಗಳು ನಾಯಕತ್ವ ವಹಿಸಲು ಸಮರ್ಥರು ಎಂದು ಘೋಷಿಸಿದೆ
    • ಭಾರತೀಯ ಸೇನೆಯಲ್ಲಿ ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯನ್ನು ಹೆಚ್ಚಿಸುವಂತೆ ಮಾಡಲಿದೆ
    • ಕರ್ನಲ್ ಹುದ್ದೆ ಒಂದು ವಿಶಿಷ್ಟ ನೇಮಕಾತಿಯ ಹುದ್ದೆಯಾಗಿದೆ
ಭಾರತೀಯ ಸೇನೆಯಲ್ಲಿ ಮಹಿಳೆಯರಿಗೂ ಸಿಗುತ್ತಿದೆ ನಾಯಕತ್ವದ ಪಾತ್ರಗಳು title=
Indian Army

ಇದೇ ಮೊದಲ ಬಾರಿಗೆ, ಇತ್ತೀಚೆಗೆ ನಡೆದ ಬೆಳವಣಿಗೆಯೊಂದರಲ್ಲಿ ಭಾರತೀಯ ಸೇನೆ 108 ಮಹಿಳಾ ಅಧಿಕಾರಿಗಳು ಅವರ ಯುನಿಟ್ ಮತ್ತು ಪಡೆಗಳ ನಾಯಕತ್ವ ವಹಿಸಲು ಸಮರ್ಥರು ಎಂದು ಘೋಷಿಸಿದೆ. ಇದು ಲಿಂಗ ಸಮಾನತೆಯ ನಿಟ್ಟಿನಲ್ಲಿ ಒಂದು ಮಹತ್ತರ ಹೆಜ್ಜೆಯಾಗಿದೆ. ಈ ನಿರ್ಧಾರ ಇನ್ನೂ ಹೆಚ್ಚಿನ ಮಹಿಳೆಯರು ಭಾರತೀಯ ಸೇನೆಗೆ ಸೇರ್ಪಡೆಯಾಗುವಂತೆ ಮಾಡಿ, ಆ ಮೂಲಕ ಭಾರತೀಯ ಸೇನೆಯಲ್ಲಿ ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯನ್ನು ಹೆಚ್ಚಿಸುವಂತೆ ಮಾಡಲಿದೆ.

ಇದನ್ನೂ ಓದಿ: ಬಲ ಪಂಥೀಯ ಸರ್ಕಾರ ಬರಬಾರದು,ಕಾಫೀರರನ್ನು ಕೊಲ್ಲಬೇಕು: ಬಯಲಾಯ್ತು ಪ್ರವೀಣ್ ನೆಟ್ಟಾರೂ ಹಂತಕರ ಪ್ಲ್ಯಾನ್

2020ರಲ್ಲಿ ಸುಪ್ರೀಂ ಕೋರ್ಟ್ ಏನು ಆದೇಶಿಸಿತು?

2019ರಲ್ಲಿ, ಭಾರತೀಯ ಸೇನೆ ಶಾರ್ಟ್ ಸರ್ವಿಸ್ ಕಮಿಷನ್ (ಎಸ್ಎಸ್‌ಸಿ) ಮಹಿಳಾ ಅಧಿಕಾರಿಗಳನ್ನು ಶಾಶ್ವತ ನೇಮಕ ಮಾಡಿಕೊಳ್ಳುವಂತೆ ತನ್ನ ನಿಯಮವನ್ನು ಬದಲಾಯಿಸಿತು. ಇಲ್ಲವಾದರೆ ಈ ಅಧಿಕಾರಿಗಳು 14 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿ ಹೊಂದುತ್ತಿದ್ದರು.

ಆದರೆ, ಈ ಆದೇಶ ಹಿನ್ನೋಟವನ್ನು ಹೊಂದಿರದೆ, 2020ರ ಬಳಿಕ ಸೇನೆಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸುತ್ತಿದ್ದ ಮಹಿಳಾ ಅಧಿಕಾರಿಗಳನ್ನು ಮಾತ್ರವೇ ಒಳಗೊಂಡಿತ್ತು.

ಆದರೆ, 2020ರಲ್ಲಿ ಈ ಕುರಿತಾಗಿ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪು ಹಿನ್ನೋಟವನ್ನೂ ಹೊಂದಿದ್ದು, ಮೊದಲು ವೃತ್ತಿಗೆ ಸೇರ್ಪಡೆಯಾದ ಮಹಿಳಾ ಅಧಿಕಾರಿಗಳಿಗೂ ಶಾಶ್ವತ ಸೇರ್ಪಡೆ ಒದಗಿಸುವಂತೆ ಮಾಡಿತು. ಇದು ಭಾರತೀಯ ಸೇನೆಯಲ್ಲಿ ಮಹಿಳೆಯರಿಗೆ ಇನ್ನಷ್ಟು ಬೆಳವಣಿಗೆ ಮತ್ತು ಬಡ್ತಿಗೆ ಅನುವು ಮಾಡಿಕೊಟ್ಟಿತು. ಇದರ ಪರಿಣಾಮವಾಗಿ ಭಾರತೀಯ ಸೇನೆ ಮಹಿಳೆಯರಿಗೆ ನಾಯಕತ್ವ ಮತ್ತು ಹೆಚ್ಚಿನ ನಿರ್ವಹಣಾ ತರಬೇತಿಗಳನ್ನು ಒದಗಿಸತೊಡಗಿತು.

ಮಹಿಳಾ ಕರ್ನಲ್ ಬಡ್ತಿ ಯಾಕೆ ಇಷ್ಟು ತಡವಾಗಿ ಬಂತು?

ಭಾರತೀಯ ಸೇನೆಯ ಯಾವುದೇ ಅಧಿಕಾರಿ ಕರ್ನಲ್ ಹಂತಕ್ಕೆ ಬಡ್ತಿ ಪಡೆಯಬೇಕಾದರೆ ಅವರು 16-18 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿರಬೇಕು. ಅದರೊಡನೆ, ಅವರ ವಾರ್ಷಿಕ ಗುಪ್ತ ವರದಿಗಳು ಮತ್ತು ಇತರ ತರಬೇತಿಗಳೂ ಪ್ರಮುಖವಾಗುತ್ತವೆ.

ಭಾರತೀಯ ಸೇನೆಗೆ ಸೇರ್ಪಡೆಯಾದ ಮಹಿಳಾ ಅಧಿಕಾರಿಗಳು 1992ರಲ್ಲಿ ಎಸ್ಎಸ್‌ಸಿ ಅಧಿಕಾರಿಗಳೆಂದು ಸೇರ್ಪಡೆಗೊಂಡಿದ್ದರು. ಮುಂದಿನ ವರ್ಷಗಳಲ್ಲಿ ಅವರ ಮುಂದೆ ಶಾಶ್ವತ ನೇಮಕಾತಿಯ ಆಯ್ಕೆ ಇರಲಿಲ್ಲ.

ಆದರೆ ಜೆಎಜಿ ಮತ್ತು ಆರ್ಮಿ ಎಜುಕೇಶನ್ ಕಾರ್ಪ್ಸ್ ಇದಕ್ಕೆ ಹೊರತಾಗಿದ್ದು, ಮಹಿಳೆಯರಿಗೆ 2008ರಿಂದ ಶಾಶ್ವತ ನೇಮಕಾತಿ ಅವಕಾಶ ನೀಡಲಾಯಿತು.

ಆದರೆ ಬೇರೆ ಪಡೆಗಳಲ್ಲಿ ಮಹಿಳೆಯರಿಗೆ ಶಾಶ್ವತ ಹುದ್ದೆಯ ನೇಮಕಾತಿ ಅವಕಾಶವಿಲ್ಲದೆ, ಕೊಲೊನೆಲ್ ಹುದ್ದೆಗೆ ಬಡ್ತಿ ಪಡೆಯಲು ಬೇಕಾದ ಸೇವಾವಧಿ ಪೂರೈಸುವ ಮೊದಲೇ ನಿವೃತ್ತಿ ಹೊಂದಬೇಕಾಗುತ್ತಿತ್ತು.

ಯುನಿಟ್ ಕಮಾಂಡಿಂಗ್ ಎಂದರೇನು?

ಒಂದು ಬಾರಿ ಕರ್ನಲ್ ಹುದ್ದೆಗೆ ಬಡ್ತಿ ಪಡೆದರೆ, ಅಧಿಕಾರಿ ಸೇನಾಪಡೆಯ ನಾಯಕತ್ವ ವಹಿಸಲು ಅರ್ಹರಾಗುತ್ತಾರೆ.

ಕರ್ನಲ್ ಹುದ್ದೆ ಒಂದು ವಿಶಿಷ್ಟ ನೇಮಕಾತಿಯ ಹುದ್ದೆಯಾಗಿದೆ. ಏಕೆಂದರೆ, ಈ ಹುದ್ದೆ ಮಿಲಿಟರಿಯೊಳಗೆ ಒಂದು ಉನ್ನತ ರಾಂಕ್ ಆಗಿದ್ದು, ಅಧಿಕಾರಿಗಳಿಗೆ ಸೈನಿಕರೊಡನೆ ನೇರವಾಗಿ ಸಂವಹನ ನಡೆಸುವ ಅವಕಾಶ ಒದಗಿಸುತ್ತದೆ. ಸೈನಿಕರೊಂದಿಗೆ ನಡೆಸುವ ಸಂವಹನ ಕೊಲೊನೆಲ್‌ಗೆ ನಾಯಕತ್ವ ಮತ್ತು ನಿರ್ಧಾರ ತೆಗೆದುಕೊಳ್ಳುವ ವಿಚಾರದಲ್ಲಿ ಹೆಚ್ಚಿನ ಮೇಲುಗೈ ಒದಗಿಸುತ್ತದೆ. ಈ ವಿಶಿಷ್ಟ ಅವಕಾಶ ಉನ್ನತ ರಾಂಕ್ ಆಗಿರುವ ಬ್ರಿಗೇಡಿಯರ್ ಅಥವಾ ಮೇಜರ್ ಜನರಲ್ ಹುದ್ದೆಗೆ ಲಭ್ಯವಾಗುವುದಿಲ್ಲ.

ಮಹಿಳೆಯರಿಗೆ ಕಾರ್ಯಾಚರಿಸಲು ಅವಕಾಶವಿಲ್ಲದ ಸೇನಾ ಪಾತ್ರಗಳಾವುವು?

ಮಹಿಳೆಯರಿಗೆ ಇಂದಿಗೂ ಕಾಲಾಳು ಪಡೆ, ಯಾಂತ್ರೀಕೃತ ಕಾಲಾಳು ಪಡೆಗಳಂತಹ ನೇರ ಯುದ್ಧ ನಡೆಸುವ ಪಾತ್ರಗಳನ್ನು ನಿರ್ವಹಿಸಲು ಅವಕಾಶವಿಲ್ಲ. ಏಕೆಂದರೆ, ಭಾರತೀಯ ಸೇನೆ ಮಹಿಳೆಯರು ಸೈನಿಕರಾಗಿ ಗಡಿಯಲ್ಲಿ ಯುದ್ಧ ನಡೆಸುವುದನ್ನು ಒಪ್ಪಿಕೊಂಡಿಲ್ಲ.

ಇದಕ್ಕೆ ಪ್ರಮುಖ ಕಾರಣ, ಈ ಹಿಂದೆ ಪುರುಷ ಅಧಿಕಾರಿಗಳು ಯುದ್ಧ ಖೈದಿಗಳಾಗಿ, ಶತ್ರು ಸೈನಿಕರಿಂದ ಹಿಂಸೆ ಅನುಭವಿಸಿರುವ ಉದಾಹರಣೆಗಳು ಸೇನೆಯ ಕಣ್ಣ ಮುಂದಿರುವುದಾಗಿದೆ.

ಆದರೆ ಭಾರತೀಯ ಸೇನೆ ಇತ್ತೀಚೆಗೆ ಯುದ್ಧ ಸಹಾಯ ಒದಗಿಸುವ ಕಾರ್ಪ್ಸ್ ಆಫ್ ಆರ್ಟಿಲರಿಯನ್ನು ಮಹಿಳೆಯರಿಗಾಗಿ ತೆರೆಯುವ ನಿರ್ಧಾರ ಕೈಗೊಂಡಿದೆ.

ಭಾರತೀಯ ನೌಕಾಪಡೆ ಮತ್ತು ವಾಯುಪಡೆಯ ಪರಿಸ್ಥಿತಿ ಏನು?

ಮಹಿಳೆಯರನ್ನು ಭಾರತೀಯ ನೌಕಾಪಡೆಯ ಎಲ್ಲ ವಿಭಾಗಗಳಿಗೂ ಸೇರ್ಪಡೆಗೊಳಿಸಲಾಗಿದ್ದು, ಭವಿಷ್ಯದಲ್ಲಿ ಅವರಿಗೆ ಶಾಶ್ವತ ನೇಮಕಾತಿ ನೀಡಲಾಗುತ್ತದೆ.

ಮಹಿಳಾ ಅಧಿಕಾರಿಗಳು ತೀರ ಆಧಾರಿತ ಯುನಿಟ್‌ಗಳ ನಾಯಕತ್ವ ವಹಿಸಬಹುದಾಗಿದ್ದು, ಅವರು ನೌಕಾಪಡೆಗೆ ನೇಮಕಗೊಂಡು, ಸೇವೆ ಸಲ್ಲಿಸಿ, ಶಾಶ್ವತ ನೇಮಕಾತಿಗೆ ಅರ್ಹತೆ ಪಡೆಯುತ್ತಾರೆ. ಬಳಿಕ ಅವರು ಹಡಗುಗಳು ಮತ್ತು ಏರ್ ಸ್ಕ್ವಾಡ್ರನ್‌ಗಳ ನೇತೃತ್ವ ವಹಿಸಲು ಅರ್ಹರಾಗುತ್ತಾರೆ.

ಭಾರತೀಯ ವಾಯುಪಡೆಯೂ ತನ್ನ ಎಲ್ಲ ವಿಭಾಗಗಳಲ್ಲಿ ಮಹಿಳಾ ಅಧಿಕಾರಿಗಳಿಗೆ ಅವಕಾಶ ಕಲ್ಪಿಸಿದೆ. ಅದರಲ್ಲಿ ಯುದ್ಧ ವಿಭಾಗ ಮತ್ತು ಇತರ ಆಯುಧ ವಿಭಾಗಗಳೂ ಸೇರಿವೆ.

ಮಹಿಳೆಯರಿಗೆ ಅರ್ಹತೆ ಮತ್ತು ಹುದ್ದೆಗಳ ಲಭ್ಯತೆಯ ಆಧಾರದಲ್ಲಿ ಶಾಶ್ವತ ನೇಮಕಾತಿ ಕಲ್ಪಿಸಲಾಗುತ್ತಿದ್ದು, ಅವರು ಭವಿಷ್ಯದಲ್ಲಿ ಪಡೆಗಳ ನಾಯಕತ್ವ ವಹಿಸಲು ಅರ್ಹತೆ ಹೊಂದುತ್ತಾರೆ.

ಯಾವ ದೇಶಗಳ ಸೇನೆಗಳು ಮಹಿಳೆಯರಿಗೆ ನಾಯಕತ್ವದ ಹುದ್ದೆ ನೀಡುತ್ತವೆ?

ಅಮೆರಿಕಾ, ಯುನೈಟೆಡ್ ಕಿಂಗ್‌ಡಮ್, ರಷ್ಯಾ, ಹಾಗೂ ಇಸ್ರೇಲ್ ಸೇರಿದಂತೆ, ಬಹುತೇಕ ಎಲ್ಲ ಪ್ರಮುಖ ರಾಷ್ಟ್ರಗಳು ಮಹಿಳೆಯರಿಗೆ ತಮ್ಮ ಸೇನೆಯೊಳಗೆ ನಾಯಕತ್ವದ ಹುದ್ದೆಗಳನ್ನು ಹೊಂದಲು ಅವಕಾಶ ಕಲ್ಪಿಸುತ್ತವೆ. ಇದರಲ್ಲಿ ಅಧಿಕಾರಿಗಳು, ನಾನ್ ಕಮಿಷನ್ಡ್ ಅಧಿಕಾರಿಗಳು, ಯುದ್ಧದ ಪಡೆಗಳಲ್ಲಿನ ಪಾತ್ರಗಳು ಮತ್ತು ವಿಶೇಷ ಪಡೆಗಳಲ್ಲಿ ಸ್ಥಾನಗಳೂ ಸೇರಿವೆ.

ಭವಿಷ್ಯದ ಹಾದಿ

ನಾಯಕತ್ವದ ಹುದ್ದೆಗಳನ್ನು ಹೊಂದಿರುವ ಮಹಿಳೆಯರಿಗೆ ಭಾರತೀಯ ಸೇನೆ ಸೂಕ್ತ ತರಬೇತಿ ಮತ್ತು ಬೆಂಬಲ ನೀಡಿ, ಅವರು ಸಮರ್ಥವಾಗಿ ಮುನ್ನಡೆಸಲು ಸಾಧ್ಯ ಎನ್ನುವಂತೆ ಮಾಡಬೇಕಿದೆ.

ಭಾರತೀಯ ಸೇನೆ ಮಹಿಳೆಯರಿಗೆ ಇನ್ನೂ ಹೆಚ್ಚಿನ ಬೆಂಬಲ ನೀಡಿ, ಅವರನ್ನು ಸೇನೆಗೆ ಸೇರ್ಪಡೆಗೊಳಿಸಬೇಕು. ಆ ಮೂಲಕ ನಾಯಕತ್ವದ ಅರ್ಹತೆ ಹೊಂದಿರುವ ಸಾಕಷ್ಟು ಅಧಿಕಾರಿಗಳು ಸೇನೆಯಲ್ಲಿ ಇರುತ್ತಾರೆ.

ಅದರೊಡನೆ, ಭಾರತೀಯ ಸೇನೆ ತನ್ನ ಸೇನಾ ಸಂಸ್ಕೃತಿಯನ್ನು ಸ್ವಲ್ಪ ಬದಲಾಯಿಸಿಕೊಂಡು, ಮಹಿಳೆಯರನ್ನೂ ಒಳಗೊಂಡ ಸೇನೆಯನ್ನಾಗಿಸಿ, ಅವರ ಕುರಿತಾದ ಯಾವುದೇ ತಾರತಮ್ಯವನ್ನು ಹೋಗಲಾಡಿಸಲು ಪ್ರಯತ್ನಿಸಬೇಕು.

ಇದನ್ನೂ ಓದಿ:  ತ್ರಿಪುರಾದಲ್ಲಿ ಸಸ್ಪೆನ್ಸ್ ಅಂತ್ಯ! ಮಾಣಿಕ್ ಸಹಾ ಹೊಸ ಸಿಎಂ, ಪ್ರಮಾಣ ವಚನಕ್ಕೆ ಪ್ರಧಾನಿ ಮೋದಿ

ಅದರೊಡನೆ, ಭಾರತೀಯ ಸೇನೆ ಮಹಿಳಾ ಸೈನಿಕರಿಗೆ ಹೆಚ್ಚಿನ ಸೌಲಭ್ಯಗಳು ಮತ್ತು ಬೆಂಬಲವಾದ, ಮಕ್ಕಳನ್ನು ನೋಡಿಕೊಳ್ಳುವ ಸೌಲಭ್ಯ, ಮಾತೃತ್ವ ರಜೆ ಹಾಗೂ ಮಹಿಳೆಯರಿಗೆ ಬೇಕಾದ ಇತರ ಸೌಕರ್ಯಗಳನ್ನು ಒದಗಿಸುವ ಕುರಿತು ಯೋಚಿಸಬೇಕು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News