ಕಾಂಗ್ರೆಸ್ ಕುಟಿಲತೆ, ಕಪಟತನದ ಕಾಮಾಲೆ ಕಾಯಿಲೆಯಿಂದ ಬಳಲುತ್ತಿದೆ: ಎಚ್‍ಡಿಕೆ

ಈ ಕಾಂಗ್ರೆಸ್ ಮಹಾತ್ಮ ಗಾಂಧೀಜಿಯವರ ಕಾಲದ ಕಾಂಗ್ರೆಸ್ ಅಲ್ಲ, ಅಧಿಕಾರಕ್ಕಾಗಿ ಎಲ್ಲ ಅಡ್ಡದಾರಿ ಹಿಡಿದ ಪಕ್ಷ ಈ ಕಾಂಗ್ರೆಸ್, ಕಾಲಚಕ್ರಕ್ಕೆ ಸಿಲುಕಿ ಕೊರಗುತ್ತಾ ನೀತಿಗೆಟ್ಟ, ಲಜ್ಜೆಗೆಟ್ಟ, ಮತಿಗೆಟ್ಟ ಕಾಂಗ್ರೆಸ್ ಎಂದು ಎಚ್‍.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Written by - Puttaraj K Alur | Last Updated : Mar 30, 2023, 04:12 PM IST
  • ಒಳಗೊಂದು ಮುಖ, ಹೊರಗೊಂದು ಮುಖವುಳ್ಳ ಮುಖೇಡಿ ಪಕ್ಷವೇ ಕಾಂಗ್ರೆಸ್
  • ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಸುಳ್ಳುಗಳ ಸರಮಾಲೆಯನ್ನೇ ಪೋಣಿಸುತ್ತಿದೆ
  • ಕೈ ಕೊಡುವ ಚಾಳಿ ಕಾಂಗ್ರೆಸ್ ಜನ್ಮಕ್ಕೆ ಅಂಟಿದ ಆಜನ್ಮ ಜಾಡ್ಯವೆಂದು ಟೀಕಿಸಿದ ಎಚ್‍ಡಿಕೆ
ಕಾಂಗ್ರೆಸ್ ಕುಟಿಲತೆ, ಕಪಟತನದ ಕಾಮಾಲೆ ಕಾಯಿಲೆಯಿಂದ ಬಳಲುತ್ತಿದೆ: ಎಚ್‍ಡಿಕೆ title=
ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು: ಕಾಂಗ್ರೆಸ್ ಕುಟಿಲತೆ, ಕಪಟತನದ ಕಾಮಾಲೆ ಕಾಯಿಲೆಯಿಂದ ಬಳಲುತ್ತಿದೆ ಎಂದು ಮಾಜಿ ಸಿಎಂ ಎಚ್‍.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. ಈ ಬಗ್ಗೆ ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಕೈ ಕೊಡುವ ಚಾಳಿ ಕಾಂಗ್ರೆಸ್ ಜನ್ಮಕ್ಕೆ ಅಂಟಿದ ಆಜನ್ಮ ಜಾಡ್ಯ. ಒಳಗೊಂದು ಮುಖ, ಹೊರಗೊಂದು ಮುಖವುಳ್ಳ ಮುಖೇಡಿ ಪಕ್ಷವೇ ಕಾಂಗ್ರೆಸ್. ಅಂಥ ಕಾಂಗ್ರೆಸ್, ಚುನಾವಣೆ ಹೊತ್ತಿಗೆ ಸುಳ್ಳುಗಳ ಸರಮಾಲೆಯನ್ನೇ ಪೋಣಿಸುತ್ತಿದೆ!!’ ಎಂದು ಕುಟುಕಿದ್ದಾರೆ.

‘ಪ್ರಧಾನಿಯಾಗಿದ್ದ ಕನ್ನಡದ ಹೆಮ್ಮೆಯ ಪುತ್ರನನ್ನು ಕೆಳಗೆಳೆದ ಕಿರಾತಕ ಪಕ್ಷ, ಜಾತ್ಯತೀತತೆ ಎನ್ನುತ್ತಲೇ ಜಾತಿಗಳ ನಡುವೆ ಕಿಚ್ಚಿಟ್ಟ ಸೋಗಲಾಡಿ ಪಕ್ಷ,  ಅಹಿಂದ ಎನ್ನುತ್ತಲೇ ಬಿಜೆಪಿ ಹಿಂದೆಬಿದ್ದು ಬೇಳೆ ಬೇಯಿಸಿಕೊಳ್ಳುತ್ತಿರುವ ಪಕ್ಷ; ಅಂಥ ಕಳಂಕಿತ ಪಕ್ಷ ಜಾತ್ಯತೀತ ಜನತಾದಳದ ಜಾತ್ಯತೀತತೆ ಬಗ್ಗೆ ಕೀರಲು ದನಿಯಲ್ಲಿ ಕಿರುಚುತ್ತಿದೆ. ಇಡೀ ದೇಶದ ಉದ್ದಗಲಕ್ಕೂ ಜಾತ್ಯತೀತ ಪಕ್ಷಗಳ ಮಾರಣಹೋಮ ನಡೆಸಿ, ಈಗ ಅಳಿವು ಉಳಿವಿಗಾಗಿ ಅದೇ ಪ್ರಾದೇಶಿಕ ಪಕ್ಷಗಳ ಬಾಲವಾಗಿ ಉಸಿರಾಡುತ್ತಿದೆ ಕಾಂಗ್ರೆಸ್. ಇನ್ನೂ ಹಳೆಯ ಅಮಲಿನಲ್ಲಿಯೇ ತೇಲುತ್ತಿದೆ ಆ ಪಕ್ಷಕ್ಕೆ ವರ್ತಮಾನದ ವರ್ತನೆಯ ಅರಿವೇ ಇಲ್ಲ’ವೆಂದು ಎಚ್‍ಡಿಕೆ ಕಿಡಿಕಾರಿದ್ದಾರೆ.

‘ಈ ಕಾಂಗ್ರೆಸ್ ಮಹಾತ್ಮ ಗಾಂಧೀಜಿಯವರ ಕಾಲದ ಕಾಂಗ್ರೆಸ್ ಅಲ್ಲ, ಅಧಿಕಾರಕ್ಕಾಗಿ ಎಲ್ಲ ಅಡ್ಡದಾರಿ ಹಿಡಿದ ಪಕ್ಷ ಈ ಕಾಂಗ್ರೆಸ್, ಕಾಲಚಕ್ರಕ್ಕೆ ಸಿಲುಕಿ ಕೊರಗುತ್ತಾ ನೀತಿಗೆಟ್ಟ, ಲಜ್ಜೆಗೆಟ್ಟ, ಮತಿಗೆಟ್ಟ ಕಾಂಗ್ರೆಸ್, ಕರ್ನಾಟಕದಲ್ಲಿ ಮತಗೇಡಿ ಬಿಜೆಪಿಯ ಬಾಲಂಗೋಚಿ ಆಗಿರುವುದು ಸುಳ್ಳಾ? ಸರ್ಕಾರಗಳ ಸುಪಾರಿ ಕಿಲ್ಲರ್ ಅವರನ್ನೇ ಪೋಷಿಸಿ ಪೊರೆಯುತ್ತಿರುವ, ಇನ್ನೊಬ್ಬರ ಬಗ್ಗೆ ಹೊಟ್ಟೆಕಿಚ್ಚು ಪಡುವ ಕೀಳುತನ ಎಂಬುದು ಕಾಂಗ್ರೆಸ್ ಪಕ್ಷಕ್ಕೆ ಅಂಟಿದ ಬಾಲಗ್ರಹ ಪೀಡೆ. ಅಧಿಕೃತ ಪ್ರತಿಪಕ್ಷವಾಗಿ ಹಗರಣಗಳ ಆಡಂಬೋಲವಾದ ಬಿಜೆಪಿ ಸರ್ಕಾರದ ವಿರುದ್ಧ ಯಕಶ್ಚಿತ್ ಒಂದು ದಾಖಲೆಯನ್ನೂ ಬಿಡುಗಡೆ ಮಾಡಲು ಯೋಗ್ಯತೆ ಇಲ್ಲದ ಪಕ್ಷ ಕಾಂಗ್ರೆಸ್’ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ಇದನ್ನೂ ಓದಿ: ZEE NEWS-MATRIZE Opinion Poll: ಕರ್ನಾಟಕದಲ್ಲಿ ಮತ್ತೊಮ್ಮೆ ಅತಂತ್ರ ಸರ್ಕಾರ ..!

‘ಭ್ರಷ್ಟ ಬಿಜೆಪಿ ವಿರುದ್ಧ ಸರಣಿ ದಾಖಲೆಗಳನ್ನೇ ಇಟ್ಟ ಜೆಡಿಎಸ್, ಬಿಜೆಪಿ ಅಧಿಕಾರಸ್ಥರ ಸರಣಿಜೈಲು ಪರೇಡ್‍ಗೆ ಕಾರಣವಾಗಿದ್ದು ಇತಿಹಾಸ. ಆಗ ಕಾಂಗ್ರೆಸ್ ಎಲ್ಲಿತ್ತು? ಅಂದು ಬಿಜೆಪಿ ಜೊತೆ ಅಡ್ಜಸ್ಟ್ ಆಗಿದ್ದು ಸುಳ್ಳೇ? ಕದ್ದು, ಕಣ್ಮುಚ್ಚಿ ಹಾಲು ಕುಡಿದರೆ ಗೊತ್ತಾಗುವುದಿಲ್ಲವೇ? ಕಳ್ಳಬೆಕ್ಕಿನ ಕಥೆ ಬೇರೆ ಬಿಡಿಸಿ ಹೇಳಬೇಕೆ? ಜಗತ್ತಿಗೆ ಮಾದರಿಯಾದ ಭಾರತದ ಪ್ರಜಾಪ್ರಭುತ್ವಕ್ಕೆ ಶಾಶ್ವತ ಕಳಂಕ ಮೆತ್ತಿದ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಮಹೋನ್ನತ ಆಶಯಕ್ಕೆ ಕುಣಿಕೆ ಬಿಗಿದ ‘ಆಪರೇಶನ್ ಕಮಲ’ ಎಂಬ ಬಿಜೆಪಿಯ ಅಸಹ್ಯದಲ್ಲಿ ಅಭ್ಯಂಜನ ಮಾಡಿದವರು ಯಾರಯ್ಯ?’ ಎಂದು ಎಚ್‍ಡಿಕೆ ಪ್ರಶ್ನಿಸಿದ್ದಾರೆ.

‘2018ರಲ್ಲಿ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರ್ಕಾರದ ಹತ್ಯೆಗೆ ಸುಪಾರಿ ಸ್ವೀಕರಿಸಿದ 'ಸುಪಾರಿ ಸಿದ್ದಪುರುಷರು' ಯಾವ ಪಕ್ಷದವರು? ಕಲಾಪದಲ್ಲಿ ವೀರಾವೇಶ, ಕಲಾಪದಿಂದ ಕಾಲು ಹೊರಗಿಟ್ಟ ತಕ್ಷಣ ಅದು ಸಶೇಷ!! ಇದಲ್ಲವೇ ಸ್ವಯಂಘೋಷಿತ ಸೆಕ್ಯೂಲರ್ ಪಕ್ಷದ ಭೂಷಣ? ಸತ್ಯವನ್ನೇ ಕೊಲ್ಲುವ ಹುಂಬತನ ಏಕೆ? 2008ರ ‘ಆಪರೇಷನ್ ಕಮಲ’ದ ಉಪ ಚುನಾವಣೆ. ಕಾಂಗ್ರೆಸ್ ಅನ್ನು ಹಳ್ಳ ಹಿಡಿಸಿ ಮರ್ಲಿಕಾರ್ಜುನ್ ಖರ್ಗೆಯವರನ್ನು ಪ್ರತಿಪಕ್ಷ ಸ್ಥಾನದಿಂದ ಹೊರದಬ್ಬಲು ಬಿ.ಎಸ್.ಯಡಿಯೂರಪ್ಪರ ಜೊತೆ ನೇರ ಡೀಲಿಗಿಳಿದು ಕೋಟಿ ಕೋಟಿ ಸುಪಾರಿ ಪಡೆದು ಇಡಗಂಟು ಮಾಡಿಕೊಂಡವರ ಬಗ್ಗೆ ಕಾಂಗ್ರೆಸ್ ಅಸಹನೀಯ ಮೌನವೇಕೆ? ಆಗ ಎಲ್ಲಿತ್ತು ಜಾತ್ಯತೀತತೆ? ಆ ದಲಿತ ನಾಯಕ ಮಾಡಿದ ಅನ್ಯಾಯವೇನು?’ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

‘ಧರ್ಮ-ಜಾತಿಗಳ ನಡುವೆ ವೈಷಮ್ಯದ ವಿಷಬೀಜ ಬಿತ್ತಿದ, ಹಗರಣಗಳಲ್ಲಿ ಮುಳುಗೇಳುತ್ತಿರುವ ಕಡುಕೆಟ್ಟ ಭ್ರಷ್ಟ ಈ ಬಿಜೆಪಿ ಸರ್ಕಾರ ಬರಲು ಕಾರಣರು ಯಾರಯ್ಯ? ಮೇಲೆ ಮಾತ್ರ ಜಾತ್ಯತೀತ, ಒಳಗೆ ಮಾತ್ರ ಎಲ್ಲಕ್ಕೂ ಅತೀತ! ಇದು ಯಾವ ಸೀಮೆಯ ತತ್ತ್ವ ಸಿದ್ದಾಂತ? ಇನ್ನೆಷ್ಟು ದಿನ ಈ ಟೋಪಿ ರಾಜಕಾರಣ? ರಾಜಕೀಯದಲ್ಲಿ ಕಳ್ಳ ಸಂಸಾರ ಎನ್ನುವುದು ಕಾಂಗ್ರೆಸ್ ಪಕ್ಷದ ಆವಿಷ್ಕಾರ. ಅಷ್ಟೇ ಅಲ್ಲ ಇನ್ನೊಬ್ಬರ ಕಳ್ಳ ಸಂಸಾರಕ್ಕೆ ಕೀಲಿ ಕೊಟ್ಟು ಮನೆಮುರುಕ ಕೆಲಸ ಮಾಡುವುದೂ ಕಾಂಗ್ರೆಸ್ ಖಯಾಲಿ. ಕರ್ನಾಟಕದಲ್ಲಿ ಬಿಜೆಪಿ-ಕಾಂಗ್ರೆಸ್ ಭಾಯಿ ಭಾಯಿ; ಇದೇ ಸತ್ಯ. ಅಲ್ಲ ಎನ್ನುವ ಅಚಲ ನೈತಿಕತೆ ಆ ಪಕ್ಷಕ್ಕೆ ಇದೆಯಾ?’ ಎಂದು ಎಚ್‍ಡಿಕೆ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಕಾರ್ಯನಿರತ ಪತ್ರಕರ್ತರಿಗೆ ಅಂಚೆ ಮತದಾನ ಮಾಡಲು ಅವಕಾಶ ನೀಡಿದ ಚುನಾವಣಾ ಆಯೋಗ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News