ನೀವು ಆಲೂಗಡ್ಡೆ ಬೆಳೆಗಾರರೇ? ಹಾಗಿದ್ದಲ್ಲಿ ಈ ಸಂರಕ್ಷಣಾ ಕ್ರಮಗಳನ್ನು ಅನುಸರಿಸಲೇಬೇಕು..!

ನೀವು ಆಲೂಗಡ್ಡೆಯನ್ನು ಬೆಳಯುತ್ತಿದ್ದರೆ ಈ ಕೆಳಗಿನಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

Last Updated : Nov 12, 2020, 08:37 PM IST
 ನೀವು ಆಲೂಗಡ್ಡೆ ಬೆಳೆಗಾರರೇ? ಹಾಗಿದ್ದಲ್ಲಿ ಈ ಸಂರಕ್ಷಣಾ ಕ್ರಮಗಳನ್ನು ಅನುಸರಿಸಲೇಬೇಕು..!  title=
ಸಾಂದರ್ಭಿಕ ಚಿತ್ರ

ಬೆಂಗಳೂರು: ನೀವು ಆಲೂಗಡ್ಡೆಯನ್ನು ಬೆಳಯುತ್ತಿದ್ದರೆ ಈ ಕೆಳಗಿನಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

ಬೆಳೆ ಬಿತ್ತಿದ 20-25 ದಿನಗಳ ಸಮಯಕ್ಕೆ 1 ಲೀ. ನೀರಿಗೆ 3 ಗ್ರಾಂ ಮ್ಯಾಂಕೋಜೆಬ್ ದ್ರಾವಣವನ್ನು ಗಿಡದ ಎಲೆಗಳ ಮೇಲ್ಭಾಗ, ಕೆಳಭಾಗ ಹಾಗೂ ಇತರ ಎಲ್ಲಾ ಭಾಗಗಳಿಗೂ ತಲುಪುವಂತೆ ಸಿಂಪಡಿಸಬೇಕು. 35-40 ದಿನಗಳ ನಂತರ 1 ಲೀಟರ್ ನೀರಿಗೆ 3 ಗ್ರಾಂ ಮ್ಯಾಂಕೋಜೆಬ್ ಮತ್ತು 2.7 ಮಿ.ಲೀ ಡೈಕೋಫಾಲ್ ದ್ರಾವಣವನ್ನು ಗಿಡದ ಎಲೆಗಳ ಮೇಲ್ಭಾಗ, ಕೆಳಭಾಗ ಹಾಗೂ ಇತರ ಎಲ್ಲಾ ಭಾಗಗಳಿಗೂ ತಲುಪುವಂತೆ ಸಿಂಪಡಿಸಬೇಕು.

ಇದೇ ಸಿಂಪರಣೆಯನ್ನು 75-80 ದಿನಗಳ ನಂತರ ಪುನರಾವರ್ತಿಸಿ. 55-60 ದಿನಗಳ ನಂತರ 1 ಲೀಟರ್ ನೀರಿಗೆ 2.5 ಗ್ರಾಂ ಸೈಮೋಕ್ಸಾನಿಲ್ ಮತ್ತು ಮ್ಯಾಂಕೋಜೆಬ್ ದ್ರಾವಣವನ್ನು ಗಿಡದ ಎಲೆಗಳ ಮೇಲ್ಭಾಗ, ಕೆಳಭಾಗ ಹಾಗೂ ಇತರ ಎಲ್ಲಾ ಭಾಗಗಳಿಗೂ ತಲುಪುವಂತೆ ಸಿಂಪಡಿಸಬೇಕು.

ಈ ಮಧ್ಯೆ ಯಾವುದೇ ಹಂತದಲ್ಲಾದರೂ ಅಂಗಮಾರಿ ರೋಗದ ಲಕ್ಷಣಗಳು ಕಂಡುಬಂದರೆ, ಮೊದಲನೇ ಸಿಂಪರಣೆಯಾಗಿ ಕ್ಲೋರೋಥೆಲೋನಿಲ್ (ಕವಚ್) 2 ಮಿ.ಲೀ/ಲೀ. ಅಥವಾ ಮ್ಯಾಂಕೋಜೆಬ್ 3.0 ಗ್ರಾಂ/ಲೀ. ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ಎರಡನೇ ಸಿಂಪರಣೆಯಾಗಿ ಸೈಮೋಕ್ಸಾನಿಲ್ + ಮ್ಯಾಂಕೋಜೆಬ್ (ಮ್ಯಾಕ್ಸಿಮೇಟ್/ಕರ್ಜೇಟ್) 2.5 ಗ್ರಾಂ/ಲೀ. ಅಥವಾ ಡೈಮೀಥೋಮಾರ್ಫ್ (ಅಕ್ರೋಬ್ಯಾಟ್) 1 ಗ್ರಾಂ/ಲೀ. ಅನ್ನು ಪ್ರತಿ ಲೀಟರ್ ಬೆರೆಸಿ, ಆ ದ್ರಾವಣವನ್ನು ಪ್ರತಿ 7 ದಿನಗಳ ಅಂತರದಲ್ಲಿ ರೋಗ ಹತೋಟಿಯಾಗುವವರೆಗೆ ಒಂದೇ ಔಷಧವನ್ನು ಪದೇ ಪದೇ ಬಳಸದೆ ಔಷಧಿಗಳನ್ನು ಬದಲಾಯಿಸಿ ಸಿಂಪರಣೆಯನ್ನು ಕಡ್ಡಾಯವಾಗಿ ಮಾಡಬೇಕು.

ರೋಗದ ತೀವ್ರತೆ ಜಾಸ್ತಿಯಾದಲ್ಲಿ ಮೂರನೇ ಸಿಂಪರಣೆಯಾಗಿ ಸೆಕ್ಟಿನ್ 2-3 ಗ್ರಾಂ ಅಥವಾ ರಿಡೋಮಿಲ್ ಎಂ.45 2 ಗ್ರಾ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ಆಲೂಗಡ್ಡೆಯಲ್ಲಿ ನುಸಿ (ಕೆಂಪುಹೇನು) ಬಾಧೆ ನಿರ್ವಹಣೆಗೆ ಡೈಕೋಫಾಲ್ 1 ಮಿ.ಲೀ/ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ. ಒಂದು ವಾರದ ನಂತರ 3 ಗ್ರಾಂ ನೀರಿನಲ್ಲಿ ಕರಗುವ ಗಂಧಕದ ಪುಡಿಯನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಎಲೆಗಳ ಹಿಂಭಾಗಕ್ಕೆ ಸಿಂಪಡಿಸಬೇಕು.

ಪ್ರತಿ ಸಿಂಪರಣೆಯಲ್ಲಿ ಔಷಧಿಗಳ ಜೊತೆಗೆ ಗಮ್/ಅಂಟನ್ನು 0.5 ಮಿ.ಲೀ/ 1ಲೀ. ನೀರಿನಲ್ಲಿ ಬೆರೆಸಿ ಕಡ್ಡಾಯವಾಗಿ ಸಿಂಪರಣೆ ಮಾಡುವುದು. ಆಲೂಗಡ್ಡೆ ಬೆಳೆಗೆ ತಗಲುವ ಕೊನೆ ಅಂಗಮಾರಿ ರೋಗದ ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆ / ತೋಟಗಾರಿಕೆ ವಿಶ್ವವಿದ್ಯಾನಿಲಯ ಹಾಗೂ ಸಂಶೋಧನಾ ಕೇಂದ್ರ ಮತ್ತು ಕೃಷಿ ವಿಜ್ಞಾನ ಕೇಂದ್ರ, ಕೋಲಾರ ರವರು ನೀಡಿರುವ ಹತೋಟಿ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7829512236, ತಾಲ್ಲೂಕು ಮಟ್ಟದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಅಥವಾ ಜಿಲ್ಲಾ ಮಟ್ಟದಲ್ಲಿ ತೋಟಗಾರಿಕೆ ಉಪ ನಿರ್ದೇಶಕರು ಹಾಗೂ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ಕೋಲಾರ ರವರನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

Trending News