Karnataka Assembly Election: ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಟಿಕೆಟ್?

Karnataka Assembly Election 2023: ಬರ್ತಿದೆ… ಬರ್ತಿದೆ..  ಬರ್ತಿದೆ… ಬರ್ತಿಲ್ಲ… ಬರ್ತಿಲ್ಲ ಎನ್ನುವ ಟ್ರೋಲ್ ಒಂದು ಹರಿದಾಡುವಷ್ಟರ ಮಟ್ಟಿಗೆ ಶಿವಮೊಗ್ಗ ಸಿಟಿ ಕ್ಷೇತ್ರ ಕುತೂಹಲ ಮೂಡಿಸಿದೆ. ಬರೋಬ್ಬರಿ 222 ಕ್ಷೇತ್ರಗಳಿಗೂ ಅಳೆದು ಮೊಗೆದು ಟಿಕೆಟ್ ಕೊಟ್ಟಿರುವ ಬಿಜೆಪಿಗೆ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲವೇ ? ಈ ಪ್ರಶ್ನೆಗೆ ಬಿಜೆಪಿ ಮೂಲಗಳಲ್ಲಿ ಬೇರೆಯದ್ದೆ ವಿಚಾರ ಕೇಳಿಬರುತ್ತಿದೆ. 

Written by - Yashaswini V | Last Updated : Apr 18, 2023, 03:36 PM IST
  • ಇವತ್ತು ಸಂಜೆಯ ಹೊತ್ತಿಗೆ ಬಿಜೆಪಿಯ ಟಿಕೆಟ್ ಯಾರಿಗೆ ಎನ್ನುವ ಕುತೂಹಲಕ್ಕೆ ತೆರೆಬೀಳುವ ಸಾಧ್ಯತೆ ಇದೆ.
  • ಅಲ್ಲದೆ ಹುಬ್ಬಳ್ಳಿಗೆ ಬರುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಶಿವಮೊಗ್ಗಕ್ಕೂ ಬರುತ್ತಾರೆ ಎಂಬ ಸುದ್ದಿಗಳು ಬಿಜೆಪಿವಲಯದಲ್ಲಿ ಕೇಳಿಬಂದಿತ್ತು.
  • ಆದರೆ ಕೊನೆಕ್ಷಣದಲ್ಲಿ ಈ ಕಾರ್ಯಕ್ರಮ ಕ್ಯಾನ್ಸಲ್ ಆಗಿದೆ ಎಂಬ ಮಾಹಿತಿ ಲಭ್ಯವಾಗುತ್ತಿದೆ.
Karnataka Assembly Election: ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಟಿಕೆಟ್?  title=

Karnataka Assembly Election: ಶಿವಮೊಗ್ಗ ಬಿಜೆಪಿ ಟಿಕೆಟ್ ಯಾರಿಗೆ ಈ ಪ್ರಶ್ನೆ ಸ್ವತಃ ಬಿಜೆಪಿ ಕಚೇರಿಯಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಅವರಿಗಂತೆ ಇವರಿಗಂತೆ ಎಂಬ ಸಮಾಲೋಚನೆಗಳು ಜೋರಾಗಿ ನಡೆಯುತ್ತಿದೆ. ಆದರೆ ಇವರಿಗೆ ಫೈನಲ್ ಎನ್ನುವುದು ಬಿಜೆಪಿ ನಾಯಕರಿಗೂ ಗೊತ್ತಾಗುತ್ತಿಲ್ಲ. ಮೊನ್ನೆ ಚನ್ನಬಸಪ್ಪ , ನಿನ್ನೆ ಕೆ.ಇ.ಕಾಂತೇಶ್ ಇವತ್ತು ಮತ್ತೆ ಕೆ.ಎಸ್.ಈಶ್ವರಪ್ಪನವರ ಹೆಸರುಗಳು ಬಿಜೆಪಿಯಲ್ಲಿ ದಟ್ಟವಾಗಿ ಕೇಳಿಬರುತ್ತಿದೆ. ಇತ್ತ ಬಿ.ಎಸ್. ಯಡಿಯೂರಪ್ಪನವರ ಬಣದಲ್ಲಿ ಜ್ಯೋತಿ ಪ್ರಕಾಶ್ ಮತ್ತು ದತ್ತಾತ್ರಿಯವರ ಹೆಸರುಗಳು ಓಡಾಡುತ್ತಿದೆ. ಕೆ.ಎಸ್ . ಈಶ್ವರಪ್ಪನವರು ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದರೂ ಸಹ, ಬದಲಾದ ಬಿಜೆಪಿಯ ರಾಜಕೀಯ ಸನ್ನಿವೇಶದಲ್ಲಿ ಅವರ ನಿರ್ಧಾರವನ್ನು ಹೈಕಮಾಂಡೇ ಬದಲಾಯಿಸಿದರೂ ಅಚ್ಚರಿಯಿಲ್ಲ ಎಂಬ ಮಾತುಗಳು ರಾಜಕೀಯ ಪಡಸಾಲೆಗಳಲ್ಲಿ ಕೇಳಿಬರುತ್ತಿದೆ. 

ಅಚ್ಚರಿಯ ಕ್ಯಾಂಡಿಡೇಟ್ ಆಯ್ಕೆ!
ಇನ್ನೊಂದೆಡೆ ಶಿವಮೊಗ್ಗ ಬಿಜೆಪಿ ಮುಖಂಡರಿಗೆ ಬಿಜೆಪಿ ಹೈಕಮಾಂಡ್ ನ ನಿಲುವು ಏನು? ಯಾರನ್ನ ಅಭ್ಯರ್ಥಿಯನ್ನಾಗಿಸುತ್ತೆ ಎಂಬುದು ಸ್ಪಷ್ಟವಾಗಿಲ್ಲ. ಇರುವವರೆನ್ನೆಲ್ಲಾ ಬಿಟ್ಟು ಭವಿಷ್ಯದ ರಾಜಕಾರಣ ಹೀರೋವನ್ನು ಶಿವಮೊಗ್ಗದಿಂದ ಆಯ್ಕೆ ಮಾಡಿಸುತ್ತಾರಾ? ಹೀಗೊಂದು ಅನುಮಾನ ಕೂಡ ಸ್ಥಳೀಯ ಮುಖಂಡರನ್ನು ಕಾಡುತ್ತಿದೆ. ಚಿಕ್ಕದೊಂದು ಸುಳಿವನ್ನು ಸಹ ಹೈಕಮಾಂಡ್ ಬಿಟ್ಟುಕೊಡುತ್ತಿಲ್ಲ ಎಂಬುದು ಶಿವಮೊಗ್ಗ ಬಿಜೆಪಿ ಮುಖಂಡರಲ್ಲಿ ಅಚ್ಚರಿಯ ಆಯ್ಕೆಯ ಅವಕಾಶದ ಮಂಥನಕ್ಕೆ ದಾರಿಮಾಡಿಕೊಟ್ಟಿದೆ. 

ಶಿವಮೊಗ್ಗಕ್ಕೇ ಬರುತ್ತಾರಾ ಜೆಪಿ ನಡ್ಡಾ!
ಸದ್ಯ  ಲಭ್ಯವಿರುವ ಮೂಲಗಳ ಪ್ರಕಾರ, ಇವತ್ತು ಸಂಜೆಯ ಹೊತ್ತಿಗೆ ಬಿಜೆಪಿಯ ಟಿಕೆಟ್ ಯಾರಿಗೆ ಎನ್ನುವ ಕುತೂಹಲಕ್ಕೆ ತೆರೆಬೀಳುವ ಸಾಧ್ಯತೆ ಇದೆ. ಅಲ್ಲದೆ ಹುಬ್ಬಳ್ಳಿಗೆ ಬರುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಜೆಪಿ ನಡ್ಡಾ ಶಿವಮೊಗ್ಗಕ್ಕೂ ಬರುತ್ತಾರೆ ಎಂಬ ಸುದ್ದಿಗಳು ಬಿಜೆಪಿವಲಯದಲ್ಲಿ ಕೇಳಿಬಂದಿತ್ತು. ಆದರೆ ಕೊನೆಕ್ಷಣದಲ್ಲಿ ಈ ಕಾರ್ಯಕ್ರಮ ಕ್ಯಾನ್ಸಲ್ ಆಗಿದೆ ಎಂಬ ಮಾಹಿತಿ ಲಭ್ಯವಾಗುತ್ತಿದೆ.  

ಇದನ್ನೂ ಓದಿ- Karnataka Election 2023: ಒಂದೇ ಕ್ಷೇತ್ರಕ್ಕೆ ಸತಿ-ಪತಿಗಳಿಂದ ನಾಮ ಪತ್ರ ಸಲ್ಲಿಕೆ..!

ಆಯನೂರು ಮಂಜುನಾಥ್ ನಡೆ ಯಾರ ಕಡೆ?
ಎದುರಾಳಿಗಳನ್ನು ನೋಡಿಕೊಂಡು ಶಿವಮೊಗ್ಗ ನಗರದಲ್ಲಿ ಮುಖ್ಯ ಆಕಾಂಕ್ಷಿಗಳ ಕಣಕ್ಕಿಳಿಯಲು ತಿರ್ಮಾನಿಸಿದ್ದಾರೆ. ಆದರೆ ಎದುರಾಳಿ ಯಾರು ಎಂಬುದೇ ತೀರ್ಮಾನವಾಗುತ್ತಿಲ್ಲ. ಇದೇ ರೀತಿಯಲ್ಲಿ ಎದುರಾಳಿ ಯಾರು ಎಂದು ಕಾದು ನೋಡುತ್ತಿರುವ ಆಯನೂರು ಮಂಜುನಾಥ್ ರವರು ಕೂಡ ಇವತ್ತು ಸಂಜೆಯೊಳಗೆ ತಮ್ಮ ತೀರ್ಮಾನ ತಿಳಿಸುವ ಸಾಧ್ಯತೆ ಇದೆ. ಸದ್ಯ ಅನಾರೋಗ್ಯದಿಂದ ವಿಶ್ರಾಂತಿ ಪಡೆಯುತ್ತಿರುವ ಅವರು, ತಮ್ಮ ಸ್ಪರ್ಧೆ ಪಕ್ಷೇತರವೇ? ಅಥವಾ ಜೆಡಿಎಸ್ನಿಂದಲೇ ಎಂಬುದನ್ನ ಫೈನಲ್ ಮಾಡಬೇಕಿದೆ. 

ಕೆಬಿ ಪ್ರಸನ್ನಕುಮಾರ್ ಸ್ಪರ್ಧೆ ಮಾಡುತ್ತಾರಾ? 
ಕಾದು ನೋಡುವ ತಂತ್ರದಲ್ಲಿ ಕಾಂಗ್ರೆಸ್ ಉಳಿದ ಪಕ್ಷಗಳಿಗಿಂತಲೂ ಬೇಗ ತೀರ್ಮಾನ ತೆಗೆದುಕೊಂಡಿದೆ. ಆದರೆ ಎಚ್.ಸಿ. ಯೋಗೇಶ್ ರನ್ನು ಅಭ್ಯರ್ಥಿಯನ್ನಾಗಿಸಿರುವ ಕಾಂಗ್ರೆಸ್ನಲ್ಲಿ ಅಸಮಾಧಾನ ಬುಗ್ಗೆ ಟೈಯರ್ ಬೆಂಕಿಯಾಗಿ ಹೊರಕ್ಕೆ ಬರುತ್ತಿದೆ. ಇದಕ್ಕೆ ಪೂರಕವಾಗಿ ಮಾಜಿ ಎಂಎಲ್ಎ ಕೆಬಿ ಪ್ರಸನ್ನಕುಮಾರ್ ಕೂಡ  ಅನುಕೂಲಕರ ವಾತಾವರಣ ಸೃಷ್ಟಿಯಾದರೇ ಸ್ಪರ್ಧಿಸುವ ಇರಾದೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಮತ್ತದೆ ಬಲ್ಲ ಮೂಲಗಳ ಪ್ರಕಾರ, ಜೆಡಿಎಸ್ ನಿಂದ ಅವಕಾಶ ಸಿಕ್ಕರೆ ಕೆಬಿಪಿ ಸ್ಪರ್ಧೆ ಮಾಡುತ್ತಾರೆ. ಇದಕ್ಕಾಗಿ ಚರ್ಚೆಗಳು ನಡೆಯುತ್ತಿವೆ ಎಂಬ ವರದಿಗಳು ಲಭ್ಯವಾಗುತ್ತಿದೆ. 

ಜೆಡಿಎಸ್ ನತ್ತ ಈ ನಾಯಕರ ಚಿತ್ತ: 
ಕಾಂಗ್ರೆಸ್ ಟಿಕೆಟ್ ಘೋಷಣೆಯಾದ್ದರಿಂದ ಬಿಜೆಪಿ ಬಂಡಾಯ ಹಾಗು ಕಾಂಗ್ರೆಸ್ ಬಂಡಾಯಕ್ಕೆ ಜೆಡಿಎಸ್ ಒಂದೇ ವೇದಿಕೆ ಎಂಬಂತಾಗಿದೆ. ಅತ್ತ ಆಪ್ ಪಕ್ಷದ ಅಭ್ಯರ್ಥಿಯು ನಾಮಪತ್ರ ಸಲ್ಲಿಸಿದ್ದು, ಅಲ್ಲಿಯು ವೇದಿಕೆ ಖಾಲಿಯಿಲ್ಲ. ಸದ್ಯ ಜೆಡಿಎಸ್ನಲ್ಲಿ ಅಭ್ಯರ್ಥಿಯನ್ನು ಘೋಷಿಸಿಲ್ಲ. ಹೀಗಾಗಿ ಅತ್ತ ಕಡೆ ತಮ್ಮ ನಡೆಯನ್ನ ಆಯನೂರು ಮಂಜುನಾಥ್  ಕೂಡ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಚಿಕ್ಕಮಗಳೂರಿನ ನಾಯಕರೊಬ್ಬರ ಮೂಲಕ ತತ್ಸಂಬಂಧ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. 

ಇದನ್ನೂ ಓದಿ- ಹ್ಯಾಟ್ರಿಕ್ ಶಾಸಕ ನರೇಂದ್ರ 17 ಕೋಟಿ ಒಡೆಯ: ಮಗನಿಗಿದೆ 1.7 ಲಕ್ಷ ಸಾಲ

ಇಷ್ಟೆಲ್ಲಾ ಬೆಳವಣಿಗೆಯ ನಡುವೆಯು ಶಿವಮೊಗ್ಗ ನಗರದಲ್ಲಿ  ಇವರುಗಳು ಚುನಾವಣೆ ಸ್ಪರ್ಧೆ ಮಾಡುತ್ತಾರೆ ಎಂದು ಸ್ಪಷ್ಟವಾಗಿ ಹೇಳುವಂತಿಲ್ಲ. ಬಿಜೆಪಿ ಟಿಕೆಟ್ ಘೋಷಣೆಯ ಕ್ಷಣಗಣನೆಯಲ್ಲಿ ಇನ್ನೆಷ್ಟು ಅಚ್ಚರಿಗಳು ಸಂಭವಿಸಬಹುದು ಎಂಬುದು ನಿರೀಕ್ಷೆ ಸಿಗದ ಉತ್ತರ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News