ನೀಲಕ್ಕಲ್: ಇತ್ತೀಚಿಗೆ ಸುಪ್ರಿಂಕೋರ್ಟ್ ಶಬರಿಮಲೈ ದೇವಸ್ಥಾನಕ್ಕೆ ಪ್ರವೇಶಿಸಲು ಮಹಿಳೆಯರಿಗೆ ಅವಕಾಶ ನೀಡಿದ ಹಿನ್ನಲೆಯಲ್ಲಿ ಹಲವು ಮಹಿಳೆಯರು ಅಯ್ಯಪ್ಪನ ಸನ್ನಿಧಿಗೆ ತೆರಳುತ್ತಿದ್ದರು. ಆದರೆ ಸ್ಥಳೀಯ ಪ್ರತಿಭಟನಾಕಾರರು ಮಾರ್ಗಮಧ್ಯದಲ್ಲಿ ಅಡ್ಡಿ ಪಡಿಸಿದ ಹಿನ್ನಲೆಯಲ್ಲಿ ಅವರ ಯಾತ್ರೆಗೆ ಅಡಚಣೆ ಉಂಟಾಗಿತ್ತು.
ಇದೀಗ ಪೊಲೀಸರ ಭದ್ರತೆಯಲ್ಲಿ ಆ ಹಲವು ಮಹಿಳೆಯರು ಅಯ್ಯಪ್ಪನ ಸನ್ನಿಧಿ ತಲುಪಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಪತ್ರಕರ್ತರ ಮೇಲೂ ಹಲ್ಲೆ ನಡೆಸಿದ್ದು ಕಾರು ಜಖಂ ಗೊಂಡಿದೆ.
ವೃತ್ತಿಯಲ್ಲಿ ಪತ್ರಕರ್ತೆಯಾಗಿರುವ ಕೇರಳದ ಲಿಬಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಆಕೆಯು ಶಬರಿಮಲೈ ದೇವಸ್ಥಾನಕ್ಕೆ ತೆರಳುವ ಕುರಿತಾಗಿ ಬರೆದುಕೊಂಡಿದ್ದರು. ಇದನ್ನು ತಿಳಿದ ಪ್ರತಿಭಟನಾಕಾರರು ಆಕೆಗೆ ಮಾರ್ಗ ಮಧ್ಯದಲ್ಲಿಯೇ ತಡೆಯೊಡ್ಡಿದರು.
ಇನ್ನೊಂದೆಡೆ ಮಾಧವಿ ಎನ್ನುವ ಆಂಧ್ರಪ್ರದೇಶದ ಮಹಿಳೆಗೂ ಸಹಿತ ಪ್ರತಿಭಟನಾಕಾರರು ತಡೆಯನ್ನೋಡ್ಡಿದರು.
ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶ ನಿಷೇಧಿಸಿರುವುದನ್ನು ವಿರೋಧಿಸಿ 2006ರ ಜನವರಿಯಲ್ಲಿ ಯಂಗ್ ಲಾಯರ್ಸ್ ಅಸೋಸಿಯೇಷನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಈ ಸಂಬಂಧಿಸಿದಂತೆ ವಿಚಾರಣೆ ನಡೆಸಲು 2017ರ ಅಕ್ಟೋಬರ್ 13ರಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠ ರಚಿಸಿತ್ತು. ಅರ್ಜಿ ವಿಚಾರಣೆ ಸಂದರ್ಭದಲ್ಲೂ ಮಹಿಳೆಯರ ನಿಷೇಧ ಕ್ರಮವನ್ನು ಪ್ರಶ್ನಿಸಿದ್ದ ಸಂವಿಧಾನ ಪೀಠ, ಮಹಿಳೆಯರ ಧಾರ್ವಿುಕ ಹಕ್ಕನ್ನು ಕಸಿದುಕೊಳ್ಳುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿತ್ತು. ಸೆ. 28ರಂದು ತೀರ್ಪು ಪ್ರಕಟಿಸಿದ್ದ ಸುಪ್ರೀಂಕೋರ್ಟ್ ಎಲ್ಲಾ ವಯೋಮಾನದ ಮಹಿಳೆಯರಿಗೂ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕೊಡಬೇಕು. ಧಾರ್ಮಿಕ ಆಚರಣೆ ಹೆಸರಿನಲ್ಲಿ ಲಿಂಗತಾರತಮ್ಯ ಮಾಡಬಾರದೆಂದು ಹೇಳಿದೆ. ಜೊತೆಗೆ ಪುರುಷರಿಗಿಂತ ಮಹಿಳೆಯರೇನೂ ಕಡಿಮೆ ಅಲ್ಲ ಎಂದೂ ಹೇಳಿತ್ತು.
ಸುಪ್ರೀಂಕೋರ್ಟ್ ನ ತೀರ್ಪಿಗೆ ತಲೆ ಭಾಗಿದ ಕೇರಳ ಸರ್ಕಾರ ತಾನು ಮರುಪರಿಶೀಲನೆ ಅರ್ಜಿಯನ್ನು ಸಲ್ಲಿಸುವುದಿಲ್ಲ ಮತ್ತು ದೇವಸ್ಥಾನಕ್ಕೆ ತೆರಳುವ ಮಹಿಳಾ ಭಕ್ತರಿಗೆ ಸೂಕ್ತ ರಕ್ಷಣೆ ಒದಗಿಸಲಾಗುವುದು ಎಂದು ತಿಳಿಸಿತ್ತು.
ಇದೀಗ ಪ್ರತಿಭಟನಾಕಾರರಿಂದ ತೊಂದರೆಗೆ ಸಿಲುಕಿದ್ದ ಇಬ್ಬರು ಮಹಿಳಾ ಭಕ್ತಾದಿಗಳಿಗೆ ರಕ್ಷಣೆ ಒದಗಿಸಿ ಅಯ್ಯಪ್ಪನ ಸನ್ನಿಧಿಗೆ ತಲುಪಿಸಲಾಗಿದೆ.